ಮನ್ ಕಿ ಬಾತ್‌| ದುಬೈ ಕನ್ನಡ ಪಾಠಶಾಲೆ, ಐಐಎಸ್‌ಸಿ ಸಾಧನೆ ಶ್ಲಾಘಿಸಿದ ಪ್ರಧಾನಿ ಮೋದಿ
x

ಮನ್ ಕಿ ಬಾತ್‌| ದುಬೈ ಕನ್ನಡ ಪಾಠಶಾಲೆ, ಐಐಎಸ್‌ಸಿ ಸಾಧನೆ ಶ್ಲಾಘಿಸಿದ ಪ್ರಧಾನಿ ಮೋದಿ

ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (ಐಐಎಸ್‌ಸಿ) ವಿಜ್ಞಾನದ ಜೊತೆಗೆ ಸಂಗೀತಕ್ಕೂ ಒತ್ತು ನೀಡಲಾಗುತ್ತಿದೆ. ಅಲ್ಲಿನ ಲಘು ಸಂಗೀತ ತರಗತಿಯು ಇಂದು 'ಗೀತಾಂಜಲಿ ಐಐಎಸ್‌ಸಿ' ಎಂಬ ಸಾಂಸ್ಕೃತಿಕ ಕೇಂದ್ರವಾಗಿ ಬೆಳೆದಿದೆ.


ಪ್ರಧಾನಮಂತ್ರಿ ನರೇಂದ್ರ ಮೋದಿ 'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ 2025ನೇ ವರ್ಷದ ಭಾರತದ ಐತಿಹಾಸಿಕ ಸಾಧನೆಗಳನ್ನು ಮೆಲುಕು ಹಾಕುತ್ತಾ, ಕರ್ನಾಟಕದ ಸಂಸ್ಕೃತಿ ಮತ್ತು ಶಿಕ್ಷಣ ಸಂಸ್ಥೆಗಳ ಕೊಡುಗೆಯನ್ನು ವಿಶೇಷವಾಗಿ ಸ್ಮರಿಸಿದ್ದಾರೆ. ದುಬೈನಲ್ಲಿ ಕನ್ನಡ ಭಾಷೆಯನ್ನು ಬೆಳೆಸುತ್ತಿರುವ 'ಕನ್ನಡ ಪಾಠಶಾಲೆ' ಮತ್ತು ಬೆಂಗಳೂರಿನ ಐಐಎಸ್‌ಸಿಯ ಸಾಂಸ್ಕೃತಿಕ ಉಪಕ್ರಮಗಳನ್ನು ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ತಮ್ಮ ಭಾಷಣದಲ್ಲಿ ಕರ್ನಾಟಕದ ಹಿರಿಮೆಯನ್ನು ಪ್ರಸ್ತಾಪಿಸಿದ ಪ್ರಧಾನಿ ನರೇಂದ್ರ ಮೋದಿ, ಭಾರತೀಯರು ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ತಮ್ಮ ಬೇರುಗಳನ್ನು ಮರೆತಿಲ್ಲ ಎಂಬುದಕ್ಕೆ ದುಬೈನ 'ಕನ್ನಡ ಪಾಠಶಾಲೆ' ಅತ್ಯುತ್ತಮ ಉದಾಹರಣೆ ಎಂದರು. ಅಲ್ಲಿನ ಮಕ್ಕಳಿಗೆ ಕನ್ನಡವನ್ನು ಓದಲು, ಬರೆಯಲು ಮತ್ತು ಮಾತನಾಡಲು ಕಲಿಸಲಾಗುತ್ತಿದೆ. ಇಂದು ಸಾವಿರಕ್ಕೂ ಹೆಚ್ಚು ಮಕ್ಕಳು ಈ ಪಾಠಶಾಲೆಯೊಂದಿಗೆ ಸಂಯೋಜಿತರಾಗಿರುವುದು ಹೆಮ್ಮೆಯ ವಿಷಯ ಎಂದು ಅವರು ತಿಳಿಸಿದರು.

ಅಲ್ಲದೆ, ಬೆಂಗಳೂರಿನ ಪ್ರತಿಷ್ಠಿತ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (ಐಐಎಸ್‌ಸಿ) ವಿಜ್ಞಾನದ ಜೊತೆಗೆ ಸಂಗೀತಕ್ಕೂ ಒತ್ತು ನೀಡಲಾಗುತ್ತಿದೆ. ಅಲ್ಲಿನ ಲಘು ಸಂಗೀತ ತರಗತಿಯು ಇಂದು 'ಗೀತಾಂಜಲಿ ಐಐಎಸ್‌ಸಿ' ಎಂಬ ಸಾಂಸ್ಕೃತಿಕ ಕೇಂದ್ರವಾಗಿ ಬೆಳೆದು, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಮತ್ತು ಜಾನಪದ ಕಲೆಗಳನ್ನು ಪೋಷಿಸುತ್ತಿದೆ ಎಂದು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು.

2025: ಭಾರತದ ಹೆಮ್ಮೆಯ ವರ್ಷ

2025ನೇ ವರ್ಷವು ಭಾರತದ ಪಾಲಿಗೆ ಅದ್ಭುತವಾಗಿತ್ತು ಎಂದು ಬಣ್ಣಿಸಿದ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಭದ್ರತೆಯಿಂದ ಕ್ರೀಡೆಯವರೆಗೆ ಭಾರತ ತನ್ನ ಛಾಪು ಮೂಡಿಸಿದೆ ಎಂದರು. 'ಆಪರೇಷನ್ ಸಿಂದೂರ್' ಭಾರತದ ಭದ್ರತಾ ಸಾಮರ್ಥ್ಯದ ಸಂಕೇತವಾಗಿ ಹೊರಹೊಮ್ಮಿತು. ಕ್ರೀಡಾ ಕ್ಷೇತ್ರದಲ್ಲಿ ಭಾರತದ ಪುರುಷರ ತಂಡ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದರೆ, ಮಹಿಳಾ ಕ್ರಿಕೆಟ್ ತಂಡ ಮೊದಲ ಬಾರಿಗೆ ವಿಶ್ವಕಪ್ ಜಯಿಸಿ ಇತಿಹಾಸ ನಿರ್ಮಿಸಿತು. ಅಂಧ ಮಹಿಳೆಯರ ಟಿ20 ವಿಶ್ವಕಪ್ ಮತ್ತು ಪ್ಯಾರಾ ಅಥ್ಲೀಟ್‌ಗಳ ಸಾಧನೆಯನ್ನು ಅವರು ಕೊಂಡಾಡಿದರು.

ಇನ್ನು, ಬಾಹ್ಯಾಕಾಶ ಕ್ಷೇತ್ರದಲ್ಲಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತಲುಪಿದ ಮೊದಲ ಭಾರತೀಯ ಎನಿಸಿಕೊಂಡರು. ಪರಿಸರ ಸಂರಕ್ಷಣೆಯಲ್ಲಿ ಭಾರತದ ಚೀತಾಗಳ ಸಂಖ್ಯೆ 30 ದಾಟಿದೆ. ಸಾಂಸ್ಕೃತಿಕವಾಗಿ ಪ್ರಯಾಗ್‌ರಾಜ್ ಮಹಾಕುಂಭ ಮತ್ತು ಅಯೋಧ್ಯೆಯ ರಾಮಮಂದಿರದ ಧ್ವಜಾರೋಹಣ ಪ್ರತಿಯೊಬ್ಬ ಭಾರತೀಯನಲ್ಲೂ ಭಕ್ತಿ ಮತ್ತು ಹೆಮ್ಮೆಯನ್ನು ತುಂಬಿದೆ ಎಂದು ಹೇಳಿದರು.

'ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ 2025' ಯಶಸ್ಸಿನ ಬಗ್ಗೆ ಮಾತನಾಡಿದ ಅವರು, ಯುವಜನರು ಸೈಬರ್ ಭದ್ರತೆ ಮತ್ತು ಸಂಚಾರ ನಿರ್ವಹಣೆಯಂತಹ ಗಂಭೀರ ಸಮಸ್ಯೆಗಳಿಗೆ ತಾಂತ್ರಿಕ ಪರಿಹಾರಗಳನ್ನು ಕಂಡುಕೊಂಡಿದ್ದಾರೆ ಎಂದರು. ಜನವರಿ 12 ರಂದು 'ರಾಷ್ಟ್ರೀಯ ಯುವ ದಿನ'ದಂದು ನಡೆಯಲಿರುವ 'ವಿಕಸಿತ ಭಾರತ ಯುವ ನಾಯಕರ ಸಂವಾದ'ದಲ್ಲಿ ಪಾಲ್ಗೊಳ್ಳುವುದಾಗಿ ಅವರು ತಿಳಿಸಿದರು.

ಆರೋಗ್ಯ ಮತ್ತು ಸಾಮಾಜಿಕ ಜಾಗೃತಿ

ಇದೇ ವೇಳೆ ಆಂಟಿಬಯೋಟಿಕ್ಸ್‌ಗಳ ಮಿತಿಮೀರಿದ ಬಳಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಪ್ರಧಾನಿ, ವೈದ್ಯರ ಸಲಹೆಯಿಲ್ಲದೆ ಔಷಧ ಸೇವಿಸದಂತೆ ಎಚ್ಚರಿಸಿದರು. ಒಡಿಶಾದ ಸ್ವಾತಂತ್ರ್ಯ ಹೋರಾಟಗಾರ್ತಿ ಪಾರ್ವತಿ ಗಿರಿ ಅವರ ಜನ್ಮಶತಮಾನೋತ್ಸವದ ಅಂಗವಾಗಿ ಅವರಿಗೆ ಗೌರವ ಸಲ್ಲಿಸಿದರು. ಆಂಧ್ರದ ನರಸಾಪುರ ಲೇಸ್ ಕರಕುಶಲತೆ ಮತ್ತು ಮಣಿಪುರದ ಸೌರಶಕ್ತಿ ಅಭಿಯಾನದಂತಹ ಸ್ಥಳೀಯ ಯಶಸ್ಸಿನ ಕಥೆಗಳನ್ನು ಅವರು ಹಂಚಿಕೊಂಡರು.

2026ನೇ ವರ್ಷವು 'ವಿಕಸಿತ ಭಾರತ'ದ ಸಂಕಲ್ಪಕ್ಕೆ ಪ್ರಮುಖ ಮೈಲಿಗಲ್ಲಾಗಲಿದೆ ಎಂದು ಆಶಿಸಿದ ಪ್ರಧಾನಿ, ದೇಶವಾಸಿಗಳಿಗೆ ಹೊಸ ವರ್ಷದ ಶುಭಾಶಯಗಳನ್ನು ಕೋರಿದರು ಮತ್ತು 'ಫಿಟ್ ಇಂಡಿಯಾ' ಅಭಿಯಾನದ ಭಾಗವಾಗಲು ಪ್ರಧಾನಿ ಕರೆ ನೀಡಿದರು.

ಐತಿಹಾಸಿಕ ಧ್ವಜಾರೋಹಣಕ್ಕೆ ರಾಮ ಮಂದಿರ ಸಾಕ್ಷಿ

ಸಾಂಸ್ಕೃತಿಕ ಮತ್ತು ಆರ್ಥಿಕ ರಂಗದಲ್ಲಿ 2025 ಭಾರತಕ್ಕೆ ಅತ್ಯಂತ ಮಹತ್ವದ ವರ್ಷವಾಗಿತ್ತು. ವರ್ಷದ ಆರಂಭದಲ್ಲಿ ಪ್ರಯಾಗ್‌ರಾಜ್‌ನಲ್ಲಿ ನಡೆದ ಭವ್ಯ ಮಹಾಕುಂಭ ಮೇಳವು ತನ್ನ ಆಧ್ಯಾತ್ಮಿಕ ವೈಭವದಿಂದ ಇಡೀ ಜಗತ್ತನ್ನೇ ಬೆರಗುಗೊಳಿಸಿದರೆ, ವರ್ಷಾಂತ್ಯದಲ್ಲಿ ಅಯೋಧ್ಯೆಯ ರಾಮ ಮಂದಿರದಲ್ಲಿ ನಡೆದ ಐತಿಹಾಸಿಕ ಧ್ವಜಾರೋಹಣ ಸಮಾರಂಭವು ಪ್ರತಿಯೊಬ್ಬ ಭಾರತೀಯನಲ್ಲೂ ಭಕ್ತಿ ಮತ್ತು ಸಾಂಸ್ಕೃತಿಕ ಹೆಮ್ಮೆಯ ಪರಾಕಾಷ್ಠೆಯನ್ನು ಮೂಡಿಸಿತು. ಇದರ ಜೊತೆಗೆ, 'ಮೇಕ್ ಇನ್ ಇಂಡಿಯಾ' ಅಭಿಯಾನದ ಅಡಿಯಲ್ಲಿ ಸ್ವದೇಶಿ ಉತ್ಪನ್ನಗಳ ಬಗ್ಗೆ ಜನರು ತೋರಿದ ಅಭೂತಪೂರ್ವ ಉತ್ಸಾಹವು ದೇಶದ ಆರ್ಥಿಕತೆಯನ್ನು ಬಲಪಡಿಸುವುದಲ್ಲದೆ, ಭಾರತದ ಆತ್ಮವಿಶ್ವಾಸ ಮತ್ತು ಸ್ವಾವಲಂಬನೆಯನ್ನು ಜಗತ್ತಿನ ವೇದಿಕೆಯಲ್ಲಿ ಹೊಸ ಎತ್ತರಕ್ಕೆ ಕೊಂಡೊಯ್ದಿದೆ ಎಂದು ಪ್ರಧಾನಿ ಮೋದಿ ಶ್ಲಾಘಿಸಿದರು.

Read More
Next Story