ಪ್ರಧಾನಿಗೆ ಅಧಿಕಾರ ಕಳೆದುಕೊಳ್ಳುವ ಭಯ: ಕಾಂಗ್ರೆಸ್
x

ಪ್ರಧಾನಿಗೆ ಅಧಿಕಾರ ಕಳೆದುಕೊಳ್ಳುವ ಭಯ: ಕಾಂಗ್ರೆಸ್


ಏಪ್ರಿಲ್‌ 8- ಪಕ್ಷ 180 ಸ್ಥಾನ ದಾಟಲು ಹೆಣಗಾಡಲಿದೆ ಎಂಬ ಅಭಿಪ್ರಾಯದ ಹಿನ್ನೆಲೆಯಲ್ಲಿ ಪ್ರಧಾನಿ ಅವರಿಗೆ ಭಯವುಂಟಾಗಿದೆ ಎಂದು ಕಾಂಗ್ರೆಸ್‌ ಟೀಕಿಸಿದೆ.

ಪಕ್ಷದ ಪ್ರಣಾಳಿಕೆಯಲ್ಲಿ 'ಮುಸ್ಲಿಂ ಲೀಗ್ ಛಾಪು' ಇದೆ ಎಂಬ ಟೀಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌, ಬಿಜೆಪಿ ಮತ್ತೆ ಅದೇ ಸವಕಲು ʼಹಿಂದೂ-ಮುಸ್ಲಿಂʼ ಸಂಕಥನವನ್ನು ಆಶ್ರಯಿಸಿದೆ ಎಂದು ದೆಹಲಿಯ ಎಐಸಿಸಿ ಪ್ರಧಾನ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರಿನಾತೆ ಟೀಕಿಸಿದರು.

ಕಾಂಗ್ರೆಸ್‌ ಪ್ರಣಾಳಿಕೆಯು ಮುಸ್ಲಿಂ ಲೀಗ್‌ನ ಛಾಪು ಹೊಂದಿದೆ. ಅದರ ನಾಯಕರ ಮಾತುಗಳು ರಾಷ್ಟ್ರೀಯ ಸಮಗ್ರತೆ ಮತ್ತು ಸನಾತನ ಧರ್ಮದ ಬಗ್ಗೆ ಹಗೆತನವನ್ನು ತೋರಿಸಿದೆ ಎಂದು ಪ್ರಧಾನಿ ಆರೋಪಿಸಿದ್ದರು. ʻಬಿಜೆಪಿ ತನ್ನ ನೆಲೆಯನ್ನು ಕಳೆದುಕೊಳ್ಳುತ್ತಿದೆ. ಇದರಿಂದ ʻಪ್ರಧಾನಿಯವರ ಮುಸ್ಲಿಂ ಲೀಗ್ ಮೇಲಿನ ಪ್ರೀತಿ ಮತ್ತೆ ಹೊರಹೊಮ್ಮಿದೆʼ ಎಂದು ಹೇಳಿದರು.

ಭವಿಷ್ಯಕ್ಕಾಗಿ ಕಾಂಗ್ರೆಸ್ ಪ್ರಣಾಳಿಕೆ: ʻಕಾಂಗ್ರೆಸ್ ಪ್ರಣಾಳಿಕೆ ಕುರಿತು ವ್ಯಾಪಕವಾಗಿ ಚರ್ಚೆ ನಡೆಯುತ್ತಿದೆ; ಪ್ರಣಾಳಿಕೆ ದೇಶದ ಭವಿಷ್ಯದ ನೀಲನಕ್ಷೆಯಾಗಿದೆ. 10 ವರ್ಷ ಕಾಲ ಅಧಿಕಾರ ನಡೆಸಿರುವ ಪ್ರಧಾನಿ ಅವರು ಚುನಾವಣೆ ಹೊಸ್ತಿಲಲ್ಲಿ ಇರುವಾಗ ತಮ್ಮ ಸಾಧನೆಯನ್ನು ತೋರಿಸಿ ಮತ ಕೇಳುವ ಬದಲು ಹಳಸಿದ ಹಿಂದೂ-ಮುಸ್ಲಿಂ ಸಂಕಥನಕ್ಕೆ ವಾಪಸಾಗಿದ್ದಾರೆ ,ʼ ಎಂದು ಹೇಳಿದರು.

ʻಕಾಂಗ್ರೆಸ್‌ನ ಪ್ರಣಾಳಿಕೆ ನ್ಯಾಯದ ಐದು ಸ್ತಂಭಗಳ ಆಧಾರದ ಮೇಲೆ ನಿರ್ಮಿಸಿದ ದೇಶದ ಧ್ವನಿ. ಭಾರತ್ ಜೋಡೋ ಯಾತ್ರಾ ಮತ್ತು ಭಾರತ್ ಜೋಡೋ ನ್ಯಾಯ್ ಯಾತ್ರೆ ವೇಳೆ ಭೇಟಿಯಾದ ಕೋಟ್ಯಂತರ ಜನರ ನಿರೀಕ್ಷೆ, ಆಕಾಂಕ್ಷೆ ಮತ್ತು ಸವಾಲುಗಳನ್ನು ಒಳಗೊಂಡಿದೆ. ಯುವಜನರು, ರೈತರು, ಮಹಿಳೆಯರು ಮತ್ತು ಕಾರ್ಮಿಕರ ಛಾಪನ್ನು ಮತ್ತು ಹೊಸ ಭರವಸೆಯ ಹೊರಹೊಮ್ಮುವಿಕೆಯನ್ನು ಹೊಂದಿದೆ. ನಾವು ಸಮಾಜದ ಅಂಚಿನಲ್ಲಿರುವವರ ಭಾಗವಹಿಸುವಿಕೆ ಮತ್ತು ಪ್ರಾತಿನಿಧ್ಯವನ್ನು ಖಚಿತಪಡಿಸಿಕೊಳ್ಳುತ್ತೇವೆʼ ಎಂದು ಶ್ರೀನಾತೆ ಹೇಳಿದರು.

ʻಕಳೆದ 10 ವರ್ಷಗಳಲ್ಲಿ ಮೋದಿ ಸರ್ಕಾರ ದೇಶದ ಮೇಲೆ ಹೇರಿರುವ ಪ್ರತಿಯೊಂದು ಸಮಸ್ಯೆಗೆ ಕಾಂಗ್ರೆಸ್‌ನ ನ್ಯಾಯಪತ್ರ ಪರಿಹಾರಗಳನ್ನು ಹೊಂದಿದೆ. ನ್ಯಾಯಪತ್ರ ಜನರ ಧ್ವನಿ, ಭಾರತದ ಧ್ವನಿ. ಮೋದಿಯವರ ʻಮುಸ್ಲಿಮ್ ಲೀಗ್‌ನ ಮೇಲಿನ ಪ್ರೀತಿʼ ಹೊಸದೇನಲ್ಲ ಎಂಬುದು ವಾಸ್ತವʼ ಎಂದು ಹೇಳಿದರು.

ಮುಸ್ಲಿಂ ಲೀಗ್ ಜೊತೆಗಿನ ಜನರು: ʻಇವರು ಸ್ವಾತಂತ್ರ್ಯ ಹೋರಾಟದಲ್ಲೂ ಬ್ರಿಟಿಷರ ಜೊತೆ ನಿಂತವರು ಮತ್ತು ಮುಸ್ಲಿಂ ಲೀಗ್ ಜೊತೆಗೆ ಸೇರಿ ಕೋಮು ಬಿರುಕು ಸೃಷ್ಟಿಸುವ ಅವಕಾಶವನ್ನು ಬಿಡಲಿಲ್ಲ.1942ರಲ್ಲಿ ಮಹಾತ್ಮರ ಕರೆಯ ಮೇರೆಗೆ ಆಗಿನ ಕಾಂಗ್ರೆಸ್ ಅಧ್ಯಕ್ಷ ಮೌಲಾನಾ ಆಜಾದ್ ಅವರ ನೇತೃತ್ವದಲ್ಲಿ ಕ್ವಿಟ್ ಇಂಡಿಯಾ ಚಳವಳಿ‌ ನಡೆಯಿತು: ಜನ ಮಾಡು ಇಲ್ಲವೇ ಮಡಿ ಎಂದು ಪ್ರತಿಜ್ಞೆ ಮಾಡಿದ್ದರು. ಆದರೆ, ಶ್ಯಾಮಪ್ರಸಾದ್ ಮುಖರ್ಜಿ ಅವರು ಬಂಗಾಳದಲ್ಲಿ ಸರ್ಕಾರವನ್ನು ನಡೆಸುತ್ತಿದ್ದರು; ಸಾಮೂಹಿಕ ಚಳವಳಿಯನ್ನು ಹೇಗೆ ಹತ್ತಿಕ್ಕಬೇಕು ಎಂಬ ಸಲಹೆ ನೀಡುತ್ತಾ ಬ್ರಿಟಿಷರಿಗೆ ಪತ್ರ ಬರೆಯುತ್ತಿದ್ದರುʼ ಎಂದು ಹೇಳಿದರು.

ʻಇವರು ಮುಸ್ಲಿಂ ಲೀಗ್ ಮತ್ತು ಬ್ರಿಟಿಷರೊಂದಿಗೆ ಆಳವಾದ ಪ್ರೀತಿ, ಅಭಿಮಾನ ಮತ್ತು ಬಾಂಧವ್ಯ ಹೊಂದಿದ್ದಾರೆ. ವಾಸ್ತವ ಏನೆಂದರೆ, ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆಯಾದ ಬಳಿಕ ಬಿಜೆಪಿಯಲ್ಲಿ ಆತಂಕ ಸೃಷ್ಟಿಯಾಗಿದೆ. ಇನ್ನೊಂದು ದೊಡ್ಡ ವಾಸ್ತವವೆಂದರೆ, ಬಿಜೆಪಿಗೆ ಬೆಂಬಲ ಅತ್ಯಂತ ವೇಗವಾಗಿ ಕ್ಷೀಣಿಸುತ್ತಿದೆ. ಇತ್ತೀಚಿನ ಆತಂರಿಕ ಸಮೀಕ್ಷೆಗಳು ಅವರು 180 ಸ್ಥಾನಗಳ ಗಡಿ ದಾಟಲು ಹೆಣಗಾಡುತ್ತಿದ್ದಾರೆ ಎಂದಿವೆʼ ಎಂದು ಹೇಳಿದರು.

ಕಾಂಗ್ರೆಸ್ ಭರವಸೆಗಳನ್ನು ಈಡೇರಿಸಿದೆ: ʻಹಿಮಾಚಲ ಪ್ರದೇಶ, ತೆಲಂಗಾಣ ಮತ್ತು ಕರ್ನಾಟಕದಲ್ಲಿ ಕಾಂಗ್ರೆಸ್ ನುಡಿದಂತೆ ನಡೆದಿದೆ ಎಂದು ಜನ ನಂಬಿದ್ದಾರೆ. ಈ ಸರ್ಕಾರಗಳು ಸಮಾಜದ ಎಲ್ಲ ವರ್ಗವನ್ನು ಗಮನದಲ್ಲಿಟ್ಟುಕೊಂಡು ಅನೇಕ ಜನಕಲ್ಯಾಣ ಯೋಜನೆಗಳನ್ನು ರೂಪಿಸಿವೆ. ಎಲ್ಲಾ ಭರವಸೆಗಳನ್ನು ಪೂರೈಸಿವೆʼ ಎಂದು ಹೇಳಿದರು.

ʻಮೋದಿಜಿ, ಗ್ಯಾರಂಟಿ ಎಂಬ ಪದವನ್ನು ಕಳವು ಮಾಡಿರುವ ನಿಮ್ಮ ಮಾತನ್ನು ಯಾರೂ ಕೇಳುವುದಿಲ್ಲ. ದೇಶವು ನಿಮ್ಮ ಹಿಂದಿನ 'ಜುಮ್ಲಾಗಳ'ನ್ನು ಹುಡುಕುತ್ತಿದೆ. ಆದ್ದರಿಂದ ವಿಚಲಿತರಾಗಬೇಡಿ ಮತ್ತು ಹೊರಡಲು ಚೀಲಗಳನ್ನು ಸಿದ್ಧಮಾಡಿಕೊಂಡಿರಿʼ ಎಂದು ಹೇಳಿದರು.

Read More
Next Story