
ರಾಜಸ್ಥಾನ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಅವರು ಮಹಾತ್ಮ ಗಾಂಧಿ ಆಸ್ಪತ್ರೆಯಲ್ಲಿ ಗಾಯಾಳುಗಳೊಂದಿಗೆ ಸಂವಾದ ನಡೆಸಿದರು.
ಜೈಸಲ್ಮೇರ್ ಬಸ್ ದುರಂತ: ಕನಿಷ್ಠ 20 ಮಂದಿ ಸಜೀವ ದಹನ; ಪರಿಹಾರ ಘೋಷಿಸಿದ ಪ್ರಧಾನಿ ಮೋದಿ
ಗಂಭೀರವಾಗಿ ಗಾಯಗೊಂಡಿರುವ 16 ಪ್ರಯಾಣಿಕರನ್ನು ಜೋಧ್‌ಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜೈಸಲ್ಮೇರ್‌ನಿಂದ ಜೋಧ್‌ಪುರಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಬೆಂಕಿಗೆ ಆಹುತಿಯಾದ ಪರಿಣಾಮ ಕನಿಷ್ಠ 20 ಜನರು ಸಜೀವ ದಹನವಾಗಿದ್ದು, ಮೃತರ ಕುಟುಂಬದವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.
57 ಪ್ರಯಾಣಿಕರನ್ನು ಹೊತ್ತ ಬಸ್ ಮಧ್ಯಾಹ್ನ 3 ಗಂಟೆ ಸುಮಾರಿಗೆ ಜೈಸಲ್ಮೇರ್‌ನಿಂದ ಹೊರಟಿತ್ತು. ಬಸ್ ಜೈಸಲ್ಮೇರ್-ಜೋಧ್‌ಪುರ ಹೆದ್ದಾರಿಯಲ್ಲಿ ಸಾಗುತ್ತಿದ್ದಾಗ, ವಾಹನದ ಹಿಂಭಾಗದಿಂದ ಹೊಗೆ ಬರಲು ಪ್ರಾರಂಭಿಸಿತು. ಇದನ್ನು ಗಮನಿಸಿದ ಚಾಲಕ ಬಸ್ ನಿಲ್ಲಿಸಿದರೂ, ಕೆಲವೇ ಕ್ಷಣಗಳಲ್ಲಿ ಬೆಂಕಿಯ ಜ್ವಾಲೆ ಆವರಿಸಿಕೊಂಡಿತ್ತು. ಸ್ಥಳೀಯರು ಮತ್ತು ದಾರಿಹೋಕರು ತಕ್ಷಣ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಗೆ ಸಹಾಯ ಮಾಡಿದರು.
ಸೇನಾ ಸಿಬ್ಬಂದಿ ಕೂಡ ಕಾರ್ಯಾಚರಣೆಗೆ ನೆರವಾದರು. ಅಗ್ನಿಶಾಮಕ ದಳ ಮತ್ತು ಪೊಲೀಸರಿಗೆ ಮಾಹಿತಿ ನೀಡಲಾಯಿತು. ಗಾಯಗೊಂಡ ಪ್ರಯಾಣಿಕರನ್ನು ಜೈಸಲ್ಮೇರ್‌ನ ಜವಾಹರ್ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ರಾಜಸ್ಥಾನ ಪೊಲೀಸರು ತಿಳಿಸಿದ್ದಾರೆ.
ಗಂಭೀರವಾಗಿ ಗಾಯಗೊಂಡಿರುವ 16 ಪ್ರಯಾಣಿಕರನ್ನು ಜೋಧ್‌ಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಹತ್ತೊಂಬತ್ತು ಪ್ರಯಾಣಿಕರು ಬಸ್‌ನಲ್ಲೇ ಸಜೀವ ದಹನವಾದರೆ, ಒಬ್ಬರು ಮಾತ್ರ ಜೋಧ್‌ಪುರಕ್ಕೆ ತೆರಳುವ ಮಾರ್ಗಮಧ್ಯೆ ಸುಟ್ಟ ಗಾಯಗಳಿಂದ ಬಲಿಯಾಗಿದ್ದಾರೆ ಎಂದು ಪೋಖ್ರಾನ್ ಬಿಜೆಪಿ ಶಾಸಕ ಪ್ರತಾಪ್ ಪುರಿ ತಿಳಿಸಿದ್ದಾರೆ.
ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ
ಘಟನೆಯ ಮಾಹಿತಿ ತಿಳಿದ ತಕ್ಷಣ ಮುಖ್ಯಮಂತ್ರಿ ಭಜನಲಾಲ್ ಶರ್ಮಾ ಅವರು ಜೈಸಲ್ಮೇರ್‌ಗೆ ಆಗಮಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಗಾಯಾಳುಗಳಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಮತ್ತು ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ನೆರವು ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಹೇಳಿದ್ದಾರೆ.
"ಜೈಸಲ್ಮೇರ್‌ನಲ್ಲಿ ಬಸ್‌ಗೆ ಬೆಂಕಿ ಹೊತ್ತಿಕೊಂಡ ಘಟನೆ ಅತ್ಯಂತ ಹೃದಯ ವಿದ್ರಾವಕವಾಗಿದೆ. ಈ ದುರಂತ ಅಪಘಾತದಿಂದ ಸಂತ್ರಸ್ತರಾದವರಿಗೆ ನನ್ನ ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಮತ್ತು ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ವಿಸ್ತರಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಅವರು ʼಎಕ್ಸ್ʼ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿದ ಪ್ರಧಾನಿ ಮೋದಿ, "ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಸಂಭವಿಸಿದ ಅಪಘಾತದಿಂದ ಪ್ರಾಣಹಾನಿಯಾಗಿರುವ ಬಗ್ಗೆ ದುಃಖವಾಗಿದೆ. ಈ ಕಷ್ಟದ ಸಮಯದಲ್ಲಿ ನನ್ನ ಆಲೋಚನೆಗಳು ಸಂತ್ರಸ್ತರು ಮತ್ತು ಅವರ ಕುಟುಂಬಗಳೊಂದಿವೆ. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ಮೃತರ ಕುಟುಂಬದವರಿಗೆ ಪಿಎಂಎನ್‌ಆರ್‌ಎಫ್‌ನಿಂದ 2 ಲಕ್ಷ ರೂ. ಪರಿಹಾರ ನೀಡಲಾಗುವುದು. ಗಾಯಗೊಂಡವರಿಗೆ 50,000 ರೂ.ನೀಡಲಾಗುವುದು ಎಂದು ಅವರು ಹೇಳಿದ್ದಾರೆ.
ರಾಷ್ಟ್ರಪತಿ, ಉಪರಾಷ್ಟ್ರಪತಿ ಸಂತಾಪ
ರಾಜಸ್ಥಾನದಲ್ಲಿ ಬಸ್ ಅಗ್ನಿ ದುರಂತದಿಂದ ಪ್ರಾಣಹಾನಿಯಾಗಿರುವುದು ಅತ್ಯಂತ ಹೃದಯ ವಿದ್ರಾವಕ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದು, ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದ್ದಾರೆ. ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಕೂಡ ಮೃತರ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ.
"ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಬಸ್‌ಗೆ ಬೆಂಕಿ ಹೊತ್ತಿಕೊಂಡು ಹಲವರು ಸಾವನ್ನಪ್ಪಿರುವ ಸುದ್ದಿ ಅತ್ಯಂತ ಹೃದಯ ವಿದ್ರಾವಕವಾಗಿದೆ. ನಾನು ಮೃತರ ಕುಟುಂಬಗಳಿಗೆ ನನ್ನ ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತೇನೆ ಮತ್ತು ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ," ಎಂದು ಮುರ್ಮು ಅವರು ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
"ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಸಂಭವಿಸಿದ ದುರಂತದ ಬಸ್ ಅಗ್ನಿ ದುರಂತದಲ್ಲಿ ಪ್ರಾಣಹಾನಿಯಾಗಿರುವ ಬಗ್ಗೆ ತೀವ್ರ ದುಃಖಿತನಾಗಿದ್ದೇನೆ. ದುಃಖಿತ ಕುಟುಂಬಗಳಿಗೆ ನನ್ನ ಹೃತ್ಪೂರ್ವಕ ಸಂತಾಪಗಳು. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ," ಎಂದು ಉಪರಾಷ್ಟ್ರಪತಿ ಕಾರ್ಯಾಲಯವು ತಿಳಿಸಿದೆ.
ಅಪಘಾತದ ನಂತರ, ಮೃತರ ಗುರುತನ್ನು ಖಚಿತಪಡಿಸಲು ಜಿಲ್ಲಾಡಳಿತವು ಮಾಹಿತಿ ನೀಡುವಂತೆ ಮನವಿ ಮಾಡಿದೆ. ಡಿಎನ್‌ಎ (DNA) ಹೊಂದಾಣಿಕೆಯ ನಂತರ ಮೃತದೇಹಗಳನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜೈಸಲ್ಮೇರ್ ಜಿಲ್ಲಾಡಳಿತವು ಘಟನೆಯ ಮಾಹಿತಿ ಪಡೆದ ನಂತರ ತಕ್ಷಣವೇ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಪ್ರಾರಂಭಿಸಿದೆ ಎಂದು ತಿಳಿಸಿದೆ. ಜಿಲ್ಲಾಧಿಕಾರಿ ಪ್ರತಾಪ್ ಸಿಂಗ್ ಅವರು ಗಾಯಾಳುಗಳಿಗೆ ತಕ್ಷಣದ ವೈದ್ಯಕೀಯ ಆರೈಕೆಯನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಸಹಾಯವಾಣಿ ಸಂಖ್ಯೆಗಳನ್ನು ಸಹ ಬಿಡುಗಡೆ ಮಾಡಲಾಗಿದೆ.
ರಾಜಸ್ಥಾನದ ರಾಜ್ಯಪಾಲ ಹರಿಭಾವು ಬಾಗಡೆ, ಮುಖ್ಯಮಂತ್ರಿ ಶರ್ಮಾ, ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಬಿಜೆಪಿ ರಾಜ್ಯಾಧ್ಯಕ್ಷ ಮದನ್ ರಾಥೋಡ್ ಮತ್ತು ಇತರ ನಾಯಕರು ಈ ದುರಂತ ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ.