
Prahlad Singh Patel: ಗ್ಯಾರಂಟಿ ಯೋಜನೆಗಳನ್ನು ಭಿಕ್ಷಾಟನೆ ಎಂದ ಬಿಜೆಪಿ ಸಚಿವ, ವಿವಾದ ಸೃಷ್ಟಿ
ರಾಜ್‌ಗಢ ಜಿಲ್ಲೆಯಲ್ಲಿ ಶನಿವಾರ ನಡೆದ ವೀರ ರಾಣಿ ಅವಂತಿ ಬಾಯಿ ಲೋಧಿ ಅವರ ಪ್ರತಿಮೆ ಅನಾವರಣ ಸಮಾರಂಭದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. ಭಾಷಣದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ
ಸರ್ಕಾರಗಳು ನೀಡುವ ಗ್ಯಾರಂಟಿ ಯೋಜನೆಗಳು ಚರ್ಚೆಯ ವಿಷಯ. ಅದು ನ್ಯಾಯಾಲಯದ ಮೆಟ್ಟಿಲನ್ನೂ ಏರಿದೆ. ಕಾಂಗ್ರೆಸ್ ಉಚಿತ ಯೋಜನೆಗಳನ್ನು ನೀಡುತ್ತದೆ ಎಂದು ಆರೋಪಿಸುತ್ತಿದ್ದ ಬಿಜೆಪಿ ಇದೀಗ ಅವರನ್ನೂ ಮೀರಿಸುವಂತೆ ಗ್ಯಾರಂಟಿಗಳನ್ನು ಘೋಷಿಸುತ್ತಿದೆ. ಇದೀಗ ಬಿಜೆಪಿಗೆ ಸೇರಿದ ಸಚಿವರೊಬ್ಬರು ಗ್ಯಾರಂಟಿ ಯೋಜನೆಗಳನ್ನು ಭಿಕ್ಷಾಟನೆಗೆ ಹೋಲಿಸಿ ಮಾತನಾಡಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ.
ಮಧ್ಯಪ್ರದೇಶದ ಬಿಜೆಪಿ ಸರ್ಕಾರದ ಸಚಿವ ಪ್ರಹ್ಲಾದದ ಸಿಂಗ್ ಪಟೇಲ್ ಈ ವಿವಾದ ಹುಟ್ಟು ಹಾಕಿದವರು. ರಾಜ್‌ಗಢ ಜಿಲ್ಲೆಯಲ್ಲಿ ಶನಿವಾರ ನಡೆದ ವೀರ ರಾಣಿ ಅವಂತಿ ಬಾಯಿ ಲೋಧಿ ಅವರ ಪ್ರತಿಮೆ ಅನಾವರಣ ಸಮಾರಂಭದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. ಭಾಷಣದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ
''ಉಚಿತವಾಗಿ ನೀಡುವ ಪದ್ಧತಿಗಳು ಸಮಾಜವನ್ನು ಬಲಪಡಿಸುವ ಬದಲು ದುರ್ಬಲಗೊಳಿಸುತ್ತವೆ. ಉಚಿತ ಪಡೆಯುವವರೆಲ್ಲರೂ ಭಿಕ್ಷುಕರು. ಭಿಕ್ಷುಕರ ಸೈನ್ಯವು ಸಮಾಜವನ್ನು ಬಲಪಡಿಸುತ್ತಿಲ್ಲ, ಬದಲಾಗಿ ಇನ್ನೂ ದುರ್ಬಲ ಮಾಡುತ್ತದೆ. ಉಚಿತ ವಸ್ತುಗಳ ಕಡೆಗೆ ಆಕರ್ಷಣೆಯು ಧೈರ್ಯಶಾಲಿ ಮಹಿಳೆಯರ ಗೌರವದ ಸಂಕೇತವಲ್ಲ. ಮೌಲ್ಯಗಳಿಗನುಗುಣವಾಗಿ ನಾವು ಜೀವನ ನಡೆಸಬೇಕು, ಆಗ ಮಾತ್ರ ಗೌರವ ಸಿಗುತ್ತದೆ ,'' ಎಂದು ಲೇವಡಿ ಮಾಡಿದ್ದಾರೆ.
"ಜನರು ಸರ್ಕಾರದಿಂದ ಭಿಕ್ಷೆ ಬೇಡುವ ಅಭ್ಯಾಸ ಬೆಳೆಸಿಕೊಂಡಿದ್ದಾರೆ. ನಾಯಕರು ಬಂದಾಗ ಅವರಿಗೆ ಅರ್ಜಿಗಳಿಂದ ತುಂಬಿದ ಬುಟ್ಟಿ ಕೊಡುತ್ತಾರೆ. ವೇದಿಕೆಗೆ ಕರೆದು ಹಾರ ಹಾಕಿ ಮತ್ತು ಅವರ ಕೈಯಲ್ಲಿ ಮನವಿ ಪತ್ರ ಇಡುತ್ತಾರೆ. ಇದು ಒಳ್ಳೆಯ ಅಭ್ಯಾಸವಲ್ಲ. ಕೇಳುವ ಬದಲು, ನೀಡುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಿ. ಇದರಿಂದ ಸುಸಂಸ್ಕೃತ ಸಮಾಜ ನಿರ್ಮಿಸಲು ಸಹಾಯ ಮಾಡುತ್ತದೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ" ಎಂದೂ ಪ್ರಹ್ಲಾದ್ ಹೇಳಿದ್ದಾರೆ. .
ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಜೀತು ಪಟ್ವಾರಿ ಈ ಹೇಳಿಕೆಯನ್ನು ಖಂಡಿಸಿದ್ದಾರೆ. , "ಬಿಜೆಪಿಯಿಂದಾಗಿ ಜನರು ಭಿಕ್ಷುಕರಾಗುತ್ತಿದ್ದಾರೆ," ಎಂದು ಹೇಳಿದ್ದಾರೆ. ಬಿಜೆಪಿಯ ಈ ದುರ್ನಡತೆ ಹಾಗೂ ದುರಹಂಕಾರಕ್ಕೆ ಪೆಟ್ಟು ಬೀಳುತ್ತದೆ ಎಂದು ನುಡಿದಿದ್ದಾರೆ.