ಎನ್‌ಡಿಎ ಮೇಲೆ ಸತತ 3ನೇ ಬಾರಿ ನಂಬಿಕೆ; ಇದು ಐತಿಹಾಸಿಕ ಸಾಧನೆ: ಪ್ರಧಾನಿ ಮೋದಿ
ಹೊಸದಿಲ್ಲಿ, ಜೂ.4 : ಸತತ ಮೂರನೇ ಅವಧಿಗೆ ಆಡಳಿತಾರೂಢ ಮೈತ್ರಿಕೂಟದಲ್ಲಿ ಜನರು ನಂಬಿಕೆ ಇಟ್ಟಿದ್ದಾರೆ. ಇದೊಂದು ಐತಿಹಾಸಿಕ ಸಾಧನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಎಕ್ಸ್‌ನ ಪೋಸ್ಟ್‌ನಲ್ಲಿ, ʻಈ ಪ್ರೀತಿಗಾಗಿ ನಾನು ಜನತಾ ಜನಾರ್ದನನಿಗೆ ನಮಸ್ಕರಿಸುತ್ತೇನೆ. ಜನರ ಆಶೋತ್ತರಗಳನ್ನು ಈಡೇರಿಸಲು ಕಳೆದ ದಶಕದಲ್ಲಿ ಮಾಡಿದ ಉತ್ತಮ ಕೆಲಸವನ್ನು ಮುಂದುವರಿಸುತ್ತೇವೆ ಎಂದು ಅವರಿಗೆ ಭರವಸೆ ನೀಡುತ್ತೇನೆ. ಮೈತ್ರಿಕೂಟದ ಕಾರ್ಯಕರ್ತರ ಅಸಾಧಾರಣ ಪ್ರಯತ್ನಗಳನ್ನು ಪದಗಳಿಂದ ವರ್ಣಿಸಲು ಸಾಧ್ಯವಿಲ್ಲ,ʼ ಎಂದು ಹೇಳಿದರು.
ಒಡಿಶಾದಲ್ಲಿ ಬಿಜೆಪಿ ತನ್ನ ಚೊಚ್ಚಲ ಸರ್ಕಾರವನ್ನು ರಚಿಸಲಿರುವ ಹಿನ್ನೆಲೆಯಲ್ಲಿ ಮೋದಿ ರಾಜ್ಯದ ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು. ʻಇದು ಉತ್ತಮ ಆಡಳಿತಕ್ಕೆ ಮತ್ತು ಒಡಿಶಾದ ವಿಶಿಷ್ಟ ಸಂಸ್ಕೃತಿಯನ್ನು ಆಚರಿಸುವ ಅದ್ಭುತ ವಿಜಯ. ಜನರ ಕನಸುಗಳನ್ನು ಈಡೇರಿಸು ವಲ್ಲಿ ಮತ್ತು ಬಿಜೆಪಿ ಒಡಿಶಾವನ್ನು ಪ್ರಗತಿಯತ್ತ ಕೊಂಡೊಯ್ಯಲಿದೆ,ʼ ಎಂದು ಹೇಳಿದರು.
ಆಂಧ್ರಪ್ರದೇಶದಲ್ಲಿ ಟಿಡಿಪಿ ನೇತೃತ್ವದ ಎನ್‌ಡಿಎ ಭಾರಿ ಬಹುಮತದತ್ತ ಸಾಗುತ್ತಿರುವ ಕುರಿತು ಪ್ರತಿಕ್ರಿಯಿಸಿ, ಟಿಡಿಪಿ ನಾಯಕ ಎನ್. ಚಂದ್ರಬಾಬು ನಾಯ್ಡು ಮತ್ತು ಜನಸೇನೆಯ ನಾಯಕ ಪವನ್ ಕಲ್ಯಾಣ್ ಅವರನ್ನು ಅಭಿನಂದಿಸಿದರು.
ʻನಾವು ಆಂಧ್ರಪ್ರದೇಶದ ಸರ್ವತೋಮುಖ ಪ್ರಗತಿಗೆ ಶ್ರಮಿಸುತ್ತೇವೆ. ರಾಜ್ಯದ ಏಳಿಗೆಯನ್ನು ಖಚಿತಪಡಿಸುತ್ತೇವೆ,ʼ ಎಂದು ಹೇಳಿದರು.
ಲೋಕಸಭೆಯಲ್ಲಿ ಬಿಜೆಪಿ ಬಹುಮತದ ಕೊರತೆ ಹೊಂದಿದೆ. ಜವಹರಲಾಲ್ ನೆಹರೂ ನಂತರ ಯಾವುದೇ ಪ್ರಧಾನಿ ಸತತ ಮೂರನೇ ಅವಧಿಗೆ ಅಧಿಕಾರಕ್ಕೆ ಮರಳಿಲ್ಲ.