
ಸುಳ್ಳು, ದ್ವೇಷ ಮತ್ತು ವ್ಯವಸ್ಥಿತ ಪ್ರಚಾರಕ್ಕೆ ತಿರಸ್ಕಾರ: ರಾಹುಲ್ ಗಾಂಧಿ
ನವದೆಹಲಿ, ಮೇ 25- ʻಲೋಕಸಭೆ ಚುನಾವಣೆಯ ಮೊದಲ ಐದು ಹಂತಗಳಲ್ಲಿ ಜನರು ಸುಳ್ಳು, ದ್ವೇಷ ಮತ್ತು ವ್ಯವಸ್ಥಿತ ಪ್ರಚಾರವನ್ನು ತಿರಸ್ಕರಿಸಿದ್ದಾರೆ. ತಮ್ಮ ಜೀವನಕ್ಕೆ ಸಂಬಂಧಿಸಿದ ನೈಜ ಸಮಸ್ಯೆಗಳಿಗೆ ಆದ್ಯತೆ ನೀಡಿದ್ದಾರೆ,ʼ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಹೇಳಿದರು.
ತಮ್ಮ ತಾಯಿ, ಕಾಂಗ್ರೆಸ್ ಮಾಜಿ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರೊಂದಿಗೆ ನವದೆಹಲಿಯ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದರು. ʻಶನಿವಾರ ನಡೆಯಲಿರುವ ಆರನೇ ಹಂತದ ಚುನಾವಣೆಯಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ತಮ್ಮ ಕುಟುಂಬದ ಭವಿಷ್ಯಕ್ಕಾಗಿ ಮತ ಚಲಾಯಿಸಬೇಕು,ʼ ಎಂದು ಮನವಿ ಮಾಡಿದರು.
ಮತ ಚಲಾಯಿಸಿದ ನಂತರ, ರಾಹುಲ್ ಅವರು ಸೋನಿಯಾ ಗಾಂಧಿ ಅವರೊಂದಿಗಿನ ಚಿತ್ರವನ್ನು ಪೋಸ್ಟ್ ಮಾಡಿದರು.
ʻಮೊದಲ ಐದು ಹಂತದ ಮತದಾನದಲ್ಲಿ ನೀವು ಸುಳ್ಳು, ದ್ವೇಷ ಮತ್ತು ವ್ಯವಸ್ಥಿತ ಪ್ರಚಾರವನ್ನು ತಿರಸ್ಕರಿಸಿದ್ದೀರಿ. ಜೀವನಕ್ಕೆ ಸಂಬಂಧಿಸಿದ ತಳಮಟ್ಟದ ಸಮಸ್ಯೆಗಳಿಗೆ ಆದ್ಯತೆ ನೀಡಿದ್ದೀರಿ. ಇಂದು ಆರನೇ ಹಂತದ ಮತದಾನ ನಡೆಯುತ್ತಿದೆ. ನಿಮ್ಮ ಪ್ರತಿ ಮತ 30 ಲಕ್ಷ ಖಾಲಿ ಇರುವ ಸರ್ಕಾರಿ ಹುದ್ದೆಗಳಿಗೆ ನೇಮಕ, ಯುವಜನರಿಗೆ ವರ್ಷಕ್ಕೆ 1 ಲಕ್ಷ ರೂ., ಬಡ ಕುಟುಂಬದ ಮಹಿಳೆಯರಿಗೆ ಮಾಸಿಕ 8,500 ರೂ., ರೈತರಿಗೆ ಸಾಲ ಮುಕ್ತಿ ಮತ್ತು ಬೆಳೆಗಳಿಗೆ ವೈಜ್ಞಾನಿಕ ಕನಿಷ್ಠ ಬೆಂಬಲ ಬೆಲೆ, ಕಾರ್ಮಿಕರು 400 ರೂ. ವೇತನ ಪಡೆಯುತ್ತಾರೆ,ʼ ಎಂದರು.
ʻನಿಮ್ಮ ಮತ ನಿಮ್ಮ ಜೀವನವನ್ನು ಸುಧಾರಿಸುವುದಲ್ಲದೆ, ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ರಕ್ಷಿಸುತ್ತದೆ. ಪ್ರಜಾಪ್ರಭುತ್ವದ ಈ ಹಬ್ಬಕ್ಕೆ ನಾನು ಮತ್ತು ನನ್ನ ತಾಯಿ ಮತದಾನದ ಮೂಲಕ ಕೊಡುಗೆ ನೀಡಿದ್ದೇವೆ. ನೀವೆಲ್ಲರೂ ಹಕ್ಕುಗಳ ರಕ್ಷಣೆಗೆ ಮತ್ತು ನಿಮ್ಮ ಕುಟುಂಬದ ಭವಿಷ್ಯಕ್ಕಾಗಿ ಮತ ಚಲಾಯಿಸಬೇಕು,ʼ ಎಂದು ಅವರು ಹೇಳಿದರು.