ವಿವೇಕಾನಂದ ಸ್ಮಾರಕದಲ್ಲಿ ಸೂರ್ಯ ಅರ್ಘ್ಯ ನೀಡಿದ ಪ್ರಧಾನಿ
x

ವಿವೇಕಾನಂದ ಸ್ಮಾರಕದಲ್ಲಿ 'ಸೂರ್ಯ ಅರ್ಘ್ಯ' ನೀಡಿದ ಪ್ರಧಾನಿ

ಪ್ರಧಾನಿ ಕನ್ಯಾಕುಮಾರಿಯ ಭಗವತಿ ಅಮ್ಮನ್ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.


ಪ್ರಧಾನಿ ನರೇಂದ್ರ ಮೋದಿ ಅವರು ಧ್ಯಾನದ ಅಂಗವಾಗಿ ಕನ್ಯಾಕುಮಾರಿಯಲ್ಲಿರುವ ವಿವೇಕಾನಂದ ಸ್ಮಾರಕದಲ್ಲಿ ಸೂರ್ಯೋದಯದ ಸಮಯದಲ್ಲಿ 'ಸೂರ್ಯ ಅರ್ಘ್ಯ' ನೀಡಿದರು.

'ಸೂರ್ಯ ಅರ್ಘ್ಯ' ಎಂಬ ಧಾರ್ಮಿಕ ಆಚರಣೆಯು ಸರ್ವಶಕ್ತನಿಗೆ ನಮಸ್ಕಾರವನ್ನು ಒಳಗೊಂಡಿದ್ದು,ಪ್ರಧಾನಿ ಅದರ ಅಂಗವಾಗಿ ಪ್ರಾರ್ಥನೆ ಸಲ್ಲಿಸಿದರು.

'ಸೂರ್ಯೋದಯ, ಸೂರ್ಯ ಅರ್ಘ್ಯ, ಆಧ್ಯಾತ್ಮಿಕತೆ' ಎಂಬ ಕಿರು ವೀಡಿಯೊವನ್ನು ಬಿಜೆಪಿ ತನ್ನ 'ಎಕ್ಸ್' ಖಾತೆಯಲ್ಲಿ ಹಂಚಿಕೊಂಡಿದೆ. ಸಣ್ಣ ಪಾತ್ರೆಯಿಂದ ಸ್ವಲ್ಪ ನೀರನ್ನು ಸಮುದ್ರಕ್ಕೆ ನೈವೇದ್ಯ (ಅರ್ಘ್ಯ) ಅರ್ಪಿಸಿ, ಪ್ರಾರ್ಥಿಸಿದರು. ಪ್ರಾರ್ಥನೆಗೆ ಜಪ ಮಾಲೆಯನ್ನು ಬಳಸಿದರು.

ಕೇಸರಿ ವಸ್ತ್ರ ಅಂಗಿ, ಶಾಲು ಮತ್ತು ಧೋತಿ ಧರಿಸಿ ಧ್ಯಾನ ಮಂಟಪದಲ್ಲಿ ಕುಳಿತ ಪ್ರಧಾನಿ ಅವರ ಚಿತ್ರಗಳನ್ನು ಬಿಜೆಪಿ ಪೋಸ್ಟ್ ಮಾಡಿದೆ. ಅವರ ಮುಂದೆ ಅಗರಬತ್ತಿ ನಿಧಾನವಾಗಿ ಉರಿಯುತ್ತಿದೆ. ಅವರು ಜಪಮಾಲೆಯನ್ನು ಕೈಯಲ್ಲಿ ಹಿಡಿದು ಪ್ರದಕ್ಷಿಣೆ ಮಾಡಿದರು.

ಕನ್ಯಾಕುಮಾರಿ ಸೂರ್ಯೋದಯ ಮತ್ತು ಸೂರ್ಯಾಸ್ತಕ್ಕೆ ಹೆಸರುವಾಸಿಯಾಗಿದ್ದು, ಸ್ಮಾರಕವು ತೀರದ ಸಮೀಪವಿರುವ ಸಣ್ಣ ದ್ವೀಪದಲ್ಲಿದೆ. ಮೇ 30 ರ ಸಂಜೆ ಧ್ಯಾನ ಆರಂಭಿಸಿರುವ ಅವರು, ಜೂನ್ 1 ರ ಸಂಜೆ ಪೂರ್ಣಗೊಳಿಸಲಿದ್ದಾರೆ. ಅವರು ಗುರುವಾರ ಕನ್ಯಾಕುಮಾರಿಯಲ್ಲಿರುವ ಭಗವತಿ ಅಮ್ಮನ್ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.

ವ್ಯಾಪಕ ಚುನಾವಣೆ ಪ್ರಚಾರ: ಈ ಚುನಾವಣೆಯಲ್ಲಿ ಅವರು 75 ದಿನಗಳಲ್ಲಿ ಸಭೆ, ರೋಡ್‌ಶೋ ಸೇರಿದಂತೆ 206 ಪ್ರಚಾರ ಕಾರ್ಯಕ್ರಮ ನಡೆಸಿದ್ದಾರೆ. ವಿವಿಧ ಸುದ್ದಿ ಮತ್ತು ಮಾಧ್ಯಮ ವೇದಿಕೆಗಳಿಗೆ 80 ಸಂದರ್ಶನ ನೀಡಿದ್ದಾರೆ.

ಚುನಾವಣೆ ಪ್ರಚಾರದ ಕೊನೆಯಲ್ಲಿ ಅವರು ಅಧ್ಯಾತ್ಮಿಕ ಪ್ರಯಾಣ ಕೈಗೊಳ್ಳುತ್ತಾರೆ. 2014 ರಲ್ಲಿ ಪ್ರತಾಪಗಢಕ್ಕೆ ಹಾಗೂ 2019 ರಲ್ಲಿ ಕೇದಾರನಾಥಕ್ಕೆ ಭೇಟಿ ನೀಡಿದ್ದರು. 543 ಲೋಕಸಭೆ ಸ್ಥಾನಗಳಿಗೆ ಏಪ್ರಿಲ್ 19 ರಿಂದ ಏಳು ಹಂತಗಳಲ್ಲಿ ಚುನಾವಣೆ ನಡೆಯುತ್ತಿದೆ. ಜೂನ್ 4 ರಂದು ಮತ ಎಣಿಕೆ ನಡೆಯಲಿದೆ.

Read More
Next Story