ಗಿರೀಶ್ ಕಾಸರವಳ್ಳಿ ಸಂದರ್ಶನ; ʻಬಿಂಬ-ಬಿಂಬನʼ ದರ್ಶನ
ತಮ್ಮ ಸಿನಿಮಾಗಳನ್ನು ಕುರಿತ ತಮ್ಮ ಅನಿಸಿಕೆಗಳನ್ನು ಖ್ಯಾತ ಚಲಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ತಮ್ಮ ʻಬಿಂಬ-ಬಿಂಬನʼ ಕೃತಿಯಲ್ಲಿ ದಾಖಲಿಸಿದ್ದಾರೆ. ಈ ಪುಸ್ತಕ ಭಾನುವಾರ (ಮಾ.24) ಲೋಕಾರ್ಪಣೆಯಾಗಲಿದೆ. ಈ ಪುಸ್ತಕ ಕನ್ನಡ ಚಲಚಿತ್ರೋದ್ಯಮಕ್ಕಷ್ಟೇ ಅಲ್ಲ, ಭಾರತೀಯ ಚಿತ್ರರಂಗದ ಇತಿಹಾಸದಲ್ಲಿಯೇ ಬಿಂಬ-ಬಿಂಬನ ಒಂದು ಮೈಲುಗಲ್ಲು. ಇಂಥ ಪ್ರಯತ್ನ ಸತ್ಯಜಿತ್‌ರೇ ಅವರ ಹೊರತಾಗಿ ಯಾರೂ ಇದುವರೆಗೆ ಮಾಡಿಲ್ಲ. ತಮ್ಮ ಸಿನಿಮಾ ಕುರಿತ ತಮ್ಮ ಅನಿಸಿಕೆಗಳ ಬಗ್ಗೆ ಗಿರೀಶ್ ಕಾಸರವಳ್ಳಿ ಅವರು, ʼಧ ಫೆಡರಲ್-ಕರ್ನಾಟಕʼ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ʻಸಿನಿಮಾ ಎನ್ನುವುದು ಬಿಂಬಗಳ ಭಾಷೆ ಎನ್ನುವುದು ಸರ್ವವೇದ್ಯ. ನಾವು ನೋಡಿದ ಸಿನಿಮಾ ಅನುಭವವಾಗಿ ತಲುಪಿ ನಂತರ ಅರ್ಥವಾಗಿ ದಕ್ಕುವಲ್ಲಿ ಬಿಂಬಗಳು ನರ್ವಹಿಸುವ ಪಾತ್ರ ಮಹತ್ವದ್ದು, ಕೆಲವು ಸಿನಿಮಾ ವ್ಯಾಖ್ಯಾನಕಾರರು ಮತ್ತು ಕೃತಿಕಾರರು ಪರಿಭಾವಿಸುವಂತೆ ಬಿಂಬ ಮೂಡುವುದು ತೆರೆಯ ಮೇಲಲ್ಲ; ನೋಡುಗರ ಮನಸ ಪಟಲದ ಮೇಲೆ. ತೆರೆಯ ಮೇಲೆ ಕಾಣಿಸುವುದು ದೃಶ್ಯ ಬಿಂಬಗಳು. ಮಾಧ್ಯಮವನ್ನು ಸಶಕ್ತವಾಗಿ ದುಡಿಸಿಕೊಂಡ ಸಿನಿಮಾದಲ್ಲಿ ದೃಶ್ಯರೂಪದ ಬಿಂಬಗಳ ಜೊತೆಗೆ ಶಾಬ್ದಿಕ ರೂಪದಲ್ಲಿಯೂ ಬಿಂಬಗಳು ಸೃಷ್ಟಿಯಾಗಿರುತ್ತವೆ. ಸಂಕಲನ ತಂತ್ರದ ಮೂಲಕವೂ ಬಿಂಬವನ್ನು ಸಂಶ್ಲೇಷಿಸಲಾಗಿರುತ್ತದೆ. ತೆರೆಯ ಮೇಲೆ ಕಾಣುವ ಪರಿಸರ ನಿರ್ಮಾಣಕ್ಕೆ ವಾಸ್ತು, ವೇಶಭೂಷಣ, ನಟನಟಿಯರ ʻಇರುವುʼ ಎಷ್ಟು ಅಗತ್ಯವೋ ಕೃತಿಯೊಂದರ ಸಮಯದ ನಿರ್ವಹಣೆಯಲ್ಲಿ ಕೈಗೋಲಾಗಿ ಬರುವ ಅಮೂರ್ತ ಅಂಶಗಳಾದ ಸಂಗೀತ,ತಂತ್ರ, ಸೌಷ್ಟವ,ಭಾವನೆಯ ಮಿಡಿತಗಳೂ ಬಿಂಬ ನಿರ್ಮಾಣದಲ್ಲಿ ಅಷ್ಟೇ ಮುಖ್ಯ ಪಾತ್ರ ವಹಿಸುತ್ತಿರುತ್ತವೆ. ಅವು ಕಟ್ಟಿಕೊಡುವ ಅನುಭವವು ನಂತರ ಸಹೃದಯರ ಮನದಾಳಕ್ಕಿಳಿದು ಅರ್ಥವಾಗಿ ಮೂಡುತ್ತದೆ. ಸಿಸಿಮಾದ ರಾಜಕೀಯ, ಸೈದ್ಧಾಂತಿಕ, ತಾತ್ವಿಕ ನೆಲೆಗಟ್ಟುಗಳನ್ನುದೃಢಗೊಳಿಸುವುದು ಈ ಬಿಂಬಗಳು. ಕಥಾನಕವನ್ನು ರಚನೆ ಮಾಡುವ ಮೂಲಕ ಸಿನಿಮಾದ ಆದರ್ಶವನ್ನು ಗ್ರಹಿಸುವುದು ಒಂದು ಪರಿಯಾದರೆ, ಕತೆಯನ್ನು ಕಟ್ಟಲು ಬಳಸುವ ಬಿಂಬಗಳ ಮೂಲಕ ನಿರಚನೆಯ ಮೂಲಕ ಸಿನಿಮಾದ ಒಳಹೊರಗನ್ನೆಲ್ಲ ವಿಶ್ಲೇಷಿಸಿ, ಅದರ ದರ್ಶನವನ್ನು ಗ್ರಹಿಸುವುದು ಇನ್ನೊಂದು ಪರಿ. ಗುರಿ ಒಂದೇ ಆದರೂ, ಮಾರ್ಗ ಭಿನ್ನʼ
ಇದು ಗಿರೀಶ್ ಕಾಸರವಳ್ಳಿ ಅವರ ಪುಸ್ತಕ ʻಬಿಂಬ-ಬಿಂಬನʼ ದ ದರ್ಶನ.
……
ಪುಣೆಯ ಫಿಲ್ಮ್‌ಇನ್‌ಸ್ಟಿಟ್ಯೂಟ್‌ನಲ್ಲಿ ಅವರ ಮೇಲೆ ಪ್ರಭಾವ ಬೀರಿದವರು ಪ್ರೊ.ಸತೀಶ ಬಹದ್ದೂರ್. ಫಿಲ್ಮ್ ಅಪ್ರಿಷಿಯೇಷನ್ ವಿಷಯ ಕಲಿಸುತ್ತಿದ್ದರು. ಶ್ರೇಷ್ಟ ಜಾಗತಿಕ ಹಾಗೂ ಭಾರತೀಯ ಚಿತ್ರಗಳನ್ನು ಆಯ್ದು ಅದರ ಸಂರಚನೆಯನ್ನು ಬಿಡಿಸಿಡುತ್ತಿದ್ದರು. ಇನ್ನೊಬ್ಬರು 1984ರಲ್ಲಿ ʻಮಾಯಾ ಮಿರಿಗʼ ಎನ್ನುವ ಸಿನಿಮಾ ಮೂಲಕ ಸಿನಿಮಾ ಜಗತ್ತಿನ ಗಮನ ಸೆಳೆದ ನಿರ್ದೇಶಕ ನೀರದ ಮಹಾಪಾತ್ರಾ. ಸಿನಿಮಾ ಮೀಮಾಂಸೆ ಕಲಿಸುತ್ತಿದ್ದರು. ಪುಣೆ ಇನ್ ಸ್ಟಿಟ್ಯೂಟಿನಲ್ಲೇ ಕಲಿತು ಅಲ್ಲೇ ಅತಿಥಿ ಉಪನ್ಯಾಸಕರಾಗಿ ಸೇರಿಕಂಡಿದ್ದ ಅವರು ಸಿನಿಮಾ ಥಿಯರಿಗಳು ಸಿನಿಮಾದ ಕಲ್ಪನೆಗೆ ತಾತ್ವಿಕ ನೆಲೆಗಟ್ಟು ದೊರಕಿಸಿಕೊಟ್ಟವು. ಮೂರನೆಯವರು ಎಸ್.ರಾಮಚಂದ್ರ ಐತಾಳ್. ಕಾಸರವಳ್ಳಿ ಅವರ ೮ ಕಥಾಚಿತ್ರ ಮತ್ತು ಕೆಲವು ಸಾಕ್ಷ್ಯಚಿತ್ರಗಳ ಛಾಯಾಗ್ರಾಹಕರು. ದೃಶ್ಯ ಸೌಂದರ್ಯ, ಬಿಂಬ ಸೌಷ್ಟವದಷ್ಟೇ ಅಥವಾ ಅದಕ್ಕಿಂತ ಹೆಚ್ಚೇ ಸತ್ಯಕ್ಕೆ ಮಹತ್ವ ಕೊಡುತ್ತಿದ್ದ ಅವರ ವಿಷುಯಲ್ ಫಿಲಾಸಫಿಯನ್ನು ಗಿರೀಶ್ ಅವರಿಗೆ ಬಹಳವಾಗಿ ಮೆಚ್ಚುಗೆಯಾಗಿತ್ತು.
ಮಾ.24ರಂದು ಬಿಡುಗಡೆಯಾಗಲಿರುವ ಪುಸ್ತಕವನ್ನು ವೀರಲೋಕ ಪ್ರಕಾಶನ ಪ್ರಕಟಿಸಿದೆ. ಮುದ್ರಕರು ರೀಗಲ್ ಪ್ರೆಸ್.
.................................
ಚಿತ್ರಯಾನ:
1975ರಲ್ಲಿ ಪುಣೆಯ ಫಿಲ್ಮ್‌ಇನ್‌ಸ್ಟಿಟ್ಯೂಟ್‌ನಲ್ಲಿ ಚಿನ್ನದ ಪದಕದೊಂದಿಗೆ ಅವರ ಚಿತ್ರಗಳ ನಂಟು ಆರಂಭವಾಯಿತು. ಬಿ.ವಿ. ಕಾರಂತರ ನಿರ್ದೇಶನದ ʻಚೋಮನ ದುಡಿʼ ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿದ್ದ ಅವರು ಆನಂತರ ಟಿ.ಎಸ್. ನಾಗಾಭರಣ ಅವರ ʻಗ್ರಹಣʼ ಚಿತ್ರದ ಸಹ ನಿರ್ದೇಶಕರಾಗಿದ್ದರು. 1977ರಲ್ಲಿ ಮೊದಲ ಚಿತ್ರ- ಘಟಶ್ರಾದ್ಧ.ಸ್ವರ್ಣ ಕಮಲದ ಗೌರವಕ್ಕೆ ಪಾತ್ರವಾಯಿತು. ಪೂರ್ಣಚಂದ್ರ ತೇಜಸ್ವಿ ಅವರ ಕತೆಯನ್ನು ಆಧರಿಸಿದ ತಬರನ ಕಥೆ, ತಾಯಿಸಾಹೇಬ ಹಾಗೂ ನಾ.ಡಿಸೋಜ ಅವರ ಕಥೆಯನ್ನು ಆಧರಿಸಿದ ದ್ವೀಪ ʻಸ್ವರ್ಣ ಕಮಲʼದ ಗೌರವ ಪಡೆದ ಅವರ ಇನ್ನಿತರ ಸಿನೆಮಾಗಳು. ಆಕ್ರಮಣ, ಮೂರು ದಾರಿಗಳು, ಬಣ್ಣದ ವೇಷ, ಮನೆ, ಏಕ್‌ಘರ್(ಹಿಂದಿ), ಯಶವಂತ ಚಿತ್ತಾಲ ಅವರ ಕಥೆಯ ಚಿತ್ರರೂಪವಾದ ಕುಬಿ ಮತ್ತು ಇಯಾಲ, ಕ್ರೌರ್ಯ, ಗೃಹಭಂಗ, ಹಸೀನಾ,ನಾಯಿನೆರಳು, ಗುಲಾಬಿ ಟಾಕೀಸ್, ಕನಸೆಂಬ ಕುದುರೆಯನೇರಿ, ಕೂರ್ಮಾವತಾರ ಹಾಗೂ ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ ಅವರ ಇನ್ನಿತರ ಸಿನೆಮಾ ಗಳು. ಆಡೂರ್ ಗೋಪಾಲಕೃಷ್ಣನ್‌ಅವರನ್ನು ಬದುಕಿನ ಸಾಕ್ಷ್ಯಚಿತ್ರ ʻಇಮೇಜಸ್ ಆಂಡ್ ರಿಫ್ಲೆಕ್ಷನ್ಸ್ʼ(2015)ನ್ನು ನಿರ್ದೇಶಿಸಿದ್ದಾರೆ. 10 ರಾಷ್ಟ್ರೀಯ ಮತ್ತು ರಾಜ್ಯ ಪುರಸ್ಕಾರ ಲಭಿಸಿದೆ.
………..
1. ನಿಮ್ಮಬಗ್ಗೆ ಸಾಕಷ್ಟು ಪುಸ್ತಕ ಬಂದಿದೆ. ಈ ಪುಸ್ತಕ ಏಕೆ?
ನನ್ನ ಕುರಿತ ಎಲ್ಲ ಪುಸ್ತಕಗಳು ಬರೆದವರ ದೃಷ್ಟಿಕೋನದಂತೆಇವೆ. ಸಿನೆಮಾ ಕುರಿತ ನನ್ನ ಅನಿಸಿಕೆಗಳನ್ನು ಹೇಳಬೇಕೆನಿಸಿದ್ದರಿಂದ ಈ ಪುಸ್ತಕ ಬಂದಿದೆ.
2. ಬಿಂಬ-ಬಿಂಬನ ಎಂದರೆ?
ಗುಲಾಬಿ ಟಾಕೀಸ್ ನಲ್ಲಿ ಈ ಬಗ್ಗೆ ಬಂದಿದೆ. ಸಿನೆಮಾ ದೃಶ್ಯಕಲೆ ಮಾತ್ರವಲ್ಲ: ಅದು ಶ್ರಾವ್ಯ-ದೃಶ್ಯ ಮಾಧ್ಯಮ. ಸಿನೆಮಾದ ಭಾಷೆ ಕಾಲವನ್ನು ನಿರ್ಧರಿಸುವ ಭಾಷೆ. ಸಿನೆಮಾ ತೆರೆ ಮೇಲೆ ಮೂಡುವಂಥದ್ದಲ್ಲ; ಮನಸ್ಸಿನಲ್ಲಿ ಮೂಡುತ್ತದೆ. ಮನಸ್ಸಿನಲ್ಲಿ ಮೂಡುವುದು ಬಿಂಬ ಮತ್ತು ತಂತ್ರದಿಂದ ಹುಟ್ಟುವಂಥದ್ದು.ತಂತ್ರದ ದುರುಪಯೋಗದ ಸಾಧ್ಯತೆ ಇದೆ. ಅನುಭವದ ಏಮಾರಿಸುವಿಕೆ ಸಾಧ್ಯವಿದೆ. ಬಿಂಬದ ರಾಜಕೀಯತೆ ಸಾಧ್ಯವಿದೆ.
3. ಸಿನೆಮಾ ಹೇಗೆ ವ್ಯಾಖ್ಯಾನಿಸುತ್ತೀರಿ?
ಇಂದು ಸಿನೆಮಾ ವ್ಯಾಖ್ಯಾನ ಎಂದರೆ, ಬಿಡಿ ಬಿಡಿಯಾಗಿ ನೋಡಲಾಗುತ್ತದೆ. ಒಬ್ಬ ಆಟಿಯರ್ ನ ಎಲ್ಲ ಕೃತಿಗಳನ್ನು ಒಟ್ಟಾರೆ ನೋಡಬೇಕಾಗುತ್ತದೆ. ವ್ಯಕ್ತ ಪಾಲಿಟಿಕ್ಸ್ ಮುಖ್ಯವಲ್ಲ;ಸುಪ್ತ ಪಾಲಿಟಿಕ್ಸ್ ಮುಖ್ಯ. ಇಲ್ಲಿ ಪಾಲಿಟಿಕ್ಸ್ ಎಂದರೆ, ಎಡ, ಬಲ ಅಲ್ಲ.ಾದನ್ನು ನಾವು ರಾಜಕೀಯತೆ ಎನ್ನುತ್ತೇನೆ.
4. ಈ ಪುಸ್ತಕದ ಜೆನೆಸಿಸ್ ಹೇಗೆ?
ಗೋಪಾಲಕೃಷ್ಣ ಪೈ ಅವರೊಟ್ಟಿಗೆ ಕಳೆದ 2 ವರ್ಷದಿಂದ ಸಿನೆಮಾ ಕುರಿತ ಸಂಗತಿಗಳ ಬಗ್ಗೆ ಮಾತಾಡುತ್ತಿದ್ದೆ. ಆಡೂರ್ ಗೋಪಾಲಕೃಷ್ಣನ್ ಅವರ ಕುರಿತು ಫಿಲ್ಮ್ ಡಿವಿಷನ್ ಗೆ ಸಾಕ್ಷ್ಯ ಚಿತ್ರವೊಂದನ್ನು ಮಾಡಿಕೊಡಬೇಕಾಯಿತು. ಅದನ್ನು ನಾನೇ ಮಾಡಬೇಕೆಂದು ಅವರು ಆಗ್ರಹಿಸಿದ್ದರು. ಆಡೂರ್ ಅವರ ಚಿತ್ರಗಳು ಕಥಕ್ಕಳಿ, ಕೇರಳದ ರಾಜಕೀಯ ಇತ್ಯಾದಿಯನ್ನು ಒಳಗೊಂಡಿರುತ್ತದೆ.ಇದನ್ನೆಲ್ಲ ಪೈ ಅವರಿಗೆ ಹೇಳಿದೆ. ನೀವೇ ಏಕೆ ಬರೆಯಬಾರದು ಎಂಬ ಪ್ರಶ್ನೆ ಬಂದಿತು. ಜೂನ್ 2,2023 ರಂದು ಬರಹ ಆರಂಭಗೊಂಡಿತು. ಶರತ್ ಕಲ್ಕೋಡ್ ನನ್ನ ಬಗ್ಗೆ ಒಂದು ಪುಸ್ತಕ ಬರೆದಿದ್ದಾರೆ. ನನ್ನ ಸಿನೆಮಾದ ಪಠಕತೆಗಳನ್ನು ಆಧರಿಸಿ,3-4 ಪುಸ್ತಕ ಬಂದಿದೆ. ಇಂಗ್ಲಿಷಿನಲ್ಲಿ ಸಾಕಷ್ಟು ಪುಸ್ತಕಗಳು ಬಂದಿವೆ.
5. 4 ಸ್ವರ್ಣ ಕಮಲ, ಹತ್ತಕ್ಕೂ ಅಧಿಕ ರಾಷ್ಟ್ರೀಯ ಪುರಸ್ಕಾರ, ರಾಜ್ಯ ಪುರಸ್ಕಾರ ಪಡೆದಿದ್ದೀರಿ. ಮುಂದಿನ ಸಿನೆಮಾ ಯಾವುದು? ಮತ್ತು ವಿಷಯ ಏನು?
ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ(2020) ಇನ್ನೂ ಬಿಡುಗಡೆಯಾಗಬೇಕಿದೆ.ಸಿನೆಮಾ ಮಾಡಿ ಎಂದು ಕೆಲವು ನಿರ್ಮಾಪಕರು ಕೇಳಿದ್ದಾರೆ. ತಬರನ ಕತೆಗೆ ಪ್ರತಿಕ್ರಿಯೆಯಾಗಿ, ಮನೆ; ಅದರ ಮುಂದುವರಿಕೆಯಾಗಿ ಕೌರ್ಯ ಬಂದಿತು. ನನ್ನ ಸಿನೆಮಾಗಳು ಒಂದು ಇನ್ನೊಂದರ ಮುಂದುವರಿಕೆಯಾಗಿರುತ್ತವೆ. ಕನ್ನಡ ಸಿನೆಮಾ ಕ್ಷೇತ್ರದ ಇಂದಿನ ಸನ್ನಿವೇಶದಲ್ಲಿ ಮುಂದಿನ ಸಿನೆಮಾ ಬಗ್ಗೆ ಯೋಚನೆ ಇಲ್ಲ.
………
ಕಾಸರವಳ್ಳಿ ಅವರ ಕುರಿತ ಪುಸ್ತಕಗಳು:
1.Discovering Indian Independent Cinema-The films of Girish Kasaravalli by Sakti Sengupta, Natalie Reitano
2. Seer of contemporary history: Girish Kasaravalli and his cinemas-Ganesh Matkari
3. Mysteries of the mundane-the films of Girish Kasaravalli- John W. Wood
4. Life in Metaphors: Portrait of Girish Kasaravalli by OP Srivatsava
5.The films of Girish Kasaravalli by Shakthi Sen Gupta
6.Culturing Realism: Reflections on Girish Kasaravalli Films edited by N Manu ಚಕ್ರವರ್ತಿ
…………