
ಸಿಂಗಾಪುರಕ್ಕೆ ತೆರಳಿದ ಪ್ರಧಾನಿ
ಬಂದರ್ ಸೆರಿ ಬೇಗವಾನ್: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಬ್ರೂನೈ ಭೇಟಿ ʻಉತ್ಪಾದಕʼ ಎಂದು ಬಣ್ಣಿಸಿದರು. ಭಾರತ-ಬ್ರೂನೈ ಬಾಂಧವ್ಯಕ್ಕೆ ಕೊಡುಗೆ ನೀಡುವ ಮೂಲಕ ಹೊಸ ಯುಗವನ್ನು ಪ್ರಾರಂಭಿಸುತ್ತದೆ ಎಂದು ಸಿಂಗಾಪುರಕ್ಕೆ ತೆರಳುವ ಮುನ್ನ ಹೇಳಿದರು.
ದ್ವಿಪಕ್ಷೀಯ ಭೇಟಿಗಾಗಿ ಬ್ರೂನೈಗೆ ಪ್ರಯಾಣಿಸಿದ ಮೊದಲ ಭಾರತೀಯ ಪ್ರಧಾನಿಯಾದ ಮೋದಿ, ಸುಲ್ತಾನ್ ಹಾಜಿ ಹಸನಲ್ ಬೊಲ್ಕಿಯಾ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಪ್ರಾದೇಶಿಕ ಮತ್ತು ಜಾಗತಿಕ ವಿಷಯ ಕುರಿತು ಅಭಿಪ್ರಾಯ ವಿನಿಮಯ ಮಾಡಿಕೊಳ್ಳುವುದರ ಜೊತೆಗೆ ರಕ್ಷಣೆ, ವ್ಯಾಪಾರ ಮತ್ತು ಇಂಧನ ಇನ್ನಿತರ ವಿಷಯಗಳ ಕುರಿತು ಚರ್ಚಿಸಿದರು.
ʻಬ್ರೂನೈ ದಾರುಸ್ಸಲಾಮ್‌ಗೆ ನನ್ನ ಭೇಟಿ ಫಲಪ್ರದವಾಗಿತ್ತು. ಇದು ಬಲಿಷ್ಠ ಭಾರತ-ಬ್ರೂನೈ ಬಾಂಧವ್ಯದ ಹೊಸ ಯುಗಕ್ಕೆ ನಾಂದಿ ಹಾಡುತ್ತದೆ. ಆತಿಥ್ಯ ಮತ್ತು ಪ್ರೀತಿಗಾಗಿ ಬ್ರೂನೈ ಜನರು ಮತ್ತು ಸರ್ಕಾರಕ್ಕೆ ನಾನು ಆಭಾರಿಯಾಗಿದ್ದೇನೆ,ʼ ಎಂದು ಮೋದಿ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ʻಮೋದಿಯವರ ಭೇಟಿಯು ಉಭಯ ದೇಶಗಳ ನಡುವಿನ 40 ವರ್ಷಗಳ ರಾಜತಾಂತ್ರಿಕ ಸಂಬಂಧದಲ್ಲಿ ಒಂದು ಪ್ರಮುಖ ಮೈಲಿಗಲ್ಲು. ಎರಡೂ ದೇಶಗಳು ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ವಿಷಯಗಳ ಬಗ್ಗೆ ಸೌಹಾರ್ದ ಸಂಬಂಧವನ್ನು ಹೊಂದಿವೆ. ಭಾರತದ 'ಆಕ್ಟ್ ಈಸ್ಟ್' ನೀತಿ ಮತ್ತು ಅದರ ಇಂಡೋ-ಪೆಸಿಫಿಕ್‌ನ ಮುನ್ನೋಟದಲ್ಲಿ ಬ್ರೂನೈ ಪ್ರಮುಖ ಪಾಲುದಾರ ದೇಶ,ʼ ಎಂದು ಎಂಇಎ ಎಕ್ಸ್‌ನಲ್ಲಿ ಹೇಳಿದೆ.
ಮೋದಿ ಅವರನ್ನು ರಾಜಕುಮಾರ ಅಲ್ ಮುಹ್ತಾದಿ ಬಿಲ್ಲಾ ಅವರು ವಿಮಾನ ನಿಲ್ದಾಣದಲ್ಲಿ ಮಂಗಳವಾರ ಮುಂಜಾನೆ ಬರಮಾಡಿಕೊಂಡರು. ಪ್ರಧಾನಿ ಇಲ್ಲಿನ ಚಾರಿತ್ರಿಕ ಒಮರ್ ಅಲಿ ಸೈಫುದ್ದೀನ್ ಮಸೀದಿಗೆ ಭೇಟಿ ನೀಡಿದ್ದರು ಮತ್ತು ಭಾರತದ ಹೈಕಮಿಷನ್‌ನ ಹೊಸ ಚಾನ್ಸೆರಿ ಆವರಣವನ್ನು ಉದ್ಘಾಟಿಸಿದರು. ಎರಡೂ ಸ್ಥಳಗಳಲ್ಲಿ ಭಾರತೀಯ ಸಂಜಾತರೊಂದಿಗೆ ಸಂವಾದ ನಡೆಸಿದರು.
ಮೋದಿ ಅವರು ಬುಧವಾರ ಸಿಂಗಾಪುರಕ್ಕೆ ತೆರಳಿದರು.