ಜಿ7 ಶೃಂಗಸಭೆ: ಪ್ರಧಾನಿ ಜೂನ್ 13 ರಂದು ಇಟಲಿಗೆ
ನವದೆಹಲಿ, ಜೂನ್ 12 - ಜಿ7 ರಾಷ್ಟ್ರಗಳ ವಾರ್ಷಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಇಟಲಿಗೆ ಪ್ರಯಾಣಿಸಲಿದ್ದಾರೆ.
ಕಳೆದ ವರ್ಷ ಭಾರತದ ಅಧ್ಯಕ್ಷತೆಯಲ್ಲಿ ನಡೆದ ಜಿ20 ಶೃಂಗಸಭೆಯ ಫಲಿತಾಂಶಗಳನ್ನು ಅನುಸರಿಸಲು ಇದು ಅವಕಾಶ ಒದಗಿಸುತ್ತದೆ ಎಂದು ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ ಬುಧವಾರ ಹೇಳಿದರು.
ಜಿ 7 ಶೃಂಗಸಭೆಯು ಜೂನ್ 13 ರಿಂದ 15 ರವರೆಗೆ ಇಟಲಿಯ ಅಪುಲಿಯಾ ಪ್ರದೇಶದ ಬೊರ್ಗೊ ಎಗ್ನಾಜಿಯಾದ ರೆಸಾರ್ಟ್‌ನಲ್ಲಿ ನಡೆಯಲಿ ದ್ದು, ಉಕ್ರೇನ್ ಯುದ್ಧ ಮತ್ತು ಗಾಜಾದಲ್ಲಿನ ಸಂಘರ್ಷ ಕುರಿತು ಚರ್ಚೆ ನಡೆಯಲಿದೆ.
ಅಮೆರಿಕದ ಅಧ್ಯಕ್ಷ ಜೋ ಬಿಡೆನ್, ಫ್ರಾನ್ಸಿನ ಎಮ್ಯಾನುಯೆಲ್ ಮ್ಯಾಕ್ರನ್, ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಮತ್ತು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಪಾಲ್ಗೊಳ್ಳಲಿದ್ದಾರೆ.
ಉಕ್ರೇನ್ ಸಂಘರ್ಷ ಕುರಿತ ಪ್ರಶ್ನೆಗೆ, ʻಸಂವಾದ ಮತ್ತು ರಾಜತಾಂತ್ರಿಕತೆ ಸಂಘರ್ಷವನ್ನು ಪರಿಹರಿಸುವ ಅತ್ಯುತ್ತಮ ಮಾರ್ಗ ಎಂದು ನಾವು ಭಾವಿಸಿದ್ದೇವೆ,ʼ ಎಂದು ಕ್ವಾತ್ರಾ ಹೇಳಿದರು. ಜಿ7 ಶೃಂಗಸಭೆಯಲ್ಲಿ ದೇಶದ ಭಾಗವಹಿಸುವಿಕೆಯು ಜಾಗತಿಕ ಸವಾಲುಗಳನ್ನು ಎದುರಿಸುವ ನವದೆಹಲಿಯ ಪ್ರಯತ್ನಗಳಿಗೆ ಹೆಚ್ಚಿನ ಮನ್ನಣೆ ನೀಡುತ್ತದೆ ಎಂದು ಅವರು ಹೇಳಿದರು.
ಶೃಂಗಸಭೆಯಲ್ಲಿ ಭಾರತವನ್ನು ಯಾರು ಪ್ರತಿನಿಧಿಸುತ್ತಾರೆ ಎಂದು ಕ್ವಾತ್ರಾ ಹೇಳಲಿಲ್ಲ.