
Petrol Price Hike : ಪೆಟ್ರೋಲ್, ಡೀಸೆಲ್ ಬೆಲೆ ತಲಾ 2 ರೂ. ಏರಿಕೆ ಮಾಡಿದ ಕೇಂದ್ರ ಸರ್ಕಾರ
ಜಾಗತಿಕವಾಗಿ ಕಚ್ಛಾ ತೈಲಗಳ ಬೆಲೆ (ಶೇಕಡಾ 4ರಷ್ಟು ಕುಸಿತ) ಇಳಿಕೆಯಾಗಿರುವ ನಡುವೆಯೂ ಕೇಂದ್ರ ಸರ್ಕಾರ ತೆರಿಗೆ ಮೂಲಕ ಇಂಧನಗಳ ಬೆಲೆ ಹೆಚ್ಚಳ ಮಾಡಲು ತೀರ್ಮಾನಿಸಿರುವುದು ಅಚ್ಚರಿ ಮೂಡಿಸಿದೆ.
ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಶುಲ್ಕವನ್ನು ಪ್ರತಿ ಲೀಟರ್‌ಗೆ 2 ರೂಪಾಯಿಗಳಷ್ಟು ಹೆಚ್ಚಿಸಿರುವುದರಿಂದ ಇಂಧನ ಬೆಲೆಗಳು ಸೋಮವಾರದಿಂದ ಏರಿಕೆಯಾಗಿವೆ. ಹೊಸ ದರಗಳು ಏಪ್ರಿಲ್ 7ರ ಮಧ್ಯರಾತ್ರಿಯಿಂದ ಜಾರಿಗೆ ಬರಲಿದ್ದು, ದೇಶಾದ್ಯಂತ ಜನರ ಮೇಲೆ ಹೆಚ್ಚುವರಿ ಆರ್ಥಿಕ ಒತ್ತಡ ಬೀಳಲಿದೆ. ಜಾಗತಿಕವಾಗಿ ಕಚ್ಛಾ ತೈಲಗಳ ಬೆಲೆ (ಶೇಕಡಾ 4ರಷ್ಟು ಕುಸಿತ) ಇಳಿಕೆಯಾಗುತ್ತಿರುವ ನಡುವೆಯೂ ಕೇಂದ್ರ ಸರ್ಕಾರ ತೆರಿಗೆ ಮೂಲಕ ಇಂಧನಗಳ ಬೆಲೆ ಹೆಚ್ಚಳ ಮಾಡಲು ತೀರ್ಮಾನಿಸಿರುವುದು ಅಚ್ಚರಿ ಮೂಡಿಸಿದೆ.
ಕರ್ನಾಟಕ ಸರ್ಕಾರ ಈಗಾಗಲೇ ಡೀಸೆಲ್ ಬೆಲೆಯನ್ನು ಎರಡು ರೂಪಾಯಿಗಳಷ್ಟು ಏರಿಕೆ ಮಾಡಿತ್ತು. ಇದರ ವಿರುದ್ಧ ರಾಜ್ಯ ಬಿಜೆಪಿ ಪ್ರತಿಭಟನೆಗಳನ್ನು ಆಯೋಜಿಸಿವೆ. ಈ ನಡುವೆ ಕೇಂದ್ರ ಸರ್ಕಾರವೂ ಬೆಲೆಯನ್ನು ಏರಿಕೆ ಮಾಡಿ ಜನರ ಹೊರೆ ಹೆಚ್ಚಿಸಿದೆ.
ಬೆಂಗಳೂರಿನಲ್ಲಿ ಪ್ರಸ್ತುತ ಪೆಟ್ರೋಲ್ ಬೆಲೆ 102.92 ರೂಪಾಯಿಗಳಿದ್ದುಅದು 104.92 ರೂಪಾಯಿಗೆ ಏರಿಕೆಯಾಗಲಿದೆ. ಇದೇ ವೇಳೆ ಡೀಸೆಲ್ ಬೆಲೆ 90.99 ರೂಪಾಯಿಯಷ್ಟಿದ್ದು ಅದು 92.99 ರೂಪಾಯಿಗೆ ಏರಿಕೆಯಾಗಲಿದೆ.
ದೆಹಲಿಯಲ್ಲಿ ಪ್ರಸ್ತುತ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 94.72 ರೂಪಾಯಿಗಳಾಗಿದ್ದು, ಡೀಸೆಲ್ ಬೆಲೆ 87.62 ರೂಪಾಯಿಗಳಾಗಿದೆ. ಮುಂಬೈನಲ್ಲಿ, ಪೆಟ್ರೋಲ್ ಬೆಲೆ ಪ್ರಸ್ತುತ 106.31 ರೂಪಾಯಿಗಳಿಂದ 108.31 ರೂಪಾಯಿಗಳಿಗೆ ಮತ್ತು ಡೀಸೆಲ್ ಬೆಲೆ 94.27 ರೂಪಾಯಿಗಳಿಂದ 96.27 ರೂಪಾಯಿಗಳಿಗೆ ಹೆಚ್ಚಲಿದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ 103.94 ರೂಪಾಯಿಗಳಿಂದ 105.94 ರೂಪಾಯಿಗಳಿಗೆ ಮತ್ತು ಡೀಸೆಲ್ 90.76 ರೂಪಾಯಿಗಳಿಂದ 92.76 ರೂಪಾಯಿಗಳಿಗೆ ಏರಲಿದೆ. ಚೆನ್ನೈನಲ್ಲಿ ಪೆಟ್ರೋಲ್ ಬೆಲೆ 100.75 ರೂಪಾಯಿಗಳಿಂದ 102.75 ರೂಪಾಯಿಗಳಿಗೆ ಮತ್ತು ಡೀಸೆಲ್ 92.34 ರೂಪಾಯಿಗಳಿಂದ 94.34 ರೂಪಾಯಿಗಳಿಗೆ ಏರಿಕೆಯಾಗಲಿದೆ.
ಆದಾಯ ಹೆಚ್ಚಳದ ಗುರಿ
ಸರ್ಕಾರವು ಈ ತೆರಿಗೆ ಹೆಚ್ಚಳದ ಮೂಲಕ ಆರ್ಥಿಕ ಸಂಪನ್ಮೂಲ ಸಂಗ್ರಹಿಸುವ ಗುರಿಯನ್ನು ಹೊಂದಿದೆ. ಈ ನಿರ್ಧಾರವು ಜಾಗತಿಕ ತೈಲ ಬೆಲೆಗಳಲ್ಲಿ ಇಳಿಕೆಯಾಗುತ್ತಿರುವ ನಡುವೆ ಮಧ್ಯೆ ಪ್ರಕಟಗೊಂಡಿರುವುದೇ ಅಚ್ಚರಿ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಶೇಕಡಾ 20-25 ರಷ್ಟು ಅಬಕಾರಿ ಶುಲ್ಕ ಪ್ರಮುಖ ಪಾತ್ರ ವಹಿಸುತ್ತದೆ. ಇದರ ಜೊತೆಗೆ, ರಾಜ್ಯಗಳ VAT ಮತ್ತು ಡೀಲರ್‌ಗಳ ಕಮಿಷನ್ ಸೇರಿದಂತೆ ಒಟ್ಟು ತೆರಿಗೆ ಶೇಕಡಾ 50ಕ್ಕಿಂತ ಹೆಚ್ಚು ಭಾಗವನ್ನು ಒಳಗೊಂಡಿದೆ. ಈ ತೆರಿಗೆ ಹೆಚ್ಚಳದಿಂದ ಸರ್ಕಾರಕ್ಕೆ ವಾರ್ಷಿಕವಾಗಿ ಸುಮಾರು 28,000 ಕೋಟಿ ರೂಪಾಯಿಗಳ ಹೆಚ್ಚುವರಿ ಆದಾಯ ದೊರೆಯುವ ಸಾಧ್ಯತೆಯಿದೆ.
ಬೆಲೆ ಏರಿಕೆಯು ಸಾರಿಗೆ ವೆಚ್ಚ ಹೆಚ್ಚಿಸಲಿದ್ದು, ದೈನಂದಿನ ಜೀವನದಲ್ಲಿ ಬಳಸುವ ವಸ್ತುಗಳ ಬೆಲೆಯೂ ಏರಿಕೆಯಾಗುವ ಸಂಭವವಿದೆ. ವಾಹನ ಚಾಲಕರು ಮತ್ತು ಸಣ್ಣ ವ್ಯಾಪಾರಿಗಳ ಮೇಲೆ ಈ ಒತ್ತಡ ಹೆಚ್ಚಾಗಿ ಬೀಳಲಿದೆ.
ಈ ಹಿಂದೆ, 2021ರಲ್ಲಿ ಸರ್ಕಾರವು ಪೆಟ್ರೋಲ್ ಮೇಲಿನ ಶುಲ್ಕವನ್ನು 5 ರೂಪಾಯಿ ಮತ್ತು ಡೀಸೆಲ್ ಮೇಲಿನ ಶುಲ್ಕವನ್ನು 10 ರೂಪಾಯಿ ಕಡಿಮೆ ಮಾಡಿತ್ತು. ಆದರೆ, ಈಗ ಮತ್ತೆ ತೆರಿಗೆ ಹೆಚ್ಚಳದ ನಿರ್ಧಾರವು ಜನರಲ್ಲಿ ಆಶ್ಚರ್ಯ ಮತ್ತು ಅಸಮಾಧಾನ ಉಂಟುಮಾಡಿದೆ.