
ಕಾಂಗ್ರೆಸ್ ನ್ನು ನಗರ ನಕ್ಸಲರ ಗ್ಯಾಂಗ್ ಆಳುತ್ತಿದೆ: ಪ್ರಧಾನಿ
ವಾಶಿಮ್: ಕಾಂಗ್ರೆಸ್ ಅನ್ನು ನಗರ ನಕ್ಸಲರ ಗುಂಪು ಆಳುತ್ತಿದ್ದು, ಆ ಪಕ್ಷದ ʻಅಪಾಯಕಾರಿ ಅಜೆಂಡಾʼ ವನ್ನು ಸೋಲಿಸಲು ಜನ ಒಂದಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ.
ಮಹಾರಾಷ್ಟ್ರದ ವಾಶಿಮ್ ಜಿಲ್ಲೆಯಲ್ಲಿ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದ ನಂತರ ಮಾತನಾಡಿ, ʼನಾವೆಲ್ಲರೂ ಒಗ್ಗೂಡಿದರೆ ದೇಶವನ್ನು ವಿಭಜಿಸುವ ತಮ್ಮ ಅಜೆಂಡಾ ವಿಫಲಗೊಳ್ಳುತ್ತದೆ ಎಂದು ಕಾಂಗ್ರೆಸ್ ಗೆ ತಿಳಿದಿದೆ. ದೇಶದ ಒಳ್ಳೆಯ ಉದ್ದೇಶ ಹೊಂದಿರದ ಜನರೊಂದಿಗೆ ಕಾಂಗ್ರೆಸ್ ಎಷ್ಟು ನಿಕಟವಾಗಿ ನಿಂತಿದೆ ಎಂಬುದನ್ನು ಪ್ರತಿಯೊಬ್ಬರೂ ನೋಡಬಹುದು,ʼ ಎಂದು ಹೇಳಿದರು.
ʻಇತ್ತೀಚೆಗೆ ದೆಹಲಿಯಲ್ಲಿ ಸಾವಿರಾರು ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾಂಗ್ರೆಸ್ ಮುಖಂಡರೊಬ್ಬರು ಕಿಂಗ್ ಪಿನ್ ಆಗಿರುವ ಶಂಕೆ ವ್ಯಕ್ತವಾಗಿದೆ. ಯುವಕರನ್ನು ವ್ಯಸನಕ್ಕೆ ದೂಡಿ, ಬರುವ ಹಣದಿಂದ ಚುನಾವಣೆ ಎದುರಿಸಲು ಕಾಂಗ್ರೆಸ್ ಬಯಸಿದೆ,ʼ ಎಂದು ದೂರಿದರು.
ʻಕಾಂಗ್ರೆಸ್ ಚಿಂತನೆ ಮೊದಲಿನಿಂದಲೂ ಪರಕೀಯ. ಬ್ರಿಟಿಷರಂತೆ ಕಾಂಗ್ರೆಸ್ ಕುಟುಂಬ ದಲಿತರು, ಹಿಂದುಳಿದವರು ಮತ್ತು ಆದಿವಾಸಿಗಳನ್ನು ಸಮಾನರು ಎಂದು ಪರಿಗಣಿಸುವುದಿಲ್ಲ. ಭಾರತವನ್ನು ಒಂದೇ ಕುಟುಂಬ ಆಳಬೇಕು ಎಂದು ಭಾವಿಸುತ್ತಾರೆ. ಆದ್ದರಿಂದಲೇ ಅವರು ಬಂಜಾರ ಸಮುದಾಯದ ಬಗ್ಗೆ ಅವಹೇಳನಕಾರಿ ಧೋರಣೆ ತಾಳಿದ್ದಾರೆ,ʼ ಎಂದರು.