ಚಿರಾಗ್ ಪಾಸ್ವಾನ್ ಜೊತೆ ಒಪ್ಪಂದ:  ಕೇಂದ್ರ ಸಂಪುಟಕ್ಕೆ  ಪಶುಪತಿ ಪರಾಸ್ ರಾಜೀನಾಮೆ
x

ಚಿರಾಗ್ ಪಾಸ್ವಾನ್ ಜೊತೆ ಒಪ್ಪಂದ: ಕೇಂದ್ರ ಸಂಪುಟಕ್ಕೆ ಪಶುಪತಿ ಪರಾಸ್ ರಾಜೀನಾಮೆ


ಕೇಂದ್ರ ಸಚಿವ ಪಶುಪತಿ ಕುಮಾರ್ ಪರಾಸ್ ಮಂಗಳವಾರ ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ.

ಬಿಜೆಪಿ ಮಿತ್ರಪಕ್ಷಗಳೊಂದಿಗೆ ಸೀಟು ಹಂಚಿಕೆ ಒಪ್ಪಂದ ಮಾಡಿಕೊಳ್ಳುವಾಗ ತಮ್ಮ ರಾಷ್ಟ್ರೀಯ ಲೋಕ ಜನಶಕ್ತಿ ಪಕ್ಷಕ್ಕೆ ಅನ್ಯಾಯ ಮಾಡಿದೆ ಎಂದು ಆರೋಪಿಸಿದ್ದಾರೆ. ಬಿಜೆಪಿ ನೇತೃತ್ವದ ಎನ್‌ಡಿಎ, ಚಿರಾಗ್ ಪಾಸ್ವಾನ್ ನೇತೃತ್ವದ ಎಲ್‌ಜೆಪಿ (ರಾಮವಿಲಾಸ್)ಗೆ ಐದು ಸ್ಥಾನ ನೀಡಿದ ಒಂದು ದಿನದ ನಂತರ ಪಾರಸ್ ಅವರ ರಾಜೀನಾಮೆ ಘೋಷಣೆ ಹೊರಬಿದ್ದಿದೆ.

ಆರ್‌ಎಲ್‌ಜೆಪಿ ಅಧ್ಯಕ್ಷರಾದ ಪರಾಸ್, ಭವಿಷ್ಯದ ಯೋಜನೆಗಳ ಬಗ್ಗೆ ವಿವರಿಸಲಿಲ್ಲ ಮತ್ತು ಪ್ರಧಾನಿಯನ್ನು ದೊಡ್ಡ ನಾಯಕ ಎಂದು ಶ್ಲಾಘಿಸಿದರು. ತಾವು ಎನ್‌ಡಿಎಗೆ ಪ್ರಾಮಾಣಿಕತೆ ಮತ್ತು ನಿಷ್ಠೆಯಿಂದ ಸೇವೆ ಸಲ್ಲಿಸಿದ್ದರೂ, ತಮಗೆ ಅನ್ಯಾಯವಾಗಿದೆ ಎಂದು ಹೇಳಿದರು.

ಸೀಟು ಹಂಚಿಕೆಯಲ್ಲಿ ಅನ್ಯಾಯ: ಬಿಹಾರದಲ್ಲಿ ಬಿಜೆಪಿ ಮಾಡಿಕೊಂಡ ಸೀಟು ಹಂಚಿಕೆ ಒಪ್ಪಂದದಲ್ಲಿ ಆರ್‌ಎಲ್‌ಜೆಪಿ ಸಂಪೂರ್ಣ ನಿರ್ಲಕ್ಷಿತವಾಗಿದೆ. ಚಿರಾಗ್ ಪಾಸ್ವಾನ್ ಅವರ ಎಲ್‌ಜೆಪಿಗೆ 2019 ರಲ್ಲಿ ಪಾರಸ್ ವಿಜಯಶಾಲಿಯಾದ ಹಾಜಿಪುರ ಸೇರಿದಂತೆ ಐದು ಸ್ಥಾನ ನೀಡಲಾಗಿದೆ. ಹಾಜಿಪುರದ ಜೊತೆಗೆ ಜಮುಯಿ, ವೈಶಾಲಿ, ಸಮಸ್ತಿಪುರ ಮತ್ತು ಖಗರಿಯಾ ಕ್ಷೇತ್ರಗಳನ್ನು ನೀಡಲಾಗಿದೆ. ಕಾಂಗ್ರೆಸ್ ಮತ್ತು ಆರ್‌ಜೆಡಿ ಜೊತೆಗೆ ಒಪ್ಪಂದ ಮಾಡಿಕೊಳ್ಳಲು ಪಾರಸ್ ಸಿದ್ಧವಿಲ್ಲ. ಆದರೆ, ಆರ್‌ಎಲ್‌ಜೆಪಿ ಹಾಜಿಪುರ ಕ್ಷೇತ್ರದಲ್ಲಿ ಸ್ಪರ್ಧಿಸಲಿದೆ ಎಂದು ಖಚಿತಪಡಿಸಿದ್ದಾರೆ. ತಾವು ಸೇರಿದಂತೆ ಆರ್‌ಎಲ್‌ಜೆಪಿಯ ಐವರು ಸಂಸದರು ಕಳೆದ ಚುನಾವಣೆಯಲ್ಲಿ ಗೆದ್ದಿರುವ ಸ್ಥಾನಗಳಲ್ಲೇ ಸ್ಪರ್ಧಿಸಲಿದ್ದಾರೆ ಎಂದು ಕಳೆದ ವಾರ ಸ್ಪಷ್ಟಪಡಿಸಿದ್ದರು. ʻಪಕ್ಷ ಸ್ವತಂತ್ರವಾಗಿದೆʼ ಎನ್ನುವ ಮೂಲಕ ಬೇರೆ ಪಕ್ಷಗ ಳೊಂದಿಗೆ ಒಪ್ಪಂದದ ಸುಳಿವು ನೀಡಿದರು.

ಚಿರಾಗ್ ಅವರ ತಂದೆ, ಆಗಿನ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ನೇತೃತ್ವದ ಲೋಕ ಜನಶಕ್ತಿ ಪಕ್ಷದಿಂದ ಪಾರಸ್ ಕಳೆದ ಚುನಾ‌ವಣೆಯಲ್ಲಿ ಹಾಜಿಪುರದಿಂದ ಗೆಲುವು ಸಾಧಿಸಿದ್ದರು. 2020 ರ ಅಕ್ಟೋಬರ್‌ನಲ್ಲಿ ಮರಣ ಹೊಂದಿದ ಪಾಸ್ವಾನ್, ಹಾಜಿಪುರದಿಂದ 8 ಬಾರಿ ಸಂಸದರಾಗಿದ್ದರು. ಬಿಹಾರದ ಮತದಾರರಲ್ಲಿ ಪಾಸ್ವಾನ್‌ಗಳು ಸುಮಾರು ಶೇ.6 ರಷ್ಟಿದ್ದಾರೆ.

ಕಠಿಣ ಮಾರ್ಗ: ಆದರೆ, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯು ಮತ್ತು ಚಿರಾಗ್ ಅವರ ಎಲ್‌ಜೆಪಿ ನಡುವೆ ಸೌಹಾರ್ದ ಸಂಬಂಧ ಇಲ್ಲದ ಕಾರಣ ಇಬ್ಬರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವುದು ಬಿಜೆಪಿಗೆ ಕಠಿಣವಾಗಲಿದೆ. 2020 ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಯು 115 ಸ್ಥಾನಗಳಲ್ಲಿ ಸ್ಪರ್ಧಿಸಿ, 43 ರಲ್ಲಿ ಮಾತ್ರ ಗೆದ್ದುಕೊಂಡಿದೆ. ಎಲ್‌ಜೆಪಿ ವಿಭಜನೆಯಿಂದ ಬಿಜೆಪಿಗೆ ಲಾಭವಾಗಿದೆ; ಬಿಜೆಪಿ ಸುಮಾರು ಎರಡು ಪಟ್ಟು ಹೆಚ್ಚು ಸ್ಥಾನ ಗಳಿಸಿತು.

ಬಿಜೆಪಿ ಪಾರಸ್ ಅವರ ರಾಜೀನಾಮೆಗೆ ಇನ್ನೂ ಪ್ರತಿಕ್ರಿಯಿಸಿಲ್ಲ. ಬಿಹಾರದಲ್ಲಿ ಏಪ್ರಿಲ್ 19 ರಿಂದ ಏಳು ಹಂತಗಳಲ್ಲಿ ಮತದಾನ ನಡೆ ಯಲಿದೆ. 40 ಲೋಕಸಭೆ ಸ್ಥಾನಗಳಲ್ಲಿ ಬಿಜೆಪಿ 17 ರಲ್ಲಿ ಸ್ಪರ್ಧಿಸುತ್ತಿದೆ. ಜೆಡಿಯು 16, ಎಲ್‌ಜೆಪಿ 5, ಜಿತನ್ ರಾಮ್ ಮಾಂಝಿ ಅವರ ಹಿಂದೂಸ್ತಾನಿ ಅವಾಮ್ ಮೋರ್ಚಾ ಮತ್ತು ಉಪೇಂದ್ರ ಕುಶ್ವಾಹಾ ಅವರ ರಾಷ್ಟ್ರೀಯ ಲೋಕ ಮೋರ್ಚಾಗೆ ತಲಾ ಒಂದು ಸ್ಥಾನ ಹಂಚಿಕೆ ಮಾಡಲಾಗಿದೆ.

Read More
Next Story