ಪಿಒಕೆ ರಣರಂಗ: ಪಾಕ್ ಸೇನೆಯ ಗುಂಡಿಗೆ 12 ನಾಗರಿಕರ ಬಲಿ, 200ಕ್ಕೂ ಹೆಚ್ಚು ಮಂದಿಗೆ ಗಾಯ
x

ಪಿಒಕೆ ರಣರಂಗ: ಪಾಕ್ ಸೇನೆಯ ಗುಂಡಿಗೆ 12 ನಾಗರಿಕರ ಬಲಿ, 200ಕ್ಕೂ ಹೆಚ್ಚು ಮಂದಿಗೆ ಗಾಯ

ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ, ಪಾಕಿಸ್ತಾನವು ಪಂಜಾಬ್ ಮತ್ತು ಇಸ್ಲಾಮಾಬಾದ್‌ನಿಂದ ಸಾವಿರಾರು ಹೆಚ್ಚುವರಿ ಸೈನಿಕರನ್ನು ಪಿಒಕೆಗೆ ರವಾನಿಸಿದೆ.


Click the Play button to hear this message in audio format

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ದಶಕಗಳಿಂದ ಅನುಭವಿಸುತ್ತಿರುವ ನಿರ್ಲಕ್ಷ್ಯ, ಮೂಲಭೂತ ಹಕ್ಕುಗಳ ನಿರಾಕರಣೆ ಮತ್ತು ಪಾಕ್ ಸೇನೆಯ ದೌರ್ಜನ್ಯದ ವಿರುದ್ಧ ಭುಗಿಲೆದ್ದಿರುವ ಜನಾಕ್ರೋಶವು ಹಿಂಸಾತ್ಮಕ ರೂಪ ಪಡೆದಿದೆ. ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ನಾಗರಿಕರ ಮೇಲೆ ಪಾಕಿಸ್ತಾನಿ ಭದ್ರತಾ ಪಡೆಗಳು ಗುಂಡಿನ ದಾಳಿ ನಡೆಸಿದ ಪರಿಣಾಮ, ಕನಿಷ್ಠ 12 ನಾಗರಿಕರು ಮೃತಪಟ್ಟಿದ್ದು, 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಘಟನೆಯು ಪಿಒಕೆಯನ್ನು ರಣರಂಗವಾಗಿಸಿದ್ದು, ಜಾಗತಿಕ ಮಟ್ಟದಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.

ಜಮ್ಮು ಕಾಶ್ಮೀರ್ ಜಾಯಿಂಟ್ ಅವಾಮಿ ಆಕ್ಷನ್ ಕಮಿಟಿ (JAAC) ನೇತೃತ್ವದಲ್ಲಿ, 38 ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟು ಸ್ಥಳೀಯರು 'ಮುಜಫರಾಬಾದ್ ಚಲೋ' ಬೃಹತ್ ಮೆರವಣಿಗೆ ಹಮ್ಮಿಕೊಂಡಿದ್ದರು. ಆದರೆ, ಈ ಶಾಂತಿಯುತ ಹೋರಾಟವನ್ನು ಹತ್ತಿಕ್ಕಲು ಪಾಕಿಸ್ತಾನ ಸರ್ಕಾರವು ಬಲಪ್ರಯೋಗಕ್ಕೆ ಮುಂದಾಗಿದೆ. ಬಾಗ್ ಜಿಲ್ಲೆಯ ಧೀರ್​ಕೋಟ್​, ಮುಜಫರಾಬಾದ್ ಮತ್ತು ಮೀರ್‌ಪುರ್ ನಗರಗಳಲ್ಲಿ ಭದ್ರತಾ ಪಡೆಗಳು ಪ್ರತಿಭಟನಾಕಾರರ ಮೇಲೆ ಮನಬಂದಂತೆ ಗುಂಡು ಹಾರಿಸಿದ್ದು, ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಘರ್ಷಣೆಯಲ್ಲಿ ಮೂವರು ಪೊಲೀಸರೂ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಇಂಟರ್ನೆಟ್​ ಸೇವೆ ಸ್ಥಗಿತ

ಪ್ರತಿಭಟನಾಕಾರರು ತಮ್ಮನ್ನು ತಡೆಯಲು ಸೇತುವೆಗಳ ಮೇಲೆ ಇರಿಸಲಾಗಿದ್ದ ಬೃಹತ್ ಕಂಟೇನರ್‌ಗಳನ್ನು ನದಿಗೆ ತಳ್ಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ, ಪಾಕಿಸ್ತಾನವು ಪಂಜಾಬ್ ಮತ್ತು ಇಸ್ಲಾಮಾಬಾದ್‌ನಿಂದ ಸಾವಿರಾರು ಹೆಚ್ಚುವರಿ ಸೈನಿಕರನ್ನು ಪಿಒಕೆಗೆ ರವಾನಿಸಿದೆ. ಇಡೀ ಪ್ರದೇಶದಲ್ಲಿ ಕರ್ಫ್ಯೂ ಮಾದರಿಯ ವಾತಾವರಣ ನಿರ್ಮಾಣವಾಗಿದ್ದು, ಮೊಬೈಲ್ ಮತ್ತು ಇಂಟರ್ನೆಟ್ ಸೇವೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.

ಪ್ರತಿಭಟನಾಕಾರರ ಬೇಡಿಕೆಗಳೇನು?

ಜೆಎಎಸಿ ಮುಂದಿಟ್ಟಿರುವ ಪ್ರಮುಖ ಬೇಡಿಕೆಗಳಲ್ಲಿ, ಪಾಕಿಸ್ತಾನದಲ್ಲಿ ವಾಸಿಸುವ ಕಾಶ್ಮೀರಿ ನಿರಾಶ್ರಿತರಿಗಾಗಿ ಪಿಒಕೆ ವಿಧಾನಸಭೆಯಲ್ಲಿ ಮೀಸಲಿಟ್ಟಿರುವ 12 ಸ್ಥಾನಗಳನ್ನು ರದ್ದುಪಡಿಸುವುದು, ಹೆಚ್ಚುತ್ತಿರುವ ತೆರಿಗೆಗಳನ್ನು ಕಡಿಮೆ ಮಾಡುವುದು, ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಸೇರಿವೆ. "70 ವರ್ಷಗಳಿಂದ ನಮ್ಮನ್ನು ವಂಚಿಸಲಾಗಿದೆ. ಇನ್ನು ಸಾಕು, ನಮಗೆ ನಮ್ಮ ಹಕ್ಕುಗಳು ಬೇಕು. ಇಲ್ಲವಾದರೆ, ಜನರ ಆಕ್ರೋಶವನ್ನು ಎದುರಿಸಲು ಸಿದ್ಧರಾಗಿ," ಎಂದು ಜೆಎಎಸಿ ನಾಯಕ ಶೌಕತ್ ನವಾಜ್ ಮಿರ್ ಪಾಕ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಜಾಗತಿಕ ಮಧ್ಯಸ್ಥಿಕೆಗೆ ಒತ್ತಾಯ

ಈ ಅಮಾನುಷ ಘಟನೆಯನ್ನು ಖಂಡಿಸಿರುವ ಯುನೈಟೆಡ್ ಕಾಶ್ಮೀರ್ ಪೀಪಲ್ಸ್ ನ್ಯಾಷನಲ್ ಪಾರ್ಟಿ (UKPNP), ಪಿಒಕೆಯಲ್ಲಿ ಮಾನವೀಯ ಬಿಕ್ಕಟ್ಟು ಸೃಷ್ಟಿಯಾಗಿದ್ದು, ವಿಶ್ವಸಂಸ್ಥೆ ಮತ್ತು ಅಂತರರಾಷ್ಟ್ರೀಯ ಸಮುದಾಯ ತಕ್ಷಣವೇ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದೆ. ಜಿನೀವಾದಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ 60ನೇ ಅಧಿವೇಶನದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲಾಗಿದೆ.

ಪಾಕಿಸ್ತಾನವು ತನ್ನದೇ ಜನರ ಮೇಲೆ ಬಾಂಬ್ ದಾಳಿ ನಡೆಸುತ್ತಿದೆ ಎಂದು ವಿಶ್ವಸಂಸ್ಥೆಯಲ್ಲಿ ಭಾರತ ಈ ಹಿಂದೆ ಮಾಡಿದ್ದ ಆರೋಪಗಳು ಈಗ ನಿಜವಾಗುತ್ತಿವೆ ಎಂಬ ಮಾತುಗಳು ಕೇಳಿಬರುತ್ತಿವೆ. ಕಳೆದ ವಾರವಷ್ಟೇ, ಪಾಕ್ ವಾಯುಪಡೆಯು ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ನಡೆಸಿದ ವೈಮಾನಿಕ ದಾಳಿಯಲ್ಲಿ 30 ನಾಗರಿಕರು ಮೃತಪಟ್ಟಿದ್ದರು.

Read More
Next Story