ಟಿಪ್ಪು ಸುಲ್ತಾನ್ ಜಯಂತಿಯಂದು ಪುಣೆ ಮೆರವಣಿಗೆಗೆ ಅನುಮತಿ: ಹೈಕೋರ್ಟ್
x
ಬಾಂಬೆ ಹೈಕೋರ್ಟ್​​.

ಟಿಪ್ಪು ಸುಲ್ತಾನ್ ಜಯಂತಿಯಂದು ಪುಣೆ ಮೆರವಣಿಗೆಗೆ ಅನುಮತಿ: ಹೈಕೋರ್ಟ್

ಕಾರ್ಯಕ್ರಮದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳುವುದು ಪೊಲೀಸರ ಕೆಲಸ ಎಂದು ಹೈಕೋರ್ಟ್ ಹೇಳಿದೆ. ಪ್ರತಿ ಬಾರಿಯೂ ಕಾನೂನು ಮತ್ತು ಸುವ್ಯವಸ್ಥೆ ವಿಷಯವನ್ನು ಕಾಪಾಡಬೇಕು ಹೇಳಿದೆ.


18ನೇ ಶತಮಾನದ ಮೈಸೂರಿನ ದೊರೆ ಟಿಪ್ಪು ಸುಲ್ತಾನ್ ಜನ್ಮ ದಿನಾಚರಣೆಯ ಅಂಗವಾಗಿ ಡಿಸೆಂಬರ್ 24ರಂದು ಪುಣೆಯಲ್ಲಿ ನಡೆಸಲು ಉದ್ದೇಶಿಸಲಾಗಿದ್ದ ಮೆರವಣಿಗೆಗೆ ಅನುಮತಿ ನೀಡಲಾಗಿದೆ ಎಂದು ಪೊಲೀಸರು ಮಂಗಳವಾರ ಬಾಂಬೆ ಹೈಕೋರ್ಟ್ ಗೆ ಮಾಹಿತಿ ನೀಡಿದ್ದಾರೆ.

ಪುಣೆ ಗ್ರಾಮೀಣ ಪೊಲೀಸರು ನೀಡಿದ ಅನುಮತಿಯ ಬಗ್ಗೆ ಮಾಹಿತಿ ಪಡೆದ ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ಡೇರೆ ಮತ್ತು ಪೃಥ್ವಿರಾಜ್ ಚವಾಣ್ ಅವರ ವಿಭಾಗೀಯ ಪೀಠವು, ಭಾರತೀಯರಿಗೆ ಮೆರವಣಿಗೆ ನಡೆಸುವ ಹಕ್ಕಿದೆ. ಕಾನೂನಿನ ಪ್ರಕಾರ ವಿಧಿಸಲಾದ ಷರತ್ತುಗಳು ಮತ್ತು ನಿರ್ಬಂಧಗಳಿಗೆ ಬದ್ಧನಾಗಿರಬೇಕು ಎಂದು ಹೇಳಿದೆ.

ಕಾರ್ಯಕ್ರಮದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳುವುದು ಪೊಲೀಸರ ಕೆಲಸ ಎಂದು ಹೈಕೋರ್ಟ್ ಹೇಳಿದೆ. ಪ್ರತಿ ಬಾರಿಯೂ ಕಾನೂನು ಮತ್ತು ಸುವ್ಯವಸ್ಥೆ ವಿಷಯವನ್ನು ಕಾಪಾಡಬೇಕು ಹೇಳಿದೆ.

ಟಿಪ್ಪು ಸುಲ್ತಾನ್, ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಜನ್ಮ ದಿನಾಚರಣೆ ಮತ್ತು ಸಂವಿಧಾನ ದಿನಾಚರಣೆಯ ವೇಳೆ ರ್ಯಾಲಿ ನಡೆಸಲು ಅನುಮತಿ ನೀಡುವಂತೆ ಪೊಲೀಸರಿಗೆ ನಿರ್ದೇಶನ ನೀಡುವಂತೆ ಕೋರಿ ಅಖಿಲ ಭಾರತ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಪುಣೆ ಘಟಕದ ಅಧ್ಯಕ್ಷ ಫಯಾಜ್ ಶೇಖ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಪೀಠ ವಿಚಾರಣೆ ನಡೆಸಿದೆ.

ಮನವಿಯ ಪ್ರಕಾರ, ಪುಣೆ ಗ್ರಾಮೀಣ ಪೊಲೀಸರು ರ್ಯಾಲಿಗೆ ಅನುಮತಿ ನೀಡಲು ನಿರಾಕರಿಸಿದ್ದರು. ಖಾಸಗಿ ಸ್ಥಳದಲ್ಲಿ ಆಚರಿಸುವಂತೆ ಅರ್ಜಿದಾರರಿಗೆ ತಿಳಿಸಿದ್ದರು. ಇಂತಹ ರ್ಯಾಲಿಗಳು ಕಾನೂನು ಮತ್ತು ಸುವ್ಯವಸ್ಥೆಗೆ ತೊಂದರೆಯಾಗಬಹುದು ಎಂದು ಪೊಲೀಸರು ಆತಂಕ ಹೇಳಿದ್ದರು.

ಈ ಕಾರ್ಯಕ್ರಮಕ್ಕೆ ಅನುಮತಿ ಕೋರಿ ಸಲ್ಲಿಸಿದ ಮನವಿಯನ್ನು ಪರಿಗಣಿಸುವಂತೆ ನ್ಯಾಯಪೀಠ ಕಳೆದ ವಾರ ಪೊಲೀಸರಿಗೆ ನಿರ್ದೇಶನ ನೀಡಿತ್ತು. ನಿಗದಿತ ಮಾರ್ಗದಲ್ಲಿ ಮೆರವಣಿಗೆ ನಡೆಸಲು ಪೊಲೀಸರು ಅನುಮತಿ ನೀಡಿದ್ದಾರೆ ಎಂದು ಮಂಗಳವಾರ ನ್ಯಾಯಪೀಠಕ್ಕೆ ತಿಳಿಸಲಾಗಿದೆ.

ಈ ಕಾರ್ಯಕ್ರಮಕ್ಕೆ ಬ್ಯಾನರ್​ಗಳು ಮತ್ತು ಕಮಾನುಗಳನ್ನು ಹಾಕಲು ಪೊಲೀಸರು ಇನ್ನೂ ನಿರಾಕ್ಷೇಪಣಾ ಪ್ರಮಾಣಪತ್ರ (ಎನ್ಒಸಿ) ನೀಡಿಲ್ಲ ಎಂದು ಅರ್ಜಿದಾರರು ಹೇಳಿದ್ದಾರೆ.

ಉದ್ದೇಶಿತ ಮೆರವಣಿಗೆಯ ಬಗ್ಗೆ ಸ್ವಲ್ಪ ಗೊಂದಲಗಳಿವೆ. ಆದ್ದರಿಂದ ಅದನ್ನು ನಿರ್ದಿಷ್ಟ ಮಾರ್ಗದಲ್ಲಿ ನಡೆಸಲು ಅನುಮತಿ ನೀಡಲಾಗಿದೆ. ಈಗ ಅರ್ಜಿದಾರರು ನಗರದಾದ್ಯಂತ ಬ್ಯಾನರ್​​ಗಳು ಮತ್ತು ಕಮಾನುಗಳನ್ನು ಹಾಕಲು ಬಯಸಿದ್ದಾರೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಹಿತೇನ್ ವೆನೆಗಾಂವ್ಕರ್ ಕೋರ್ಟ್​ಗೆ ತಿಳಿಸಿದ್ದಾರೆ. ಈ ಅರ್ಜಿಯ ಬಗ್ಗೆ 24 ಗಂಟೆಗಳ ಒಳಗೆ ನಿರ್ಧಾರ ತೆಗೆದುಕೊಳ್ಳುವಂತೆ ನ್ಯಾಯಪೀಠ ಪೊಲೀಸರಿಗೆ ನಿರ್ದೇಶನ ನೀಡಿತು.

Read More
Next Story