ಪೊಲೀಸರು ವಾಟ್ಸ್‌ಆಪ್‌, ಇಮೇಲ್‌ನಲ್ಲಿ ವಿಚಾರಣೆಗೆ ಹಾಜರಾಗಲು ನೋಟಿಸ್‌ ನೀಡುವಂತಿಲ್ಲ; ಸುಪ್ರೀಂ ಕೋರ್ಟ್‌
x
ಸಂಗ್ರಹ ಚಿತ್ರ.

ಪೊಲೀಸರು ವಾಟ್ಸ್‌ಆಪ್‌, ಇಮೇಲ್‌ನಲ್ಲಿ ವಿಚಾರಣೆಗೆ ಹಾಜರಾಗಲು ನೋಟಿಸ್‌ ನೀಡುವಂತಿಲ್ಲ; ಸುಪ್ರೀಂ ಕೋರ್ಟ್‌

ಪೊಲೀಸರು ನೋಟಿಸ್‌ ನೀಡುವ ಸಾಮಾನ್ಯ ವಿಧಾನ ಅನುಸರಿಸುವ ಬದಲು ವಾಟ್ಸ್‌ಆಪ್‌ ಅಥವಾ ಇತರ ಎಲೆಕ್ಟ್ರಾನಿಕ್ ವಿಧಾನಗಳ ಮೂಲಕ ನೀಡಿದರೆ ಆದೇಶವನ್ನು ಉಲ್ಲಂಘಿಸಿದಂತಾಗುತ್ತದೆ


ಕ್ರಿಮಿನಲ್ ಪ್ರೊಸೀಜರ್ ಕೋಡ್ ಅಥವಾ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023ರ ಅಡಿಯಲ್ಲಿ ಪೊಲೀಸರು ಆರೋಪಿಗಳಿಗೆ ವಾಟ್ಸ್ಆ್ಯಪ್ ಅಥವಾ ಇತರ ವಿದ್ಯುನ್ಮಾನ ವಿಧಾನಗಳ ಮೂಲಕ ನೋಟಿಸ್ ಕೊಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ.

ನ್ಯಾಯಮೂರ್ತಿಗಳಾದ ಎಂ.ಎಂ.ಸುಂದರೇಶ್ ಮತ್ತು ರಾಜೇಶ್ ಬಿಂದಾಲ್ ಅವರಿದ್ದ ನ್ಯಾಯಪೀಠವು, ಸಿಆರ್‌ಪಿಸಿ 1973 ರ ಸೆಕ್ಷನ್ 41 ಎ ಅಥವಾ ಬಿಎನ್ಎಸ್ಎಸ್, 2023ರ ಸೆಕ್ಷನ್ 35 ರ ಅಡಿಯಲ್ಲಿ ಕಾನೂನಿನ ಅಡಿಯಲ್ಲಿ ಸಮ್ಮತವಾದ ವಿಧಾನದ ಮೂಲಕ ಮಾತ್ರ ನೋಟಿಸ್ ನೀಡಲು ಪೊಲೀಸರಿಗೆ ಸೂಕ್ತ ನಿರ್ದೇಶನಗಳನ್ನು ನೀಡುವಂತೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿತು.

"ಸಿಆರ್‌ಪಿಸಿ 1973 / ಬಿಎನ್ಎಸ್ಎಸ್, 2023 ರ ಸೆಕ್ಷನ್ 41-ಎ, 1973 / ಬಿಎನ್ಎಸ್ಎಸ್, 2023 ರ ಸೆಕ್ಷನ್ 35ರ ಅಡಿಯಲ್ಲಿ ಸಿಆರ್‌ಪಿಸಿ, 1973/ ಬಿಎನ್ಎಸ್ಎಸ್, 2023ರ ಅಡಿಯಲ್ಲಿ ಸೂಚಿಸಿರುವ ವಿಧಾನದ ಮೂಲಕ ಮಾತ್ರ ನೋಟಿಸ್ ನೀಡಲು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಪೊಲೀಸ್‌ ಇಲಾಖೆಗೆ ಆದೇಶ ನೀಡಬೇಕು" ಎಂದು ನ್ಯಾಯಮೂರ್ತಿಗಳು ಆದೇಶಿಸಿದರು.

ಸಿಆರ್‌ಪಿಸಿ 1973 / ಬಿಎನ್ಎಸ್ಎಸ್, 2023ರ ಅಡಿಯಲ್ಲಿ ಗುರುತಿಸಲ್ಪಟ್ಟ ಮತ್ತು ಸೂಚಿಸಿದ ಸೇವಾ ವಿಧಾನಕ್ಕೆ ಪರ್ಯಾಯವಾಗಿ ಅಥವಾ ಬದಲಿಯಾಗಿ ವಾಟ್ಸಾಪ್ ಅಥವಾ ಇತರ ಎಲೆಕ್ಟ್ರಾನಿಕ್ ವಿಧಾನಗಳ ಮೂಲಕ ನೋಟಿಸ್ ನೀಡಿರುವುದನ್ನು ಪರಿಗಣಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿತು. ಈ ವಿಷಯದಲ್ಲಿ ಅಮಿಕಸ್ ಕ್ಯೂರಿಯಾಗಿ ನೇಮಕಗೊಂಡ ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ ಅವರ ಸಲಹೆಯನ್ನು ನ್ಯಾಯಾಲಯ ಪರಿಗಣಿಸಿತು.

ಸಿಆರ್‌ಪಿಸಿ 1973ರ ಸೆಕ್ಷನ್ 41-ಎ ಅಡಿಯಲ್ಲಿ ವಾಟ್ಸಾಪ್ ಮೂಲಕ ನೋಟಿಸ್ ಕಳುಹಿಸಿದ ಹಿನ್ನೆಲೆಯಲ್ಲಿ ಆರೋಪಿಗಳು ತನಿಖಾಧಿಕಾರಿಯ ಮುಂದೆ ಹಾಜರಾಗಲಿಲ್ಲ ಎಂಬ ಮಾಹಿತಿಯನ್ನು ಕೋರ್ಟ್‌ ಮುಂದೆ ಹೇಳಿದ ಲೂತ್ರಾ, ಪೊಲೀಸರು ನೋಟಿಸ್‌ ನೀಡುವ ಸಾಮಾನ್ಯ ವಿಧಾನ ಅನುಸರಿಸುವ ಬದಲು ವಾಟ್ಸ್‌ಆಪ್‌ ಅಥವಾ ಇತರ ಎಲೆಕ್ಟ್ರಾನಿಕ್ ವಿಧಾನಗಳ ಮೂಲಕ ನೀಡಿದರೆ ಆದೇಶವನ್ನು ಉಲ್ಲಂಘಿಸಿದಂತಾಗುತ್ತದೆ ಎಂಬುದನ್ನು ಗಮನಕ್ಕೆ ತಂದರು.

ಯಾವ ಪ್ರಕರಣ?

ಸತೇಂದರ್ ಕುಮಾರ್ ಆಂಟಿಲ್ ಪ್ರಕರಣದಲ್ಲಿ ನ್ಯಾಯಾಲಯ ಈ ನಿರ್ದೇಶನಗಳನ್ನು ನೀಡಿದೆ.

ಇದೇ ವೇಳೆ ನ್ಯಾಯಪೀಠ, ಈ ಹಿಂದಿನ ಎಲ್ಲ ನಿರ್ಧಾರಗಳನ್ನು ಸರಿಯಾಗಿ ಜಾರಿಗೆ ತರಲಾಗಿದೆಯೇ ಎಂಬುದನ್ನು ಪರಾಮರ್ಶಿಸಲು ಆಯಾ ಸಮಿತಿ ಸಭೆಗಳನ್ನು ಮಾಸಿಕವಾಗಿ ನಡೆಸುವಂತೆ ಎಲ್ಲ ಹೈಕೋರ್ಟ್‌ಗಳಿಗೆ ನಿರ್ದೇಶನ ನೀಡಿತು.

ಮುಂದಿನ ಮೂರು ವಾರಗಳಲ್ಲಿ ಎಲ್ಲ ಆದೇಶಗಳನ್ನು ಪಾಲನೆ ಮಾಡಲಾಗಿದೆಯೇ ಎಂಬುದರ ಬಗ್ಗೆ ವರದಿ ನೀಡುವಂತೆ ಹೈಕೋರ್ಟ್‌ಗಳ ರಿಜಿಸ್ಟ್ರಾರ್ ಜನರಲ್‌ಗಳು ಮತ್ತು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತು.

Read More
Next Story