
PM Modi : ಆಪರೇಷನ್ ಸಿಂದೂರ್ ಬಗ್ಗೆ ಅನವಶ್ಯಕ ಹೇಳಿಕೆ ನೀಡದಂತೆ ಪಕ್ಷದ ನಾಯಕರಿಗೆ ಮೋದಿ ಎಚ್ಚರಿಕೆ
ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು 'ಆಪರೇಷನ್ ಸಿಂಧೂರ್' ಕುರಿತು ಕೆಲವು ಬಿಜೆಪಿ ನಾಯಕರು ನೀಡಿದ ವಿವಾದಾತ್ಮಕ ಹೇಳಿಕೆಗಳು ಇತ್ತೀಚೆಗೆ ಸುದ್ದಿಯಾಗಿದ್ದು, ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿವೆ.
'ಆಪರೇಷನ್ ಸಿಂಧೂರ್' ಕುರಿತು ಕೆಲವು ಬಿಜೆಪಿ ನಾಯಕರು ನೀಡಿರುವ ವಿವಾದಾತ್ಮಕ ಹೇಳಿಕೆಗಳ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಕ್ಷದ ನಾಯಕರಿಗೆ ತೀವ್ರ ಎಚ್ಚರಿಕೆ ನೀಡಿದ್ದಾರೆ. ದೆಹಲಿಯಲ್ಲಿ ಎನ್‌ಡಿಎ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳ ಸಭೆಯಲ್ಲಿ ಅವರು ಮಾತಿನಲ್ಲಿ ಹಿಡಿತ ಇಟ್ಟುಕೊಳ್ಳುವುದಕ್ಕೆ ಸಲಹೆ ನೀಡಿದ್ದಾರೆ.
ಪಕ್ಷದ ನಾಯಕರು ಪ್ರತಿಯೊಂದು ವಿಷಯದ ಬಗ್ಗೆ ಮಾತನಾಡುವುದನ್ನು ನಿಲ್ಲಿಸಬೇಕು, ಅನಗತ್ಯ ಹೇಳಿಕೆಗಳನ್ನು ನೀಡಬಾರದು ಎಂದು ಎನ್‌ಡಿಟಿವಿ ವರದಿ ತಿಳಿಸಿದೆ. ಆಪರೇಷನ್ ಸಿಂಧೂರ್ ಬಗ್ಗೆ ಬಿಜೆಪಿ ನಾಯಕರು ನೀಡಿರುವ ಹೇಳಿಕೆ ಪಕ್ಷಕ್ಕೆ ಮುಜುಗರ ತಂದಿರುವ ಹಿನ್ನೆಲೆಯಲ್ಲಿ ಅವರು ಈ ಕ್ರಮ ಕೈಗೊಂಡಿದ್ದಾರೆ.
ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು 'ಆಪರೇಷನ್ ಸಿಂಧೂರ್' ಕುರಿತು ಕೆಲವು ಬಿಜೆಪಿ ನಾಯಕರು ನೀಡಿದ ವಿವಾದಾತ್ಮಕ ಹೇಳಿಕೆಗಳು ಇತ್ತೀಚೆಗೆ ಸುದ್ದಿಯಾಗಿದ್ದು, ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿವೆ.
ಮಧ್ಯಪ್ರದೇಶದ ಸಚಿವ ವಿಜಯ್ ಶಾ ಅವರು 'ಆಪರೇಷನ್ ಸಿಂಧೂರ್' ಕುರಿತ ಮಾಧ್ಯಮ ವರದಿಗಳಲ್ಲಿ ಗಮನ ಸೆಳೆದಿದ್ದ ಕರ್ನಲ್ ಸೋಫಿಯಾ ಖುರೇಷಿ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಲಾದ ವಿಡಿಯೋ ವ್ಯಾಪಕವಾಗಿ ಹಂಚಿಕೆಯಾಗಿತ್ತು. ಮಧ್ಯಪ್ರದೇಶ ಹೈಕೋರ್ಟ್ ಶಾ ಅವರನ್ನು 'ಕಳಪೆ ಭಾಷೆ ಬಳಸಿದ್ದಕ್ಕಾಗಿ ತರಾಟೆಗೆ ತೆಗೆದುಕೊಂಡು,, ದ್ವೇಷ ಮತ್ತು ದ್ವೇಷವನ್ನು ಉತ್ತೇಜಿಸಿದ ಆರೋಪದ ಮೇಲೆ ಎಫ್‌ಐಆರ್ ದಾಖಲಿಸಲು ಪೊಲೀಸರಿಗೆ ಆದೇಶಿಸಿತ್ತು. ಬಳಿಕ ಎಚ್ಚೆತ್ತ ಶಾ ಅವರು ಕ್ಷಮೆಯಾಚಿಸಿ, ಕರ್ನಲ್ ಖುರೇಷಿ ತಮ್ಮ ಸಹೋದರಿಗಿಂತಲೂ ಹೆಚ್ಚು ಗೌರವ ಉಳ್ಳವರು ಎಂದು ಹೇಳಿದ್ದರು. ಶಾ ವಿರುದ್ಧ ಸುಪ್ರೀಂ ಕೋರ್ಟ್ ಕೂಡ ಅಸಾಮಾಧಾನ ವ್ಯಕ್ತಪಡಿಸಿತ್ತು.
ಬಿಜೆಪಿ ಸಂಸದರಿಂದ ಮತ್ತೊಂದು ವಿವಾದ
ಬಿಜೆಪಿಯ ರಾಜ್ಯಸಭಾ ಸಂಸದ ರಾಮ್ ಚಂದರ್ ಜಂಗ್ರಾ ಅವರು ಏಪ್ರಿಲ್ 22 ರಂದು ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ತಮ್ಮ ಗಂಡಂದಿರನ್ನು ಕಳೆದುಕೊಂಡ ಮಹಿಳೆಯರು ವೀರ ವನಿತೆಯರು ಅಲ್ಲ ಎಂಬ ಹೇಳಿಕೆ ನೀಡಿದ್ದರು. ಹರಿಯಾಣದ ಭಿವಾನಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಜಂಗ್ರಾ, “ಗಂಡಂದಿರನ್ನು ಕಳೆದುಕೊಂಡ ಮಹಿಳೆಯರಲ್ಲಿ ಕೆಚ್ಚು ಇರಲಿಲ್ಲ. ಭಯೋತ್ಪಾದಕರು ಕೈ ಮುಗಿದರೆ ಬಿಡುವುದಿಲ್ಲ. ಪ್ರವಾಸಿಗರು ಅಗ್ನಿವೀರ್ ತರಬೇತಿ ಪಡೆದಿದ್ದರೆ ಭಯೋತ್ಪಾದಕರನ್ನು ಮಟ್ಟ ಹಾಕುತ್ತಿದ್ದರು., ಅವರು 26 ಜನರನ್ನು ಕೊಲ್ಲುತ್ತಿರಲಿಲ್ಲ” ಎಂದು ಹೇಳಿಕೆ ನೀಡಿದ್ದರು.
ತೀವ್ರ ಟೀಕೆಗೆ ಒಳಗಾದ ಬಳಿಕ, ಜಂಗ್ರಾ ತಮ್ಮ ಹೇಳಿಕೆಯನ್ನು ತಿರುಚಲಾಗಿದೆ ಎಂದು ವಿಡಿಯೋ ಸಂದೇಶದಲ್ಲಿ ಸ್ಪಷ್ಟನೆ ನೀಡಿದ್ದಾರೆ. “ನಾನು ನಮ್ಮ ದೇಶದ ಮಹಿಳೆಯರನ್ನು ಯಾವುದೇ ರೀತಿಯಲ್ಲಿ ದುರ್ಬಲರೆಂದು ಹೇಳಿಲ್ಲ. ಪಹಲ್ಗಾಮ್ ದಾಳಿಯಲ್ಲಿ ಗಂಡಂದಿರನ್ನು ಕಳೆದುಕೊಂಡ ಮಹಿಳೆಯರೊಂದಿಗೆ, ಆ ಕುಟುಂಬಗಳೊಂದಿಗೆ ನಾವು ನಿಲ್ಲುತ್ತೇವೆ. ಹೇಳಿಕೆಯಿಂದ ಜನರ ಮನಸ್ಸಿಗೆ ನೋವಾಗಿದ್ದರೆ ಕ್ಷಮೆಯಾಚಿಸುವೆ” ಎಂದು ಹೇಳಿದ್ದರು.