ಹಿಂದುತ್ವ ಬಹುಸಂಖ್ಯಾತವಾದದ ಬಗ್ಗೆ ಎಚ್ಚರ ಅಗತ್ಯ: ಸಿಪಿಐ(ಎಂ)
ಸಿಪಿಐ (ಎಂ) ಸದಸ್ಯತ್ವ 2017ರಲ್ಲಿ 10.25 ಲಕ್ಷದಿಂದ 2021ರಲ್ಲಿ ಅಂದಾಜು 9.85 ಲಕ್ಷಕ್ಕೆ ಇಳಿದಿದೆ. ಆದರೆ, ಬಿಜೆಪಿ ಸುಮಾರು 18 ಕೋಟಿ ಸದಸ್ಯರನ್ನು ಹೊಂದಿದೆ.
ನವದೆಹಲಿ, ಜೂನ್ 10- ಸಂಪೂರ್ಣ ಬಹುಮತ ಪಡೆಯುವಲ್ಲಿ ವಿಫಲವಾಗಿರುವುದರಿಂದ ಬಿಜೆಪಿಗೆ ಹಿನ್ನಡೆಯಾಗಿದೆ. ಆದರೆ, ಫ್ಯಾಸಿಸ್ಟ್ ವಿಧಾನಗಳನ್ನು ಬಳಸುವ ಹಿಂದುತ್ವ ಬಹುಸಂಖ್ಯಾತವಾದದ ಬಗ್ಗೆ ಎಚ್ಚರ ಇರಬೇಕು ಎಂದು ಸಿಪಿಐ(ಎಂ) ಹೇಳಿದೆ.
ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ)ದ ಪಾಲಿಟ್‌ಬ್ಯುರೊ ಸಭೆ ನಂತರ ನೀಡಿದ ಹೇಳಿಕೆಯಲ್ಲಿ ಪಕ್ಷ ತನ್ನ ಚುನಾವಣೆ ಸಾಧನೆ ಬಗ್ಗೆ, ವಿಶೇಷವಾಗಿ ಕೇರಳದಲ್ಲಿ, ನಿರಾಶೆ ವ್ಯಕ್ತಪಡಿಸಿದೆ.
ʻಚುನಾವಣೆಯಲ್ಲಿ ಬಿಜೆಪಿಗೆ ಗಮನಾರ್ಹ ಹಿನ್ನಡೆಯಾಗಿದೆ. ಭಾರತೀಯರು ಸಂವಿಧಾನ ಮತ್ತು ಜಾತ್ಯತೀತತೆಯ ರಕ್ಷಣೆಯನ್ನು ಪ್ರತಿಪಾದಿಸುವ ಮೂಲಕ ಬಿಜೆಪಿಯನ್ನು ಬಹುಮತದಿಂದ ವಂಚಿತಗೊಳಿಸಿದ್ದಾರೆ. 400 ಕ್ಕೂ ಹೆಚ್ಚು ಸ್ಥಾನ ಗಳಿಸುವುದಾಗಿ ಹೇಳಿಕೊಂಡಿದ್ದ ಬಿಜೆಪಿ, ಕೇವಲ 240 ಸ್ಥಾನ ಗಳಿಸಿದೆ. ಚುನಾವಣೆ ಆಯೋಗದ ಪ್ರಕಾರ, ಎನ್‌ಡಿಎ ಶೇ.43.31 ಹಾಗೂ ಇಂಡಿಯ ಒಕ್ಕೂಟ ಶೇ. 41.69 ಮತ ಪಡೆದಿವೆ. ವ್ಯತ್ಯಾಸ ಶೇ. 2 ಕ್ಕಿಂತ ಕಡಿಮೆ ಇದೆ,ʼ ಎಂದು ಹೇಳಿಕೆ ತಿಳಿಸಿದೆ.
ʻವಿರೋಧ ಪಕ್ಷಗಳ ಮೇಲೆ ವ್ಯಾಪಕ ದಾಳಿ, ಫೆಡರಲ್ ಏಜೆನ್ಸಿಗಳ ಭಾರಿ ದುರ್ಬಳಕೆ ಮತ್ತು ಹಣದ ಬಲದ ದುರ್ಬಳಕೆ ಮೂಲಕ ಸಾರ್ವತ್ರಿಕ ಚುನಾವಣೆಗಳನ್ನು ನಡೆಸಲಾಯಿತು. ಇಂಡಿಯ ಒಕ್ಕೂಟವು ಸಂವಿಧಾನ, ಪ್ರಜಾಪ್ರಭುತ್ವ ಮತ್ತು ನಾಗರಿಕ ಸ್ವಾತಂತ್ರ್ಯದ ರಕ್ಷಣೆ, ನಿರುದ್ಯೋಗ, ಬೆಲೆ ಏರಿಕೆ ಮತ್ತು ಕೃಷಿ ಸಂಕಷ್ಟದಂತಹ ಜನರ ಜೀವನೋಪಾಯಕ್ಕೆ ಸಂಬಂಧಿಸಿದ ವಿಷಯಗಳ ಮೇಲೆ ಗಮನಹರಿಸಿದೆ,ʼ ಎಂದು ಎಡಪಕ್ಷ ಹೇಳಿದೆ.
ಲೋಕಸಭೆಯಲ್ಲಿ ಎಡಪಕ್ಷಗಳ ಉಪಸ್ಥಿತಿ ಸ್ವಲ್ಪಮಟ್ಟಿಗೆ ಸುಧಾರಿಸಿದೆ. ನಾಲ್ಕು ಸಿಪಿಐ(ಎಂ), ಎರಡು ಸಿಪಿಐ ಮತ್ತು ಸಿಪಿಐ (ಎಂಎಲ್) ತಲಾ ಎರಡು ಸ್ಥಾನ ಗಳಿಸಿದೆ. ಕೇರಳದಲ್ಲಿ ಸಿಪಿಐ(ಎಂ) ಕಾರ್ಯವೈಖರಿ ಬಗ್ಗೆ ನಿರಾಶೆ ವ್ಯಕ್ತಪಡಿಸಿದ್ದು, ʻಆಯಾ ರಾಜ್ಯ ಘಟಕಗಳು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆʼ ಎಂದು ಹೇಳಿದೆ. ನೀಟ್ ಪರೀಕ್ಷೆಯಲ್ಲಿನ ಅಕ್ರಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ.