ಅಸ್ಸಾಂಗೆ  ಇಂದು ಮೋದಿ ಭೇಟಿ: 18,530 ಕೋಟಿ ರೂ. ಮೊತ್ತದ ಯೋಜನೆಗಳಿಗೆ ಚಾಲನೆ
x

ಅಸ್ಸಾಂಗೆ ಇಂದು ಮೋದಿ ಭೇಟಿ: 18,530 ಕೋಟಿ ರೂ. ಮೊತ್ತದ ಯೋಜನೆಗಳಿಗೆ ಚಾಲನೆ

ಎರಡು ದಿನಗಳ ಅಸ್ಸಾಂ ಪ್ರವಾಸದಲ್ಲಿರುವ ಪ್ರಧಾನಿ, ಶನಿವಾರ ಗುವಾಹಟಿಗೆ ಆಗಮಿಸಿದ್ದರು ಮತ್ತು ಭಾರತರತ್ನ ಪುರಸ್ಕೃತ ಭೂಪೇನ್ ಹಜಾರಿಕಾ ಅವರ ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದರು.


ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಅಸ್ಸಾಂನ ದರಾಂಗ್ ಮತ್ತು ಗೋಲಾಘಾಟ್ ಜಿಲ್ಲೆಗಳಲ್ಲಿ 18,530 ಕೋಟಿ ರೂಪಾಯಿ ಮೌಲ್ಯದ ಯೋಜನೆಗಳಿಗೆ ಚಾಲನೆ ನೀಡಲಿದ್ದು, ಎರಡು ಸಾರ್ವಜನಿಕ ರ‍್ಯಾಲಿಗಳನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಮಂಗಳದಾಯಿ ಪಟ್ಟಣದಲ್ಲಿ ದರಾಂಗ್ ವೈದ್ಯಕೀಯ ಕಾಲೇಜು, ನರ್ಸಿಂಗ್ ಕಾಲೇಜು ಮತ್ತು ಜಿಎನ್‌ಎಂ ಶಾಲೆಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಆರೋಗ್ಯ ಯೋಜನೆಗಳ ಒಟ್ಟು ಹೂಡಿಕೆ 570 ಕೋಟಿ ರೂಪಾಯಿ.

ಮೋದಿ ಚಾಲನೆ ನೀಡಲಿರುವ ಪ್ರಮುಖ ಯೋಜನೆಗಳು

ನಾರೆಂಗಿ-ಕುರುವಾ ಸೇತುವೆ: 1,200 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ 2.9 ಕಿ.ಮೀ ಉದ್ದದ ನಾರೆಂಗಿ-ಕುರುವಾ ಸೇತುವೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಗುವಾಹಟಿ ರಿಂಗ್ ರೋಡ್: ಅಸ್ಸಾಂನ ಕಾಮ್ರೂಪ್, ದರಾಂಗ್ ಜಿಲ್ಲೆಗಳು ಮತ್ತು ಮೇಘಾಲಯದ ರಿ-ಭೋಯ್ ಅನ್ನು ಸಂಪರ್ಕಿಸುವ 118.5 ಕಿ.ಮೀ ಉದ್ದದ ಗುವಾಹಟಿ ರಿಂಗ್ ರೋಡ್ ಯೋಜನೆಗೆ ಚಾಲನೆ ನೀಡಲಿದ್ದಾರೆ. ಇದರ ಅಂದಾಜು ವೆಚ್ಚ 4,530 ಕೋಟಿ ರೂಪಾಯಿ

ಬಿದಿರು ಆಧಾರಿತ ಎಥೆನಾಲ್ ಸ್ಥಾವರ: ಗೋಲಾಘಾಟ್ ಜಿಲ್ಲೆಯ ನುಮಾಲಿಗಢದಲ್ಲಿ 5,000 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾದ ಬಿದಿರು ಆಧಾರಿತ ಎಥೆನಾಲ್ ಸ್ಥಾವರವನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ. ಇದು 50 ಕೆಟಿಪಿಎ ಇಂಧನ ದರ್ಜೆಯ ಎಥೆನಾಲ್ ಉತ್ಪಾದನಾ ಸಾಮರ್ಥ್ಯ ಹೊಂದಿದೆ.

ಪೆಟ್ರೋ ಫ್ಲೂಯಿಡೈಸ್ಡ್ ಕೆಟಾಲಿಟಿಕ್ ಕ್ರ್ಯಾಕರ್ ಘಟಕ: 7,230 ಕೋಟಿ ರೂಪಾಯಿ ವೆಚ್ಚದ ಪೆಟ್ರೋ ಫ್ಲೂಯಿಡೈಸ್ಡ್ ಕೆಟಾಲಿಟಿಕ್ ಕ್ರ್ಯಾಕರ್ ಘಟಕಕ್ಕೆ ಶಂಕುಸ್ಥಾಪನೆ ಮಾಡಲಿದ್ದಾರೆ. ಇದು 360 ಕೆಟಿಪಿಎ ಪಾಲಿಪ್ರೊಪಿಲೀನ್ ಅನ್ನು ಉತ್ಪಾದಿಸಲಿದ್ದು, ಪ್ಲಾಸ್ಟಿಕ್ ಮೌಲ್ಯ ಸರಪಳಿಗೆ ದೊಡ್ಡ ಉತ್ತೇಜನ ನೀಡುವ ನಿರೀಕ್ಷೆಯಿದೆ.

ಮಂಗಳದಾಯಿಯಲ್ಲಿ ಬೆಳಿಗ್ಗೆ 11. 30ಕ್ಕೆ ಮತ್ತು ನುಮಾಲಿಗಢದಲ್ಲಿ ಮಧ್ಯಾಹ್ನ 2:15ಕ್ಕೆ ಕಾರ್ಯಕ್ರಮಗಳು ನಡೆಯಲಿವೆ. ಬಳಿಕ, ಜೋರ್ಹತ್ ವಿಮಾನ ನಿಲ್ದಾಣದಿಂದ ಪ್ರಧಾನಿ ಮೋದಿ ಅವರು ಕೋಲ್ಕತ್ತಾಗೆ ತೆರಳಲಿದ್ದಾರೆ.

ಎರಡು ದಿನಗಳ ಅಸ್ಸಾಂ ಪ್ರವಾಸದಲ್ಲಿರುವ ಪ್ರಧಾನಿ, ಶನಿವಾರ ಗುವಾಹಟಿಗೆ ಆಗಮಿಸಿದ್ದರು ಮತ್ತು ಭಾರತರತ್ನ ಪುರಸ್ಕೃತ ಭೂಪೇನ್ ಹಜಾರಿಕಾ ಅವರ ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದರು.

Read More
Next Story