
ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಮುನ್ನಾದಿನದಂದು ಬಿಜೆಪಿ ಕಾರ್ಯಕರ್ತರು ದೇವಾಲಯದಲ್ಲಿ ವಿಶೇಷ 'ಹವನ ಪೂಜೆ' ನಡೆಸಿದರು.
ಮೋದಿ 75ನೇ ಹುಟ್ಟುಹಬ್ಬ: ದೂರವಾಣಿ ಕರೆ ಮೂಲಕ ಶುಭಾಶಯ ಕೋರಿದ ಡೊನಾಲ್ಡ್ ಟ್ರಂಪ್
ನರೇಂದ್ರ ಮೋದಿ ಅವರ 75ನೇ ಹುಟ್ಟುಹಬ್ಬದ ಮುನ್ನಾದಿನದಂದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮೋದಿ ಅವರಿಗೆ ದೂರವಾಣಿ ಕರೆ ಮಾಡಿ ಶುಭಾಶಯ ಕೋರಿದ್ದಾರೆ.
ಇಂದು ಪ್ರಧಾನಿ ನರೇಂದ್ರ ಮೋದಿಯವರು 75 ನೇ ಹುಟ್ಟುಹಬ್ಬ ಆಚರಿಸುತ್ತಿದ್ದು, ಬಿಜೆಪಿ ಕಾರ್ಯಕರ್ತರು ದೇಶಾದ್ಯಂತ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ. ಗಣ್ಯರು ಶುಭಾಷಯ ಕೋರುತ್ತಿದ್ದಾರೆ.
ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಅವರ 75ನೇ ಹುಟ್ಟುಹಬ್ಬದ ಮುನ್ನಾದಿನದಂದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮೋದಿ ಅವರಿಗೆ ದೂರವಾಣಿ ಕರೆ ಮಾಡಿ ಶುಭಾಶಯ ಕೋರಿದ್ದಾರೆ. ಈ ಸಂದರ್ಭದಲ್ಲಿ ಅವರು, ರಷ್ಯಾ-ಉಕ್ರೇನ್ ಯುದ್ಧವನ್ನು ಕೊನೆಗೊಳಿಸಲು ಭಾರತ ನೀಡುತ್ತಿರುವ ಬೆಂಬಲಕ್ಕಾಗಿ ಮೋದಿ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದರು. ಸುಂಕದ ವಿವಾದಗಳ ನಡುವೆಯೂ ಭಾರತ ಮತ್ತು ಅಮೆರಿಕದ ನಡುವಿನ ಸಂಬಂಧಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಈ ದೂರವಾಣಿ ಕರೆ ಮಹತ್ವದ್ದಾಗಿದೆ ಎಂದು ರಾಜತಾಂತ್ರಿಕ ವಲಯಗಳಲ್ಲಿ ವಿಶ್ಲೇಷಿಸಲಾಗುತ್ತಿದೆ.
"ನನ್ನ ಸ್ನೇಹಿತ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಫೋನ್ ಕರೆ ಮಾಡಿದೆ. ನಾನು ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದೆ. ಅವರು ಅದ್ಭುತ ಕೆಲಸ ಮಾಡುತ್ತಿದ್ದಾರೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವನ್ನು ಕೊನೆಗೊಳಿಸಲು ನಿಮ್ಮ ಬೆಂಬಲಕ್ಕೆ ಧನ್ಯವಾದಗಳು" ಎಂದು ಟ್ರಂಪ್ ಪೋಸ್ಟ್ ಮಾಡಿದ್ದಾರೆ.
ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಪ್ರಧಾನಿ ಮೋದಿ ಅವರು "ನನ್ನ ಸ್ನೇಹಿತ ಅಧ್ಯಕ್ಷ ಟ್ರಂಪ್, ನಿಮ್ಮ ಫೋನ್ ಕರೆ ಮತ್ತು ನನ್ನ 75 ನೇ ಹುಟ್ಟುಹಬ್ಬದ ಆತ್ಮೀಯ ಶುಭಾಶಯಗಳಿಗಾಗಿ ಧನ್ಯವಾದಗಳು. ಅಲ್ಲದೆ ಭಾರತ-ಅಮೆರಿಕ ಸಮಗ್ರ ಮತ್ತು ಜಾಗತಿಕ ಪಾಲುದಾರಿಕೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ನಾನು ಸಂಪೂರ್ಣವಾಗಿ ಬದ್ಧನಾಗಿದ್ದೇನೆ. ಉಕ್ರೇನ್ ಸಂಘರ್ಷದ ಶಾಂತಿಯುತ ಪರಿಹಾರದತ್ತ ನಿಮ್ಮ ಉಪಕ್ರಮಗಳನ್ನು ನಾವು ಬೆಂಬಲಿಸುತ್ತೇವೆ'' ಎಂದು ನರೇಂದ್ರ ಮೋದಿ ಪ್ರತಿಕ್ರಿಯೆ ನೀಡಿದ್ದಾರೆ.
ಜೂನ್‌ನಲ್ಲಿ ಕೆನಡಾದ ಕನನಾಸ್ಕಿಸ್‌ನಲ್ಲಿ ನಡೆದ ಜಿ7 ಶೃಂಗಸಭೆಯ ಸಂದರ್ಭದಲ್ಲಿ ಟ್ರಂಪ್ ಮತ್ತು ಮೋದಿ ದೂರವಾಣಿಯಲ್ಲಿ ಮಾತನಾಡಿದ ನಂತರ ಟ್ರಂಪ್ ಮತ್ತು ಮೋದಿ ನಡುವಿನ ಮೊದಲ ಫೋನ್ ಕರೆ ಇದಾಗಿದೆ.
ಮೋದಿ ಜನ್ಮದಿನ ಆಚರಣೆ
ಪ್ರಧಾನಿ ಮೋದಿ ಅವರ ಹುಟ್ಟುಹಬ್ಬವನ್ನು ಆಚರಿಸುವ ಅಂಗವಾಗಿ, ಆಡಳಿತಾರೂಢ ಬಿಜೆಪಿ ಪಕ್ಷವು ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 2ರವರೆಗೆ ʻಸೇವಾ ಪಖ್ವಾಡʼ ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದೆ. ಈ ಸಂದರ್ಭದಲ್ಲಿ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಹಲವು ಅಭಿವೃದ್ಧಿ ಯೋಜನೆಗಳು ಮತ್ತು ಜನಪರ ಉಪಕ್ರಮಗಳನ್ನು ಅನಾವರಣಗೊಳಿಸಲಾಗುತ್ತಿದೆ. ಅಕ್ಟೋಬರ್ 2 ಮಹಾತ್ಮ ಗಾಂಧಿಯವರ ಜನ್ಮದಿನವಾಗಿದ್ದು, ಈ ಕಾರ್ಯಕ್ರಮಗಳು ಅದಕ್ಕೆ ಪೂರಕವಾಗಿ ನಡೆಯಲಿವೆ.