
ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿದ ಭಾರತದ 'ಚಿನ್ನದ ಹುಡುಗಿಯರು': ಪ್ರಧಾನಿ ಮೋದಿ ಅಭಿನಂದನೆ
ನಿಮ್ಮ ಅಸಾಧಾರಣ ಪ್ರದರ್ಶನ ಮತ್ತು ದೃಢ ಸಂಕಲ್ಪವು ದೇಶಕ್ಕೆ ಹೆಮ್ಮೆ ತಂದಿದೆ. ಎಂತಹ ಕಠಿಣ ಸವಾಲುಗಳಿದ್ದರೂ ಛಲವೊಂದಿದ್ದರೆ ಎತ್ತರಕ್ಕೇರಬಹುದು ಎಂಬುದನ್ನು ನೀವು ಸಾಧಿಸಿ ತೋರಿಸಿದ್ದೀರಿ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ಚೊಚ್ಚಲ ಆವೃತ್ತಿಯ ಅಂಧರ ಮಹಿಳಾ ಟಿ20 ವಿಶ್ವಕಪ್‌ನಲ್ಲಿ (Inaugural T20 World Cup for the Blind) ಅಜೇಯ ಸಾಧನೆ ಮಾಡುವ ಮೂಲಕ ಭಾರತದ ಮಹಿಳಾ ತಂಡ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಶ್ರೀಲಂಕಾದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ನೇಪಾಳ ತಂಡವನ್ನು ಏಳು ವಿಕೆಟ್‌ಗಳಿಂದ ಮಣಿಸಿದ ಭಾರತದ ವನಿತೆಯರು, ಅಂಧರ ಕ್ರಿಕೆಟ್ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಈ ತಂಡಕ್ಕೆ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.
ಈ ಐತಿಹಾಸಿಕ ಗೆಲುವಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಟ್ವೀಟ್ ಮೂಲಕ ವಿಶೇಷ ಅಭಿನಂದನೆ ಸಲ್ಲಿಸಿದ್ದಾರೆ. "ಚೊಚ್ಚಲ ಟಿ20 ವಿಶ್ವಕಪ್ ಗೆದ್ದಿರುವ ಭಾರತದ ಅಂಧರ ಮಹಿಳಾ ತಂಡಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ನಿಮ್ಮ ಅಸಾಧಾರಣ ಪ್ರದರ್ಶನ ಮತ್ತು ದೃಢ ಸಂಕಲ್ಪವು ದೇಶಕ್ಕೆ ಹೆಮ್ಮೆ ತಂದಿದೆ. ಎಂತಹ ಕಠಿಣ ಸವಾಲುಗಳಿದ್ದರೂ ಛಲವೊಂದಿದ್ದರೆ ಎತ್ತರಕ್ಕೇರಬಹುದು ಎಂಬುದನ್ನು ನೀವು ಸಾಧಿಸಿ ತೋರಿಸಿದ್ದೀರಿ. ನಿಮ್ಮ ಈ ಗೆಲುವು ಲಕ್ಷಾಂತರ ಕ್ರೀಡಾಪಟಗಳಿಗೆ, ವಿಶೇಷವಾಗಿ ದಿವ್ಯಾಂಗರಿಗೆ ದೊಡ್ಡ ಸ್ಫೂರ್ತಿಯಾಗಿದೆ," ಎಂದು ಪ್ರಧಾನಿ ತಮ್ಮ ಸಂದೇಶದಲ್ಲಿ ಬಣ್ಣಿಸಿದ್ದಾರೆ.
ನೇಪಾಳದ ವಿರುದ್ಧ ಭರ್ಜರಿ ಜಯ
ಶ್ರೀಲಂಕಾದ ಕೊಲಂಬೊದಲ್ಲಿ ನಡೆದ ಫೈನಲ್‌ನಲ್ಲಿ, ಮೊದಲು ಬ್ಯಾಟ್ ಮಾಡಿದ ನೇಪಾಳ ತಂಡವು ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 114 ರನ್ ಗಳಿಸಿತ್ತು. ಈ ಗುರಿಯನ್ನು ಬೆನ್ನತ್ತಿದ ಭಾರತ ತಂಡ, ಕೇವಲ 12 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 117 ರನ್ ಗಳಿಸಿ ವಿಜಯದ ನಗೆ ಬೀರಿತು. ಫೂಲಾ ಸೊರೆನ್ (44*) ಮತ್ತು ನಾಯಕಿ ದೀಪಿಕಾ ಅವರ ಅಮೋಘ ಆಟ ಭಾರತದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿತು.
ಒಳಗೊಳ್ಳುವಿಕೆಯ ಹೊಸ ಭಾಷ್ಯ
ನೀಲಿ ಜೆರ್ಸಿಯಲ್ಲಿ ಕಂಗೊಳಿಸುತ್ತಾ, ರಾಷ್ಟ್ರಧ್ವಜವನ್ನು ಹಾರಿಸುತ್ತಿರುವ ಆಟಗಾರ್ತಿಯರ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ದೇಶವಾಸಿಗಳ ಮನಗೆದ್ದಿವೆ. ಸೀಮಿತ ತರಬೇತಿ ಸೌಲಭ್ಯಗಳ ನಡುವೆಯೂ ಈ ಕ್ರೀಡಾಪಟುಗಳು ತೋರಿದ ಹೋರಾಟದ ಮನೋಭಾವ ಎಲ್ಲರಿಗೂ ಮಾದರಿಯಾಗಿದೆ. 2025ರ ನವೆಂಬರ್‌ನಲ್ಲಿ ಭಾರತದ ಸಾಮಾನ್ಯ ಮಹಿಳಾ ತಂಡ ಕೂಡ ಯಶಸ್ಸು ಸಾಧಿಸಿದ್ದು, ಇದೀಗ ಅಂಧರ ತಂಡದ ಈ ಗೆಲುವು ದೇಶದ ಕ್ರೀಡಾ ಕ್ಷೇತ್ರದಲ್ಲಿ ಮಹಿಳೆಯರ ಪ್ರಾಬಲ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

