ಅಬುಧಾಬಿ ರಾಜಕುಮಾರನ ಜೊತೆ ಪ್ರಧಾನಿ ಮಾತುಕತೆ
x

ಅಬುಧಾಬಿ ರಾಜಕುಮಾರನ ಜೊತೆ ಪ್ರಧಾನಿ ಮಾತುಕತೆ

ಭಾರತ-ಯುಎಇ ನಡುವಿನ ದ್ವಿಪಕ್ಷೀಯ ಸಂಬಂಧ ಮತ್ತು ಭವಿಷ್ಯದಲ್ಲಿ ಸಹಕಾರದ ಕ್ಷೇತ್ರಗಳ ಬಗ್ಗೆ ಮಾತುಕತೆ ನಡೆಯಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.


ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ಅಬುಧಾಬಿ ರಾಜಕುಮಾರ ಶೇಖ್ ಖಲೀದ್ ಬಿನ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರೊಂದಿಗೆ ಸೋಮವಾರ ಮಾತುಕತೆ ನಡೆಸಿದರು.

ರಾಜಕುಮಾರ ಭಾನುವಾರ ಭಾರತಕ್ಕೆ ಆಗಮಿಸಿದ್ದರು. ʻಆಪ್ತ ಸ್ನೇಹಿತನಿಗೆ ಆತ್ಮೀಯ ಸ್ವಾಗತ. ಪ್ರಧಾನಿ ಅವರು ಹೈದರಾಬಾದ್ ಹೌಸ್‌ನಲ್ಲಿ ಅಬುಧಾಬಿಯ ರಾಜಕುಮಾರ ಶೇಖ್ ಖಲೀದ್ ಬಿನ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರನ್ನು ಬರಮಾಡಿಕೊಂಡರು,ʼ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ 'ಎಕ್ಸ್' ನಲ್ಲಿ ಬರೆದಿದ್ದಾರೆ.

ʻಭಾರತ-ಯುಎಇ ನಡುವಿನ ದ್ವಿಪಕ್ಷೀಯ ಸಂಬಂಧ ಕುರಿತು ಚರ್ಚೆ ಮತ್ತು ಸಹಕಾರ ಕುರಿತು ಚರ್ಚೆ ನಡೆಯಲಿದೆ,ʼ ಎಂದು ಬರೆದಿದ್ದಾರೆ.

ಮೋದಿ ಅವರು ಆಗಸ್ಟ್ 2015 ರಲ್ಲಿ ಯುಎಇಗೆ ಭೇಟಿ ನೀಡಿದ್ದರು. ಫೆಬ್ರವರಿ 2022 ರಲ್ಲಿ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ (ಸಿಇಪಿಎ), ಜುಲೈ 2023 ರಲ್ಲಿ ರೂಪಾಯಿ ಹಾಗು ದಿರ್ಹಾಂ ನಡುವೆ ಸ್ಥಳೀಯ ಕರೆನ್ಸಿ ಸೆಟ್ಲ್‌ಮೆಂಟ್ (ಎಲ್‌ಸಿಎಸ್‌) ವ್ಯವಸ್ಥೆಗೆ ಸಹಿ ಹಾಕಿದವು.

ಅಧಿಕೃತ ಮಾಹಿತಿ ಪ್ರಕಾರ, 2022-23ರಲ್ಲಿ ಸುಮಾರು 85 ಶತಕೋಟಿ ಡಾಲರ್ ದ್ವಿಪಕ್ಷೀಯ ವ್ಯಾಪಾರ‌ ನಡೆಸಿವೆ. 2022-23ರಲ್ಲಿ ವಿದೇಶಿ ನೇರ ಹೂಡಿಕೆಗೆ ಸಂಬಂಧಿಸಿದಂತೆ ದೇಶದ ನಾಲ್ವರು ಅಗ್ರ ಹೂಡಿಕೆದಾರರಲ್ಲಿ ಎಮಿರೇಟ್ಸ್‌ ಕೂಡ ಸೇರಿದೆ. ಎಮಿರೇಟ್ಸ್‌ ನಲ್ಲಿ ಸುಮಾರು 3.5 ದಶಲಕ್ಷ ಭಾರತೀಯರಿದ್ದಾರೆ.

ಫೆಬ್ರವರಿ 2023 ರಲ್ಲಿ ಭಾರತ-ಯುಎಇ-ಫ್ರಾನ್ಸ್ (ಯುಎಫ್‌ಐ) ತ್ರಿಪಕ್ಷೀಯ ಒಕ್ಕೂಟವನ್ನು ಔಪಚಾರಿಕವಾಗಿ ಆರಂಭಿಸಲಾಯಿತು. ಭಾರತದ ಸಕ್ರಿಯ ಬೆಂಬಲದೊಂದಿಗೆ ಎಮಿರೇಟ್ಸ್‌ ಮೇ 2023 ರಲ್ಲಿ ಎಸ್‌ಸಿಒ ಹಾಗೂ ಜನವರಿ 1 ರಂದು ಬ್ರಿಕ್ಸ್‌ ಸದಸ್ಯನಾಗಿ ಸೇರಿಕೊಂಡಿತು. ಭಾರತ-ಯುಎಇ ರಕ್ಷಣಾ ಸಹಕಾರ ಇತ್ತೀಚಿನ ವರ್ಷಗಳಲ್ಲಿ ವೇಗ ಪಡೆದುಕೊಂಡಿದೆ. ಜನವರಿ 2024 ರಲ್ಲಿ ಮೊದಲ ಭಾರತ-ಯುಎಇ ದ್ವಿಪಕ್ಷೀಯ ಸೇನಾ ವ್ಯಾಯಾಮ 'ಡೆಸರ್ಟ್ ಸೈಕ್ಲೋನ್' ರಾಜಸ್ಥಾನದಲ್ಲಿ ನಡೆಯಿತು.

Read More
Next Story