ಮಣಿಪುರಕ್ಕೆ ಭೇಟಿ ನೀಡದ ಪ್ರಧಾನಿಯಿಂದ ಆಶ್ಚರ್ಯಕರ ಹೇಳಿಕೆ: ಕಾಂಗ್ರೆಸ್
x
ವಂದನಾ ನಿರ್ಣಯಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಉತ್ತರದ ವೇಳೆ ಪ್ರತಿಪಕ್ಷಗಳ ಸದಸ್ಯರು ರಾಜ್ಯಸಭೆಯಿಂದ ಹೊರನಡೆದರು̤

ಮಣಿಪುರಕ್ಕೆ ಭೇಟಿ ನೀಡದ ಪ್ರಧಾನಿಯಿಂದ ಆಶ್ಚರ್ಯಕರ ಹೇಳಿಕೆ: ಕಾಂಗ್ರೆಸ್


ಹೊಸದಿಲ್ಲಿ, ಜು.3- ಮಣಿಪುರ ಸಹಜ ಸ್ಥಿತಿಗೆ ಮರಳುತ್ತಿದೆ ಎಂಬ ಹೇಳಿಕೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕಾಂಗ್ರೆಸ್ ರಾಜ್ಯಸಭೆಯಲ್ಲಿ ವಾಗ್ದಾಳಿ ನಡೆಸಿದೆ.

ರಾಜ್ಯ ಇನ್ನೂ ಉದ್ವಿಗ್ನ ಸ್ಥಿತಿಯಲ್ಲಿದೆ. ರಾಜ್ಯದಲ್ಲಿ ಕಳೆದ ವರ್ಷ ಮೇನಲ್ಲಿ ಹಿಂಸಾಚಾರ ಭುಗಿಲೆದ್ದ ನಂತರ ಪ್ರಧಾನಿ ಅಲ್ಲಿಗೆ ಈವರೆಗೆ ಭೇಟಿ ನೀಡಿಲ್ಲ ಎಂದು ಕಾಂಗ್ರೆಸ್‌ ಹೇಳಿದೆ.

ʻಮಣಿಪುರದಲ್ಲಿ ಹಿಂಸಾಚಾರ ಕ್ಷೀಣಿಸುತ್ತಿದೆ. ಬಹುತೇಕ ಭಾಗಗಳಲ್ಲಿ ಶಾಲೆಗಳು ಪುನಾರಂಭಗೊಂಡಿವೆ ಮತ್ತು ಸಂಪೂರ್ಣ ಶಾಂತಿಗೆ ಪ್ರಯತ್ನಿಸಲಾಗುತ್ತಿದೆʼ ಎಂದು ಪ್ರಧಾನಿ ಮೋದಿ ಹೇಳಿದ್ದರು.

ಪ್ರತಿಕ್ರಿಯಿಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ʻಇಂದು ರಾಜ್ಯಸಭೆಯಲ್ಲಿ ತಿಂಗಳುಗಳ ಸಂಪೂರ್ಣ ಮೌನದ ನಂತರ ಅಜೈವಿಕ ಪ್ರಧಾನಿ ಮಣಿಪುರದಲ್ಲಿ ಸಹಜ ಸ್ಥಿತಿಯಿದೆ ಎಂಬ ಆಶ್ಚರ್ಯಕರ ಹೇಳಿಕೆ ನೀಡಿದ್ದಾರೆ. ಜುಲೈ 1 ರಂದು ಒಳ ಮಣಿಪುರದ ಸಂಸದ ರು ಲೋಕಸಭೆಯಲ್ಲಿ ಸೂಚಿಸಿದಂತೆ, ಪರಿಸ್ಥಿತಿ ಇನ್ನೂ ಉದ್ವಿಗ್ನವಾಗಿದೆ. ಮೇ 3, 2023 ರ ರಾತ್ರಿ ಹಿಂಸಾಚಾರ ಆರಮಭಗೊಂಡ ನಂತರ ಅಜೈವಿಕ ಪ್ರಧಾನ ಮಂತ್ರಿ ಇನ್ನೂ ಮಣಿಪುರಕ್ಕೆ ಭೇಟಿ ನೀಡಿಲ್ಲ ಅಥವಾ ರಾಜ್ಯದ ರಾಜಕೀಯ ನಾಯಕರನ್ನು ಭೇಟಿ ಮಾಡಿಲ್ಲ.ರಾಷ್ಟ್ರಪತಿ ಅವರ ಭಾಷಣವೂ ಈ ವಿಷಯದ ಬಗ್ಗೆ ಮೌನವಾಗಿದೆ, ʼಎಂದು ಹೇಳಿದರು.

ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಉತ್ತರಿಸಿದ ಪ್ರಧಾನಿ, ಮಣಿಪುರದಲ್ಲಿ 500 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. 11,000 ಕ್ಕೂ ಹೆಚ್ಚು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ಹೇಳಿದ್ದರು.

ಲೋಕಸಭೆಯಲ್ಲಿ ಪ್ರಧಾನಿ ಮೋದಿ ಅವರ ಭಾಷಣದ ಮೊದಲು ಪಕ್ಷದ ಮಣಿಪುರದ ಸಂಸದರಿಗೆ ಮಾತನಾಡಲು ಅವಕಾಶ ನೀಡದಿದ್ದಕ್ಕಾಗಿ ಕಾಂಗ್ರೆಸ್ ವಾಗ್ದಾಳಿ ನಡೆಸಿತು. ʻಪ್ರಧಾನಿ ಹಳೆಯ ಆರೋಪಗಳನ್ನು ಪುನರಾವರ್ತಿಸಿದರು, ಹಾಸ್ಯ ಚಟಾಕಿ ಹಾರಿಸಿದರು ಮತ್ತು ಗೇಲಿ ಮಾಡಿದರು. ಆದರೆ, ಹಿಂಸಾಚಾರಪೀಡಿತ ರಾಜ್ಯದ ಸಂಸದರ ಮಾತು ಕೇಳುವ ತಾಳ್ಮೆ ಅವರಿಗಿರಲಿಲ್ಲ,ʼ ಎಂದು ಕಾಂಗ್ರೆಸ್ ಹೇಳಿದೆ.

ಮಣಿಪುರದ ದುಸ್ಥಿತಿಗೆ ಪ್ರಧಾನಿ ಉದ್ದೇಶಪೂರ್ವಕವಾಗಿ ʻಬೆನ್ನು ತಿರುಗಿಸುತ್ತಿದ್ದಾರೆʼ ಎಂದು ಆರೋಪಿಸಿದೆ.

ಮಣಿಪುರದಲ್ಲಿ 2023ರ ಮೇ ತಿಂಗಳಲ್ಲಿ ಆರಂಭವಾದ ಮೈಥಿ ಮತ್ತು ಕುಕಿ ಸಮುದಾಯಗಳ ನಡುವಿನ ಹಿಂಸಾಚಾರದಲ್ಲಿ 200 ಜನರು ಕೊಲ್ಲಲ್ಪಟ್ಟರು. ಸಾವಿರಾರು ಜನರು ಸ್ಥಳಾಂತರಗೊಂಡಿದ್ದು,ನಿರಾಶ್ರಿತರ ಶಿಬಿರಗಳಲ್ಲಿ ಇದ್ದಾರೆ.

Read More
Next Story