ಪ್ರಧಾನಿ ನೇತೃತ್ವದಲ್ಲಿ ನೀತಿ ಆಯೋಗದ ಸಭೆ 27ರಂದು
x

ಪ್ರಧಾನಿ ನೇತೃತ್ವದಲ್ಲಿ ನೀತಿ ಆಯೋಗದ ಸಭೆ 27ರಂದು

ಪ್ರಧಾನಿ ಅಧ್ಯಕ್ಷತೆಯಲ್ಲಿ ಶನಿವಾರ (ಜುಲೈ 27) ನೀತಿ ಆಯೋಗದ ಒಂಬತ್ತನೇ ಆಡಳಿತ ಮಂಡಳಿ ಸಭೆ ನಡೆಯಲಿದೆ. ಕಾಂಗ್ರೆಸ್‌ ಮುಖ್ಯಮಂತ್ರಿಗಳು, ಎಂ.ಕೆ. ಸ್ಟಾಲಿನ್, ಪಿಣರಾಯಿ ವಿಜಯನ್, ಪಂಜಾಬ್ ಮತ್ತು ದೆಹಲಿ ಸರ್ಕಾರಗಳು ಸಭೆಯನ್ನು ಬಹಿಷ್ಕರಿಸಿವೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶನಿವಾರದ ಸಭೆಗೆ ಹಾಜರಾಗುತ್ತಾರೆಯೇ ಎಂಬುದು ಸ್ಪಷ್ಟವಾಗಿಲ್ಲ.


ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಶನಿವಾರ (ಜುಲೈ 27) ನೀತಿ ಆಯೋಗದ ಒಂಬತ್ತನೇ ಆಡಳಿತ ಮಂಡಳಿ ಸಭೆ ನಡೆಯ ಲಿದೆ. 2047 ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವತ್ತ ಗಮನ ಹರಿಸಲಿದೆ ಎಂದು ಅಧಿಕೃತ ಹೇಳಿಕೆ ಶುಕ್ರವಾರ (ಜುಲೈ 26) ತಿಳಿಸಿದೆ.

'ಭಾಗವಹಿಸುವ ಆಡಳಿತ': ನೀತಿ ಆಯೋಗದ ಮಂಡಳಿಯಲ್ಲಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗವರ್ನರ್‌ಗಳು ಮತ್ತು ಹಲವಾರು ಕೇಂದ್ರ ಮಂತ್ರಿಗಳು ಇದ್ದಾರೆ. ಪ್ರಧಾನಿ ನೀತಿ ಆಯೋಗದ ಅಧ್ಯಕ್ಷರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಸಹಭಾಗಿ ಆಡಳಿತ ಮತ್ತು ಸಹಯೋಗವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಸರ್ಕಾರ ದ ಯೋಜನೆಗಳ ವಿತರಣೆ ಕಾರ್ಯವಿಧಾನವನ್ನು ಬಲಪಡಿಸುವ ಮೂಲಕ ಗ್ರಾಮೀಣ ಮತ್ತು ನಗರಗಳ ಜನರ ಜೀವನದ ಗುಣಮಟ್ಟವನ್ನು ಹೆಚ್ಚಿಸುವ ಉದ್ಧೇಶ ಹೊಂದಿದೆ.

ʻಜುಲೈ 27, 2024 ರ ಸಭೆಯಲ್ಲಿ ವಿಕಸಿತ ಭಾರತ @2047 ನಲ್ಲಿ ಮುನ್ನೋಟ ದಾಖಲೆ ಕುರಿತು ಚರ್ಚಿಸುತ್ತದೆ. ಗುರಿ ಸಾಧಿಸುವಲ್ಲಿ ರಾಜ್ಯಗಳ ಪಾತ್ರದ ಕುರಿತು ವಿವರವಾದ ಚರ್ಚೆ ನಡೆಯುತ್ತದೆ,ʼ ಎಂದು ತಿಳಿಸಿದೆ.

ಸಮ್ಮೇಳನದ ಶಿಫಾರಸುಗಳು: ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದ ಮುಖ್ಯ ಕಾರ್ಯದರ್ಶಿಗಳ ಮೂರನೇ ರಾಷ್ಟ್ರೀಯ ಸಮ್ಮೇಳನದ ಶಿಫಾರಸುಗಳ ಬಗ್ಗೆಯೂ ಸಭೆ ಗಮನಹರಿಸಲಿದೆ.

ಈ ಸಮ್ಮೇಳನವು ಕುಡಿಯುವ ನೀರು: ಪ್ರವೇಶ, ಪ್ರಮಾಣ ಮತ್ತು ಗುಣಮಟ್ಟ; ವಿದ್ಯುತ್: ಗುಣಮಟ್ಟ, ದಕ್ಷತೆ ಮತ್ತು ವಿಶ್ವಾಸಾರ್ಹತೆ; ಆರೋಗ್ಯ: ಪ್ರವೇಶಿಸುವಿಕೆ, ಕೈಗೆಟಕುವಿಕೆ ಮತ್ತು ಆರೈಕೆಯ ಗುಣಮಟ್ಟ; ಶಾಲಾ ಶಿಕ್ಷಣ: ಪ್ರವೇಶ ಮತ್ತು ಗುಣಮಟ್ಟ ಮತ್ತು ಭೂಮಿ ಮತ್ತು ಆಸ್ತಿ: ಪ್ರವೇಶ, ಡಿಜಿಟಲೀಕರಣ, ನೋಂದಣಿ ಮತ್ತು ರೂಪಾಂತರ ಕುರಿತು ಶಿಫಾರಸುಗಳನ್ನು ಮಾಡಿದೆ.

ಮುನ್ನೋಟ ದಾಖಲೆ: ಸ್ವಾತಂತ್ರ್ಯದ 100 ನೇ ವರ್ಷವಾದ 2047 ರ ವೇಳೆಗೆ ಭಾರತ 30 ಟ್ರಿಲಿಯನ್‌ ಡಾಲರ್‌ ಆರ್ಥಿಕತೆಯಾಗಲು ಸಹಾಯ ಮಾಡುವ ಮುನ್ನೋಟ ದಾಖಲೆಯನ್ನು ಸಿದ್ಧಪಡಿಸಲಾಗುತ್ತಿದೆ. 2023 ರಲ್ಲಿ ನೀತಿ ಆಯೋಗಕ್ಕೆ 10 ವಲಯದ ವಿಷಯಾಧರಿತ ಮುನ್ನೋಟಗಳನ್ನು ಕ್ರೋಢೀಕರಿಸುವ ಕಾರ್ಯವನ್ನು ವಹಿಸಲಾಯಿತು. ಆರ್ಥಿಕ ಬೆಳವಣಿಗೆ, ಸಾಮಾಜಿಕ ಪ್ರಗತಿ, ಪರಿಸರ ಸುಸ್ಥಿರತೆ ಮತ್ತು ಉತ್ತಮ ಆಡಳಿತ ಸೇರಿದಂತೆ ಅಭಿವೃದ್ಧಿಯ ವಿವಿಧ ಅಂಶಗಳನ್ನು ಒಳಗೊಳ್ಳುತ್ತದೆ.

ಕಾಂಗ್ರೆಸ್ ಸಿಎಂಗಳು, ಸ್ಟಾಲಿನ್, ವಿಜಯನ್ ಸಭೆ ಬಹಿಷ್ಕಾರ: ಕಾಂಗ್ರೆಸ್ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳಾದ ಕರ್ನಾಟಕದ ಸಿದ್ದರಾಮಯ್ಯ, ಹಿಮಾಚಲ ಪ್ರದೇಶದ ಸುಖವಿಂದರ್ ಸಿಂಗ್ ಸುಖು ಮತ್ತು ತೆಲಂಗಾಣದ ರೇವಂತ್ ರೆಡ್ಡಿ ಅವರು ಕೇಂದ್ರ ಬಜೆಟ್‌ನಲ್ಲಿ ತಮ್ಮ ರಾಜ್ಯಗಳಿಗೆ ಪಕ್ಷಪಾತ ತೋರಲಾಗಿದೆ ಎಂದು ಆರೋಪಿಸಿ ಸಭೆಗೆ ಹಾಜರಾಗುವುದಿಲ್ಲ ಎಂದು ಹೇಳಿದ್ದಾರೆ.

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಕೇರಳದ ಸಿಎಂ ಪಿಣರಾಯಿ ವಿಜಯನ್ ಹಾಗೂ ಆಮ್ ಆದ್ಮಿ ಪಕ್ಷದ ನೇತೃತ್ವದ ಪಂಜಾಬ್ ಮತ್ತು ದೆಹಲಿ ಸರ್ಕಾರಗಳು ಕೂಡ ಸಭೆಯನ್ನು ಬಹಿಷ್ಕರಿಸಿವೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶನಿವಾರದ ಸಭೆಗೆ ಹಾಜರಾಗುತ್ತಾರೆಯೇ ಎಂಬುದು ಸ್ಪಷ್ಟವಾಗಿಲ್ಲ. ವಿರೋಧ ಪಕ್ಷಗಳ ನಿರ್ಧಾರವನ್ನು ಬಿಜು ಜನತಾ ದಳ (ಬಿಜೆಡಿ) ಸಂಸದ ಸಸ್ಮಿತ್ ಪಾತ್ರ ಬೆಂಬಲಿಸಿದ್ದಾರೆ. ಬಜೆಟ್‌ನಲ್ಲಿ ರಾಜ್ಯಗಳ ಪಾಲನ್ನು ಕೇಂದ್ರ ನಿರಾಕರಿಸುತ್ತಿದೆ ಎಂದು ಆರೋಪಿಸಿದ್ದಾರೆ. ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಸಂಸದ ಮಹುವಾ ಮಜಿ ಅವರು ತಮ್ಮ ಪಕ್ಷ ರಾಜ್ಯದ ಹಿತಾಸಕ್ತಿ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.

Read More
Next Story