Indian Navy: ನೌಕಾಪಡೆಗೆ ಮೂರು ಯುದ್ಧ ನೌಕೆಗಳ ಸೇರ್ಪಡೆ ; ಪ್ರಧಾನಿ ಮೋದಿ ಹಸಿರು ನಿಶಾನೆ
Indian Navy: 'ಹಂಟರ್-ಕಿಲ್ಲರ್' ಜಲಾಂತರ್ಗಾಮಿ ಐಎನ್‌ಎಸ್ ವಘಶೀರ್, ಕ್ಷಿಪಣಿ ನಾಶಕ ನೌಕೆ ಐಎನ್ಎಸ್ ಸೂರತ್ ಮತ್ತು ಸ್ಟೆಲ್ತ್ ಫ್ರಿಗೇಟ್ ಐಎನ್ಎಸ್ ನೀಲಗಿರಿಗಳು ಭಾರತೀಯ ನೌಕಾಪಡೆಯ ಸಾಮರ್ಥ್ಯವನ್ನು ವಿಶ್ವಕ್ಕೆ ತೋರಿಸಲಿದೆ.
ಭಾರತದ ನೌಕಾಪಡೆಗೆ ಮೂರು ಶಕ್ತಿಗಳು ಸೇರ್ಪಡೆಗೊಂಡಿವೆ. ಈ ಮೂಲಕ ಯುದ್ಧ ನೀತಿಯಲ್ಲಿ ಇನ್ನುಷ್ಟು ಸದೃಢಗೊಂಡಿದೆ. ಬುಧವಾರ ಐಎನ್ಎಸ್ ಸೂರತ್, ಐಎನ್ಎಸ್ ನೀಲಗಿರಿ ಮತ್ತು ಐಎನ್ಎಸ್ ವಘಶೀರ್ ಎಂಬ ಮೂರು ಮಹತ್ವದ ಯುದ್ಧ ನೌಕೆಗಳು ನೌಕಾಪಡೆ ಸೇರಿದೆ. ಪ್ರಧಾನಿ ನರೇಂದ್ರ ಮೋದಿಯವವರು ಮುಂಬೈನಲ್ಲಿ ಈ ನೌಕೆಗಳಿಗೆ ಹಸಿರು ನಿಶಾನೆ ತೋರಿದ್ದಾರೆ.
'ಹಂಟರ್-ಕಿಲ್ಲರ್' ಜಲಾಂತರ್ಗಾಮಿ ಐಎನ್‌ಎಸ್ ವಘಶೀರ್, ಕ್ಷಿಪಣಿ ನಾಶಕ ನೌಕೆ ಐಎನ್ಎಸ್ ಸೂರತ್ ಮತ್ತು ಸ್ಟೆಲ್ತ್ ಫ್ರಿಗೇಟ್ ಐಎನ್ಎಸ್ ನೀಲಗಿರಿಗಳು ಭಾರತೀಯ ನೌಕಾಪಡೆಯ ಸಾಮರ್ಥ್ಯವನ್ನು ವಿಶ್ವಕ್ಕೆ ತೋರಿಸಲಿದೆ. ಪ್ರಮುಖವಾಗಿ ನೆರೆಯ ಚೀನಾ ಮತ್ತು ಪಾಕಿಸ್ತಾನಗಳ ಬೆದರಿಕೆಗೆ ಪ್ರತಿರೋಧ ಒಡ್ಡಲಿದೆ.
ಮೂರು ಯುದ್ಧ ನೌಕೆಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, "ಭಾರತೀಯ ನೌಕಾಪಡೆಯು ಈಗ ಜಗತ್ತಿನ ಪ್ರಮುಖ ನೌಕಾಶಕ್ತಿಯಾಗಿ ಎನಿಸಿಕೊಳ್ಳುತ್ತಿದೆ. ಯುದ್ಧ ಸಾಮರ್ಥ್ಯದ ನೌಕೆಗಳ ನಿರ್ಮಾಣದಂಥ ಕ್ಷೇತ್ರಗಳ ವಿಸ್ತರಣೆಯು ಆತ್ಮನಿರ್ಭರ ಭಾರತದ ಪರಿಕಲ್ಪನೆಯೂ ಹೌದು. ಮರಾಠ ದೊರೆ ಛತ್ರಪತಿ ಶಿವಾಜಿ ಭಾರತೀಯ ನೌಕಾಪಡೆಗೆ ಹೊಸ ಹೊಸ ದೃಷ್ಟಿಕೋನ ಕಲ್ಪಿಸಿದ್ದಾರೆ. ಈಗ ಅವರದ್ದೇ ನೆಲದಲ್ಲಿ ನಾವು 21ನೇ ಶತಮಾನದ ನೌಕಾಪಡೆಗೆ ಹೆಚ್ಚಿನ ಶಕ್ತಿ ತಂದುಕೊಂಡಿದ್ದೇವೆ. ಡೆಸ್ಟ್ರಾಯರ್, ಫ್ರಿಗೇಟ್ ಮತ್ತು ಸಬ್ ಮರೀನ್ ಏಕಕಾಲಕ್ಕೆ ನೌಕಾಪಡೆಗೆ ಸೇರ್ಪಡೆಯಾಗುತ್ತಿರುವುದು ಭಾರತೀಯ ನೌಕಾಸೇನೆಯ ಇತಿಹಾಸದಲ್ಲಿ ಅವಿಸ್ಮರಣೀಯ ಕ್ಷಣ " ಎಂದು ಹೇಳಿದ್ದಾರೆ.
ಮೂರು ನೌಕೆಗಳ ವೈಶಿಷ್ಟ್ಯಗಳು
ಐಎನ್ಎಸ್ ವಘಶೀರ್
ಐಎನ್ಎಸ್ ವಘಶೀರ್ ಪಿ75 ಸ್ಕಾರ್ಪೀನ್ ಯೋಜನೆಯ 6ನೇ ಮತ್ತು ಅಂತಿಮ ಜಲಾಂತರ್ಗಾಮಿ. ಇದನ್ನು ಫ್ರಾನ್ಸ್‌ನ ನೇವಲ್ ಗ್ರೂಪ್‌ನ ಸಹಭಾಗಿತ್ವದಲ್ಲಿ ನಿರ್ಮಿಸಲಾಗಿದೆ. ಐಎನ್ಎಸ್ ವಘಶೀರ್ ಅನ್ನು 'ಹಂಟರ್-ಕಿಲ್ಲರ್ ಸಬ್‌ಮರೀನ್' (ಬೇಟೆಯಾಡಿ ಹತ್ಯೆಗೈಯ್ಯುವ ಜಲಾಂತರ್ಗಾಮಿ) ಎಂದೂ ಕರೆಯಲಾಗುತ್ತದೆ. ಟಾರ್ಪಿಡೋಗಳು, ನೌಕೆ ನಿಗ್ರಹ ಕ್ಷಿಪಣಿಗಳು ಅಡಕಗೊಂಡಿವೆ. ಗುಪ್ತಚರ ಮಾಹಿತಿ ಸಂಗ್ರಹ ಮತ್ತು ನೆಲಬಾಂಬ್‌ಗಳನ್ನು ಹುದುಗಿಸಿಟ್ಟು ವೈರಿಗಳ ನೌಕೆಗಳನ್ನು ನಾಶ ಮಾಡುವ ಸಾಮರ್ಥ್ಯವನ್ನೂ ಇವು ಹೊಂದಿವೆ.
ಐಎನ್ಎಸ್ ಸೂರತ್
ಇದೊಂದು ನಿರ್ದೇಶಿಕ ಕ್ಷಿಪಣಿ ನಾಶಕ ನೌಕೆ. ಇದು ಜಗತ್ತಿನ ಅತಿದೊಡ್ಡ ಮತ್ತು ಅತ್ಯಾಧುನಿಕ ಡೆಸ್ಟ್ರಾಯರ್ ಈ ನೌಕೆಯನ್ನು ಬಹುತೇಕ (ಶೇಕಡಾ ೭೫) ದೇಶೀಯವಾಗಿ ನಿರ್ಮಿಸಲಾಗಿದೆ. ಅತ್ಯಾಧುನಿಕ ಶಸ್ತ್ರಾಸ್ತ್ರ ಸೆನ್ಸರ್ ಗಳು ಇದರಲ್ಲಿರಲಿವೆ. ಪರೀಕ್ಷಾರ್ಥ ಸಂಚಾರದ ವೇಳೆ ಗಂಟೆಗೆ ಇದು 57 ಕಿಲೋ ಮೀಟರ್ ಸಾಗಿದೆ.
ಐಎನ್ಎಸ್ ನೀಲಗಿರಿ
ಇದು ಪಿ17ಎ ಸ್ಟೆಲ್ತ್ ಫ್ರಿಗೇಟ್ ಪ್ರಾಜೆಕ್ಟ್‌ನ ಮೊದಲ ನೌಕೆ. ಭಾರತೀಯ ನೌಕಾಪಡೆಯ ಯುದ್ಧನೌಕೆ ವಿನ್ಯಾಸ ಬ್ಯೂರೋ ಇದನ್ನು ವಿನ್ಯಾಸಗೊಳಿಸಿದೆ . ಸೂಪರ್ ಸಾನಿಕ್ ಕ್ಷಿಪಣಿ ವ್ಯವಸ್ಥೆ, 76 ಎಂಎಂ ಮೇಲ್ದರ್ಜೆಗೇರಿಸಿದ ಗನ್, ಕ್ಷಿಪ್ರ ಫೈರಿಂಗ್ ಸಾಮರ್ಥ್ಯ ಶಸ್ತ್ರಾಸ್ತ್ರ ವ್ಯವಸ್ಥೆ ಇದರಲ್ಲಿವೆ.