ಇಂಡಿಯ ಒಕ್ಕೂಟದ್ದು ಕಮಿಷನ್‌ ಉದ್ದೇಶ: ಪ್ರಧಾನಿ‌
x

ಇಂಡಿಯ ಒಕ್ಕೂಟದ್ದು ಕಮಿಷನ್‌ ಉದ್ದೇಶ: ಪ್ರಧಾನಿ‌


ಸಹರಾನ್‌ಪುರ (ಯುಪಿ), ಅ. 6- ಅಧಿಕಾರಕ್ಕೆ ಬಂದ ನಂತರ ಕಮಿಷನ್ ಗಳಿಕೆ ಇಂಡಿಯ ಒಕ್ಕೂಟದ ಗುರಿ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದರು.

ಸಹರಾನ್‌ಪುರದಲ್ಲಿ ನಡೆದ ಚುನಾವಣೆ ಸಭೆಯಲ್ಲಿ ಮಾತನಾಡಿ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 370 ಕ್ಕೂ ಹೆಚ್ಚು ಸ್ಥಾನ ಗೆಲ್ಲುವುದನ್ನು ತಡೆಯಲು ವಿರೋಧ ಪಕ್ಷಗಳು ಹೋರಾಡುತ್ತಿವೆ. ಬಿಜೆಪಿ ನೇತೃತ್ವದ ಎನ್‌ಡಿಎಗೆ ಒಂದು ಗುರಿಯಿದೆ ಎಂದು ಪ್ರಧಾನಿ ಹೇಳಿದರು.

ʻಕಾಂಗ್ರೆಸ್‌ ಆಡಳಿತದಲ್ಲಿದ್ದಾಗ ಅದರ ಗಮನ ಕಮಿಷನ್ ಗಳಿಕೆ ಮೇಲೆ ಕೇಂದ್ರೀಕೃತವಾಗಿತ್ತು.ಇಂಡಿಯ ಮೈತ್ರಿಕೂಟ ಕೂಡ ಅಧಿಕಾರಕ್ಕೆ ಬಂದ ನಂತರ ಕಮಿಷನ್ ಗಳಿಸುವ ಗುರಿಯನ್ನು ಹೊಂದಿದೆ. ಆದರೆ, ಎನ್‌ಡಿಎ ಮತ್ತು ಮೋದಿ ಸರ್ಕಾರಕ್ಕೆ ಒಂದು ಗುರಿ ಇದೆʼ ಎಂದರು.

ʻಬಿಜೆಪಿ 370 ಕ್ಕೂ ಹೆಚ್ಚು ಸ್ಥಾನ ಗೆಲ್ಲುವುದನ್ನು ತಡೆಯಲು ಪ್ರತಿಪಕ್ಷಗಳು ಹೋರಾಡುತ್ತಿವೆ. ಸಮಾಜವಾದಿ ಪಕ್ಷ ಗಂಟೆಗೊಮ್ಮೆ ಅಭ್ಯರ್ಥಿಗಳನ್ನು ಬದಲಾಯಿಸುತ್ತಿದೆ. ಆದರೆ, ಕಾಂಗ್ರೆಸ್‌ಗೆ ಕಣಕ್ಕಿಳಿಸಲು ಅಭ್ಯರ್ಥಿಗಳು ಸಿಗುತ್ತಿಲ್ಲ.ಕಾಂಗ್ರೆಸ್ ತನ್ನ ಭದ್ರಕೋಟೆ ಎಂದು ಪರಿಗಣಿಸಿದ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಧೈರ್ಯ ತೋರಿಸಿಲ್ಲʼ ಎಂದು ಹೇಳಿದರು.

ʻಕಾಂಗ್ರೆಸ್ ಪ್ರಣಾಳಿಕೆಯು ಮುಸ್ಲಿಂ ಲೀಗ್‌ನ ಮುದ್ರೆಯನ್ನು ಹೊಂದಿದೆ ಮತ್ತು ಅದರಲ್ಲಿ ಎಡಪಂಥೀಯರ ಪ್ರಾಬಲ್ಯವಿದೆ. ಇಂಡಿಯ ಒಕ್ಕೂಟ ಅಸ್ಥಿರತೆ ಮತ್ತು ಅನಿಶ್ಚಿತತೆಗೆ ಸಮಾನಾರ್ಥಕ. ದೇಶದ ಜನರು ಅದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲʼ ಎಂದು ಪ್ರಧಾನಿ ಹೇಳಿದರು.

ʼಇಂಡಿಯ ಒಕ್ಕೂಟವು ‘ಶಕ್ತಿ’ ವಿರುದ್ಧ ಹೋರಾಡುವ ಮಾತನಾಡುತ್ತಿರುವುದು ದೇಶದ ದೌರ್ಭಾಗ್ಯ. ಶಕ್ತಿಯ ಆರಾಧನೆ ನಮ್ಮ ಸ್ವಾಭಾವಿಕ ಅಧ್ಯಾತ್ಮಿಕ ಪ್ರಯಾಣದ ಒಂದು ಭಾಗ. ಆದರೆ, ಇಂಡಿಯ ಒಕ್ಕೂಟದವರು ತಮ್ಮ ಹೋರಾಟ ಶಕ್ತಿಯ ವಿರುದ್ಧ ಎಂದು ಹೇಳುತ್ತಾರೆʼ ಎಂದು ಮೋದಿ ಹೇಳಿದರು.

ಏಪ್ರಿಲ್ 19 ರಂದು ಲೋಕಸಭೆ ಚುನಾವಣೆಯ ಮೊದಲ ಹಂತದಲ್ಲಿ ಸಹರಾನ್‌ಪುರ್, ಕೈರಾನಾ, ಮುಜಾಫರ್‌ನಗರ, ಬಿಜ್ನೋರ್, ನಗೀನಾ (ಎಸ್‌ ಸಿ), ಮೊರಾದಾಬಾದ್, ರಾಂಪುರ ಮತ್ತು ಪಿಲಿಭಿತ್ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.

Read More
Next Story