ಎರಡು ದಿನಗಳ ಭೇಟಿಗಾಗಿ ಕುವೈತ್ ಗೆ ತೆರಳಿದ ಪ್ರಧಾನಿ ಮೋದಿ
ಪ್ರಧಾನಿ ಮೋದಿಯವರ ಕುವೈತ್ ಭೇಟಿ ಉಭಯ ದೇಶಗಳ ಸಂಬಂಧಗಳನ್ನು ಬಲಪಡಿಸಲಿದೆ. ಶಾಂತಿ, ಸಮೃದ್ಧಿ ಮತ್ತು ಭಾರತ-ಕುವೈತ್ ಸಹಯೋಗದ ಮಾರ್ಗಸೂಚಿಯನ್ನು ಬೆಳೆಸುತ್ತದೆ.
ಕುವೈತ್ ನಾಯಕತ್ವ ಮಾತನಾಡಲು ಹಾಗೂ ಮತ್ತು ಭಾರತದ ವಲಸಿಗರೊಂದಿಗೆ ಸಂಪರ್ಕ ಸಾಧಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಭೇಟಿಗಾಗಿ ಶನಿವಾರ (ಡಿಸೆಂಬರ್ 21) ಕುವೈತ್ ಗೆ ತೆರಳಿದ್ದಾರೆ. ಕುವೈತ್ ಎಮಿರ್ ಶೇಖ್ ಮೆಶಾಲ್ ಅಲ್-ಅಹ್ಮದ್ ಅಲ್-ಜಾಬರ್ ಅಲ್-ಸಬಾಹ್ ಅವರ ಆಹ್ವಾನದ ಮೇರೆಗೆ ಮೋದಿ ಕುವೈತ್‌ಗೆ ಭೇಟಿ ನೀಡಿದ್ದಾರೆ.
ಕಳೆದ 43 ವರ್ಷಗಳಲ್ಲಿ ಗಲ್ಫ್ ರಾಷ್ಟ್ರಗಳ ಪೈಕಿ ಕುವೈತ್‌ಗೆ ಭೇಟಿ ನೀಡುತ್ತಿರುವ ಭಾರತದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆ ಪ್ರಧಾನಿ ಮೋದಿ ಹೊಂದಿದರು. ಭೇಟಿಯ ಸಮಯದಲ್ಲಿ, ಮೋದಿ ಕುವೈತ್ ಆಡಳಿತದ ನಾಯಕರೊಂದಿಗೆ ಚರ್ಚೆ ನಡೆಸಲಿದ್ದಾರೆ ಮತ್ತು ಭಾರತೀಯ ಸಮುದಾಯದೊಂದಿಗೆ ಸಂವಹನ ನಡೆಸಲಿದ್ದಾರೆ.
ದ್ವಿಪಕ್ಷೀಯ ಮಾರ್ಗಸೂಚಿ
ಕುವೈತ್ ನ ಉನ್ನತ ನಾಯಕತ್ವದೊಂದಿಗಿನ ಮಾತುಕತೆಯು ಭಾರತ ಮತ್ತು ಕುವೈತ್ ನಡುವಿನ ಭವಿಷ್ಯದ ಪಾಲುದಾರಿಕೆಗೆ ಅವಕಾಶವಾಗಿದೆ ಎಂದು ಮೋದಿ ತಮ್ಮ ನಿರ್ಗಮನ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ತಲೆಮಾರುಗಳಿಂದ ಕುವೈತ್ ದೇಶದೊಂದಿಗಿನ ಭಾರತದ ಸಂಪರ್ಕವನ್ನು ನಾವು ಆಳವಾಗಿ ಗೌರವಿಸುತ್ತೇವೆ. ನಾವು ಬಲವಾದ ವ್ಯಾಪಾರ ಹಾಗೂ ಇಂಧನ ಪಾಲುದಾರರು. ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ಶಾಂತಿ, ಭದ್ರತೆ, ಸ್ಥಿರತೆ ಮತ್ತು ಸಮೃದ್ಧಿಯಲ್ಲಿ ಸಹಭಾಗಿತ್ವ ಹೊಂದಿದ್ದೇವೆ,ʼʼ ಎಂದು ಹೇಳಿದರು.
ಎಮಿರ್, ಯುವರಾಜ ಮತ್ತು ಕುವೈತ್ ಪ್ರಧಾನಿಯೊಂದಿಗಿನ ಭೇಟಿಯನ್ನು ಎದುರು ನೋಡುತ್ತಿದ್ದೇನೆ ಎಂದು ಮೋದಿ ಹೇಳಿದ್ದಾರೆ.
ಮೋದಿ ಅವರು ಕುವೈತ್ ನಲ್ಲಿ ನಡೆಯಲಿರುವ 26ನೇ ಅರೇಬಿಯನ್ ಗಲ್ಫ್ ಕಪ್ ಉದ್ಘಾಟನಾ ಸಮಾರಂಭದಲ್ಲಿಯೂ ಭಾಗವಹಿಸಲಿದ್ದಾರೆ. 1981ರಲ್ಲಿ ಇಂದಿರಾ ಗಾಂಧಿ ಕುವೈತ್ ಗೆ ಭೇಟಿ ನೀಡಿದ್ದರು.
ಉನ್ನತ ವ್ಯಾಪಾರ ಪಾಲುದಾರ
ಭಾರತವು ಕುವೈತ್‌ನ ವ್ಯಾಪಾರ ಪಾಲುದಾರ ರಾಷ್ಟ್ರಗಳಲ್ಲಿಒಂದಾಗಿದೆ. ಈ ದೇಶದಲ್ಲಿ ಭಾರತೀಯ ಸಮುದಾಯವು ಅತಿದೊಡ್ಡ ವಲಸಿಗ ಸಮುದಾಯವಾಗಿದೆ.
ಕುವೈತ್‌ನ ಒಟ್ಟು ಜನಸಂಖ್ಯೆಯಲ್ಲಿ ಭಾರತೀಯರು ಶೇಕಡಾ 21ರಷ್ಟು (1 ಮಿಲಿಯನ್) ಮತ್ತು ಅದರ ಕಾರ್ಮಿಕ ಶಕ್ತಿಯ ಶೇಕಡಾ 30ರಷ್ಟು (ಅಂದಾಜು 9 ಲಕ್ಷ) ಇದ್ದಾರೆ. ಕುವೈತ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಪ್ರಕಾರ, ಖಾಸಗಿ ವಲಯ ಮತ್ತು ದೇಶೀಯ ವಲಯದ ಕಾರ್ಮಿಕರ ಪಟ್ಟಿಯಲ್ಲಿ ಭಾರತೀಯ ಕಾರ್ಮಿಕರು ಅಗ್ರಸ್ಥಾನದಲ್ಲಿದ್ದಾರೆ.
2023-24ರ ಆರ್ಥಿಕ ವರ್ಷದಲ್ಲಿ ಕುವೈತ್ 10.47 ಬಿಲಿಯನ್ ಡಾಲರ್ ಮೌಲ್ಯದ ದ್ವಿಪಕ್ಷೀಯ ವ್ಯಾಪಾರ ನಡೆಸಿತ್ತು ಕುವೈತ್ ಭಾರತದ ಆರನೇ ಅತಿದೊಡ್ಡ ಕಚ್ಚಾ ತೈಲ ಪೂರೈಕೆದಾರ ದೇಶ. ದೇಶದ ಇಂಧನ ಅಗತ್ಯಗಳಲ್ಲಿ ಶೇಕಡಾ 3 ರಷ್ಟನ್ನು ಅದು ಪೂರೈಸುತ್ತದೆ.
ಕುವೈತ್‌ಗೆ ಭಾರತದ ರಫ್ತು ಮೊದಲ ಬಾರಿಗೆ 2 ಬಿಲಿಯನ್ ಡಾಲರ್ ತಲುಪಿದೆ. ಭಾರತದಲ್ಲಿ ಕುವೈತ್ ಹೂಡಿಕೆಗಳು 10 ಬಿಲಿಯನ್ ಡಾಲರ್ ಮೀರಿದೆ. ಭಾರತ ಮತ್ತು ಕುವೈತ್ ಸಾಂಪ್ರದಾಯಿಕವಾಗಿ ಸ್ನೇಹಪರ ಸಂಬಂಧಗಳನ್ನು ಹೊಂದಿದೆ.