
ಸೋಮನಾಥ ಪುನರ್ನಿರ್ಮಾಣ ವಿರೋಧಿಸಿದ ಶಕ್ತಿಗಳು ಇಂದಿಗೂ ಸಕ್ರಿಯ: ಮೋದಿ
ಸ್ವಾತಂತ್ರ್ಯದ ನಂತರ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ದೇವಾಲಯದ ಪುನರ್ನಿರ್ಮಾಣಕ್ಕೆ ಪ್ರತಿಜ್ಞೆ ಮಾಡಿದಾಗ, ಅವರ ಹಾದಿಯಲ್ಲಿ ಅನೇಕರು ಅಡೆತಡೆಗಳನ್ನು ಉಂಟುಮಾಡಿದ್ದರು ಎಂದು ಪ್ರಧಾನಿ ಸ್ಮರಿಸಿದರು.
ಸ್ವಾತಂತ್ರ್ಯಾನಂತರ ಸೋಮನಾಥ ದೇವಾಲಯದ ಪುನರ್ನಿರ್ಮಾಣವನ್ನು ವಿರೋಧಿಸಿದ ಶಕ್ತಿಗಳು ಇಂದಿಗೂ ಸಕ್ರಿಯವಾಗಿದ್ದು, ಅಂತಹ ಶಕ್ತಿಗಳನ್ನು ಸೋಲಿಸಲು ಭಾರತವು ಸದಾ ಜಾಗೃತವಾಗಿರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಸೋಮನಾಥ ದೇವಾಲಯದ ಮೇಲೆ ಮೊಹಮ್ಮದ್ ಘಜ್ನಿ ದಾಳಿ ನಡೆಸಿ ಸಾವಿರ ವರ್ಷಗಳು (1026-2026) ಪೂರ್ಣಗೊಂಡ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ 'ಸೋಮನಾಥ ಸ್ವಾಭಿಮಾನ ಪರ್ವ' ಉದ್ದೇಶಿಸಿ ಅವರು ಮಾತನಾಡಿದರು.
ಇತಿಹಾಸ ಮರೆಮಾಚಿದ ಶಕ್ತಿಗಳು
ಸೋಮನಾಥದ ಇತಿಹಾಸವು ಕೇವಲ ವಿನಾಶ ಮತ್ತು ಸೋಲಿನ ಕಥೆಯಲ್ಲ, ಅದು ವಿಜಯ ಮತ್ತು ಪುನರುತ್ಥಾನದ ಕಥೆಯಾಗಿದೆ ಎಂದು ಮೋದಿ ಹೇಳಿದರು. "ನಮ್ಮಿಂದ ದ್ವೇಷ ಮತ್ತು ಭಯೋತ್ಪಾದನೆಯ ನೈಜ ಇತಿಹಾಸವನ್ನು ಮರೆಮಾಚಲಾಯಿತು. ಕೇವಲ ಲೂಟಿ ಮಾಡುವ ಉದ್ದೇಶದಿಂದ ದಾಳಿ ನಡೆದಿತ್ತು ಎಂದು ನಮಗೆ ತಪ್ಪು ಪಾಠ ಕಲಿಸಲಾಯಿತು," ಎಂದು ಅವರು ಹಿಂದಿನ ಆಡಳಿತಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಸರ್ದಾರ್ ಪಟೇಲ್‌ಗೆ ಅಡ್ಡಿಪಡಿಸಿದವರ ವಿರುದ್ಧ ಕಿಡಿ
ಸ್ವಾತಂತ್ರ್ಯದ ನಂತರ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ದೇವಾಲಯದ ಪುನರ್ನಿರ್ಮಾಣಕ್ಕೆ ಪ್ರತಿಜ್ಞೆ ಮಾಡಿದಾಗ, ಅವರ ಹಾದಿಯಲ್ಲಿ ಅನೇಕರು ಅಡೆತಡೆಗಳನ್ನು ಉಂಟುಮಾಡಿದ್ದರು ಎಂದು ಪ್ರಧಾನಿ ನೆನಪಿಸಿದರು. "ತುಷ್ಟೀಕರಣದ ರಾಜಕಾರಣದಲ್ಲಿ ತೊಡಗಿದ್ದವರು ಉಗ್ರಗಾಮಿ ಮನಸ್ಥಿತಿಯವರ ಮುಂದೆ ಮಂಡಿಯೂರಿ ನಿಂತಿದ್ದರು. ಅಂತಹ ಶಕ್ತಿಗಳು ಇಂದಿಗೂ ನಮ್ಮ ನಡುವೆ ಇವೆ. ಅವರನ್ನು ಸೋಲಿಸಲು ನಾವು ಒಗ್ಗಟ್ಟಿನಿಂದ ಮತ್ತು ಶಕ್ತಿಯುತವಾಗಿರಬೇಕು," ಎಂದು ಅವರು ಎಚ್ಚರಿಸಿದರು.
ಸಾವಿರ ವರ್ಷಗಳ ಹೋರಾಟ
"ಸೋಮನಾಥದ ಕಥೆಯೇ ಭಾರತದ ಕಥೆಯಾಗಿದೆ. ವಿದೇಶಿ ಆಕ್ರಮಣಕಾರರು ಈ ದೇವಾಲಯದಂತೆ ಭಾರತವನ್ನೂ ನಾಶಮಾಡಲು ಹಲವು ಬಾರಿ ಪ್ರಯತ್ನಿಸಿದರು. ದೇವಾಲಯ ಧ್ವಂಸಗೊಳಿಸಿ ತವು ಗೆದ್ದಿದ್ದೇವೆ ಎಂದು ಅವರು ಭಾವಿಸಿದ್ದರು. ಆದರೆ ಸಾವಿರ ವರ್ಷಗಳ ನಂತರವೂ ಸೋಮನಾಥದ ಧ್ವಜ ಮುಗಿಲೆತ್ತರದಲ್ಲಿ ಹಾರಾಡುತ್ತಿದೆ," ಎಂದು ಪ್ರಧಾನಿ ಹೆಮ್ಮೆಯಿಂದ ಹೇಳಿದರು. ವಿಶ್ವ ಇತಿಹಾಸದಲ್ಲಿ ಇಂತಹ ಸುದೀರ್ಘ ಸಾವಿರ ವರ್ಷಗಳ ಹೋರಾಟಕ್ಕೆ ಬೇರೆ ಉದಾಹರಣೆಯೇ ಇಲ್ಲ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.

