ಬಿಹಾರ: ಮೀಸಲು ಹೆಚ್ಚಳ ಆದೇಶ ರದ್ದುಗೊಳಿಸಿದ ಹೈಕೋರ್ಟ್
x

ಬಿಹಾರ: ಮೀಸಲು ಹೆಚ್ಚಳ ಆದೇಶ ರದ್ದುಗೊಳಿಸಿದ ಹೈಕೋರ್ಟ್

2023ರಲ್ಲಿ ನಿತೀಶ್ ಕುಮಾರ್‌ ಅವರ ಸರ್ಕಾರ ಜಾರಿಗೆ ತಂದ ಎರಡು ಕಾಯಿದೆಗಳನ್ನು ನ್ಯಾಯಾಲಯ ರದ್ದುಗೊಳಿಸಿದೆ. ಈ ಕಾಯಿದೆಗಳು ಸಂವಿಧಾನದ ವಿಧಿ 14, 15 ಮತ್ತು 16ನ್ನು ಉಲ್ಲಂಘಿಸುತ್ತದೆ ಎಂದು ಹೇಳಿದೆ.


ಬಿಹಾರ ಸರ್ಕಾರದ ಉದ್ಯೋಗ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲು ಶೇ.50 ರಿಂದ ಶೇ. 65ಕ್ಕೆ ಹೆಚ್ಚಳ ಆದೇಶವನ್ನು ಪಾಟ್ನಾ ಹೈಕೋರ್ಟ್ ಗುರುವಾರ (ಜೂನ್ 20) ವಜಾಗೊಳಿಸಿದೆ.

ನವೆಂಬರ್ 2023 ರಲ್ಲಿ ನಿತೀಶ್ ಕುಮಾರ್ ಸರ್ಕಾರ ತಂದ ಶಾಸನವನ್ನು ಮು.ನ್ಯಾ. ಕೆ. ವಿನೋದ್ ಚಂದ್ರನ್ ನೇತೃತ್ವದ ವಿಭಾಗೀಯ ಪೀಠ ರದ್ದುಗೊಳಿಸಿ, ಆದೇಶ ನೀಡಿದೆ.

ಸಂವಿಧಾನದ ಉಲ್ಲಂಘನೆ: ಬಿಹಾರದ ಹುದ್ದೆಗಳು ಮತ್ತು ಸೇವೆಗಳಲ್ಲಿ ಮೀಸಲು (ತಿದ್ದುಪಡಿ) ಕಾಯಿದೆ 2023 ಮತ್ತು ಬಿಹಾರ (ಶಿಕ್ಷಣ ಸಂಸ್ಥೆಗಳು) ಮೀಸಲು (ತಿದ್ದುಪಡಿ) ಕಾಯಿದೆ 2023 ನ್ನು ಹೈಕೋರ್ಟ್ ರದ್ದುಗೊಳಿಸಿತು. ಈ ಕಾನೂನುಗಳ ಮೂಲಕ ನೀಡುವ ಹೆಚ್ಚುವರಿ ಮೀಸಲು ಸಂವಿಧಾನದ ವಿಧಿ 14,15 ಮತ್ತು 16ನ್ನು ಉಲ್ಲಂಘಿಸುತ್ತದೆ ಎಂದು ಹೇಳಿದೆ.

ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರಲ್ಲಿ ಒಬ್ಬರಾದ ರಿತಿಕಾ ರಾಣಿ, ʻಮೀಸಲು ಕಾನೂನು ತಿದ್ದುಪಡಿಗಳು ಸಂವಿಧಾನದ ಉಲ್ಲಂಘನೆ,ʼ ಎಂದು ಹೇಳಿದರು.

ಆದೇಶದ ಬಗ್ಗೆ ಪ್ರತಿಕ್ರಿಯಿಸಿದ ಆರ್‌ಜೆಡಿ ವಕ್ತಾರ ಮನೋಜ್ ಝಾ, ಹೈಕೋರ್ಟ್‌ನ ಆದೇಶ ದುರದೃಷ್ಟಕರ ಮತ್ತು ಸಾಮಾಜಿಕ ಅಸಮಾನತೆಯನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.

ಮೀಸಲು ಮಿತಿಯನ್ನು ಹೆಚ್ಚಿಸಲು ಸುದೀರ್ಘ ಕಾನೂನು ಹೋರಾಟ ನಡೆಸಿದ ತಮಿಳುನಾಡಿನಂತೆ, ತಮ್ಮ ಪಕ್ಷ ಕೂಡ ದೀರ್ಘ ಕಾಲ ಹೋರಾಟಕ್ಕೆ ಸಿದ್ಧವಾಗಿದೆ ಎಂದು ಝಾ ಹೇಳಿದರು.

ಬಿಜೆಪಿ ಮೇಲೆ ವಾಗ್ದಾಳಿ: ಪ್ರಕರಣದಲ್ಲಿ ಅರ್ಜಿದಾರರ ಹಿಂದೆ ಇರುವ ಜನರನ್ನು ಪ್ರಶ್ನಿಸಿದ ಅವರು, ಅರ್ಜಿದಾರರ ಹಿನ್ನೆಲೆಯನ್ನು ಪರಿಶೀಲಿಸಬೇಕು ಎಂದು ಹೇಳಿದರು. ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸ ಬೇಕೆಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಒತ್ತಾಯಿಸಿದ ಅವರು, ಆಡಳಿತಾರೂಢ ಎನ್‌ಡಿಎ ಒಕ್ಕೂಟದ ಭಾಗವಾಗಿರುವ ಜೆಡಿಯು ಮೋದಿ ಸರ್ಕಾರದ ಮೇಲೆ ಒತ್ತಡ ಹೇರಬೇಕು ಮತ್ತು ಹೆಚ್ಚಿದ ಮೀಸಲನ್ನು ಸಂವಿಧಾನದ ಒಂಬತ್ತನೇ ಪರಿಶಿಷ್ಠದಡಿ ಸೇರ್ಪಡೆಗೊಳಿಸಬೇಕು ಎಂದು ಹೇಳಿದರು.

Read More
Next Story