ದೆಹಲಿ ಕೋಚಿಂಗ್ ಸೆಂಟರ್ ಸಾವು: ಎಸ್‌ಸಿ ಸ್ವಯಂಪ್ರೇರಿತ ದೂರು ದಾಖಲು
ನವದೆಹಲಿಯ ತರಬೇತಿ ಕೇಂದ್ರದಲ್ಲಿ ಮೂವರು ನಾಗರಿಕ ಸೇವಾ ಆಕಾಂಕ್ಷಿಗಳ ಸಾವಿನ ಬಗ್ಗೆ ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದು, ಈ ಸಂಬಂಧ ಕೇಂದ್ರ ಮತ್ತು ದೆಹಲಿ ಸರ್ಕಾರಗಳಿಂದ ಪ್ರತಿಕ್ರಿಯೆ ಕೇಳಿದೆ.
ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಉಜ್ಜಲ್ ಭುಯಾನ್ ಅವರು ಕೋಚಿಂಗ್ ಸೆಂಟರ್‌ನ ನೆಲಮಾಳಿಗೆಯಲ್ಲಿ ಕಳೆದ ತಿಂಗಳು ನಡೆದ ಸಾವುಗಳು ನಮ್ಮ ʻಕಣ್ಣು ತೆರೆಸಬೇಕು,ʼ ಎಂದು ಹೇಳಿದರು.
ಕೋಚಿಂಗ್ ಕೇಂದ್ರಗಳ ಕಟು ಟೀಕೆ: ʻಈ ಕೇಂದ್ರಗಳು ಸಾವಿನ ಕೊಠಡಿಗಳಾಗಿ ಮಾರ್ಪಟ್ಟಿವೆ. ಸುರಕ್ಷತಾ ನಿಯಮಗಳು ಮತ್ತು ಘನತೆಯ ಜೀವನಕ್ಕಾಗಿ ಮೂಲಭೂತ ಮಾನದಂಡಗಳ ಸಂಪೂರ್ಣ ಅನುಸರಣೆ ಇಲ್ಲದಿದ್ದರೆ, ಕೋಚಿಂಗ್ ಸಂಸ್ಥೆಗಳು ಆನ್‌ಲೈನ್‌ನಲ್ಲಿ ಕಾರ್ಯ ನಿರ್ವಹಿಸಬಹುದು,ʼ ಎಂದು ಪೀಠ ಹೇಳಿದೆ.
ʻಈ ಕೋಚಿಂಗ್ ಕೇಂದ್ರಗಳು ದೇಶದ ವಿವಿಧ ಭಾಗಗಳಿಂದ ಬರುವ ಆಕಾಂಕ್ಷಿಗಳ ಜೀವನದೊಂದಿಗೆ ಆಟವಾಡುತ್ತಿವೆ,ʼ ಎಂದು ನ್ಯಾಯಾಧೀಶರು ಹೇಳಿದರು.
ಸಿಬಿಐ ತನಿಖೆ: ದೆಹಲಿ ಹೈಕೋರ್ಟ್ ಕಳೆದ ಶುಕ್ರವಾರ ಹಳೆಯ ರಾಜೀಂದರ್ ನಗರದ ರಾವ್ಸ್ ಐಎಎಸ್ ಸ್ಟಡಿ ಸರ್ಕಲ್‌ನಲ್ಲಿ ವಿದ್ಯಾರ್ಥಿಗಳ ಸಾವಿನ ತನಿಖೆಯನ್ನು ದೆಹಲಿ ಪೊಲೀಸರಿಂದ ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ವರ್ಗಾಯಿಸಿತು. ಆನಂತರ ಕೋಚಿಂಗ್ ಸೆಂಟರ್ ಅನ್ನು ಮುಚ್ಚಲಾಗಿದೆ.
ಉತ್ತರ ಪ್ರದೇಶದ ಶ್ರೇಯಾ ಯಾದವ್ (25), ತೆಲಂಗಾಣದ ತಾನ್ಯಾ ಸೋನಿ (25) ಮತ್ತು ಕೇರಳದ ನೆವಿನ್ ಡೆಲ್ವಿನ್ (24) ಮೃತಪಟ್ಟ ಮೂವರು.