Delhi Election : ಪರ್ವೇಶ್ ವರ್ಮಾ, ಸ್ಮೃತಿ ಇರಾನಿ; ಯಾರಾಗಲಿದ್ದಾರೆ ದೆಹಲಿ ಸಿಎಂ?
x
ಸಿಎಂ ಸ್ಥಾನದ ಪೈಪೋಟಿಯಲ್ಲಿರುವ ಪರ್ವೇಶ್​ ವರ್ಮಾ.

Delhi Election : ಪರ್ವೇಶ್ ವರ್ಮಾ, ಸ್ಮೃತಿ ಇರಾನಿ; ಯಾರಾಗಲಿದ್ದಾರೆ ದೆಹಲಿ ಸಿಎಂ?

ರಾಜಕೀಯ ವಿಶ್ಲೇಷಕರ ಪ್ರಕಾರ ದೆಹಲಿಯ ಮುಂದಿನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವಲ್ಲಿ ಬಿಜೆಪಿಯ ಕೇಂದ್ರ ನಾಯಕತ್ವ ಸಮಯೋಚಿತ ನಿರ್ಧಾರ ಕೈಗೊಳ್ಳಲಿದೆ. ರಾಜ್ಯ ಮಟ್ಟದ ನಾಯಕತ್ವವನ್ನು ಬೆಳೆಸಲಿದೆ.


ಭಾರತೀಯ ಜನತಾ ಪಾರ್ಟಿ (BJP) ತನ್ನ ಚುನಾವಣಾ ಜೈತ್ರಯಾತ್ರೆಯನ್ನು ಮುಂದುವರಿಸಿದ್ದು, ದೆಹಲಿಯಲ್ಲೂ 27 ವರ್ಷಗಳ ನಂತರ ಅಧಿಕಾರಕ್ಕೆ ಮರಳಿದೆ. ರಾಷ್ಟ್ರ ರಾಜಧಾನಿಯಲ್ಲಿ ಐತಿಹಾಸಿಕ ಗೆಲುವು ದಾಖಲಿಸಿರುವ ಬೆನ್ನಲ್ಲೇ ಬಿಜೆಪಿ ಆಯ್ಕೆ ಮಾಡಬಲ್ಲ ಮುಂದಿನ ಸಿಎಂ ಯಾರು ಎಂಬ ಪ್ರಶ್ನೆ ಎದುರಾಗಿದೆ.

ಪರ್ವೇಶ್ ವರ್ಮಾ ಮುಂಚೂಣಿಯಲ್ಲಿ

ಮುಖ್ಯಮಂತ್ರಿ ಹುದ್ದೆಗೆ ವಿವಿಧ ಹೆಸರುಗಳು ಕೇಳಿ ಬರುತ್ತಿರುವ ನಡುವೆಯೇ ಆಮ್ ಆದ್ಮಿ ಪಾರ್ಟಿಯ (AAP) ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರನ್ನು ಸೋಲಿಸಿ 'ದೈತ್ಯ ಸಂಹಾರಿ' ಎನಿಸಿಕೊಂಡಿರುವ ಪರ್ವೇಶ್ ವರ್ಮಾ ಸರ್ಕಾರವನ್ನು ಮುನ್ನಡೆಸಬಲ್ಲ ಸಂಭಾವ್ಯರ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಆದರೆ, ಅಂತಿಮ ನಿರ್ಧಾರ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯ ನಂತರ ಪ್ರಕಟಗೊಳ್ಳಲಿದೆ.

ಪರ್ವೇಶ್ ವರ್ಮಾ -ಅಮಿತ್ ಶಾ ಭೇಟಿ

ಕೇಜ್ರಿವಾಲ್ ವಿರುದ್ಧ ಗೆಲುವು ಸಾಧಿಸಿದ ತಕ್ಷಣ ಪರ್ವೇಶ್ ವರ್ಮಾ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದಾರೆ. 2024ರ ಲೋಕಸಭಾ ಚುನಾವಣೆಯಲ್ಲಿ ವರ್ಮಾ ಅವರಿಗೆ ಟಿಕೆಟ್ ಕೊಡದ ಹೈಕಮಾಂಡ್ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಕೇಜ್ರಿವಾಲ್ ವಿರುದ್ಧ ಸ್ಪರ್ಧಿಸಲು ಟಿಕೆಟ್​ ಕೊಟ್ಟಿದ್ದರು.

"ಬಿಜೆಪಿಯೊಳಗೆ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಸ್ಪಷ್ಟತೆಯಿದೆ. ಸಿಎಂ ವಿಚಾರದಲ್ಲಿ ಅಂತಿಮ ತೀರ್ಮಾನವನ್ನು ಪಕ್ಷದ ಕೇಂದ್ರ ನಾಯಕರೇ ತೆಗೆದುಕೊಳ್ಳುತ್ತಾರೆ. ಮುಂದಿನ ದಿನಗಳಲ್ಲಿ ಶಾಸಕರೊಂದಿಗೆ ಸಭೆ ನಡೆಸಿ ಸಿಎಂ ಆಯ್ಕೆ ಮಾಡಲಾಗುವುದು," ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಮತ್ತು ದೆಹಲಿ ಮಾಜಿ ಶಾಸಕ ಆರ್.ಪಿ. ಸಿಂಗ್ ತಿಳಿಸಿದ್ದಾರೆ.

ಬಿಜೆಪಿಯ ಚುನಾವಣಾ ತಂತ್ರ

ಲೋಕಸಭಾ ಸದಸ್ಯರನ್ನು ವಿಧಾನಸಭಾ ಚುನಾವಣೆಗೆ ಕಣಕ್ಕಿಳಿಸುವ ಬಿಜೆಪಿ ತಂತ್ರ ಹೊಸದಲ್ಲ. ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಈ ತಂತ್ರವನ್ನು ಅನುಸರಿಸಿದ್ದ ಬಿಜೆಪಿ, ದೆಹಲಿಯಲ್ಲಿಯೂ ಪುನರಾವರ್ತನೆ ಮಾಡಿತ್ತು. ಲೋಕಸಭಾ ಟಿಕೆಟ್ ಪಡೆಯದ ಪರ್ವೇಶ್ ವರ್ಮಾ ವಿಧಾನಸಭಾ ಚುನಾವಣಾ ಅಖಾಡಕ್ಕೆ ಇಳಿದು ಗೆದ್ದಿದ್ದಾರೆ.

ವೀರೇಂದ್ರ ಸಚ್‌ದೇವ ಹೆಸರು

ಬಿಜೆಪಿಯ ಮುಖ್ಯಮಂತ್ರಿಯ ಹುದ್ದೆಗೆ ವೀರೇಂದ್ರ ಸಚ್‌ದೇವ ಅವರೂ ಪ್ರಮುಖ ಸ್ಪರ್ಧಿಯಾಗಿದ್ದಾರೆ. ಅವರು ಚುನಾವಣಾ ಕಣಕ್ಕೆ ಇಳಿಯಬಾರದು ಎಂಬ ನಿರ್ಧಾರವನ್ನು ಪಕ್ಷ ಕೊನೆಯ ಕ್ಷಣದಲ್ಲಿ ತೆಗೆದುಕೊಂಡಿತ್ತು.

ಸ್ಮೃತಿ ಇರಾನಿ ಅಥವಾ ಮೀನಾಕ್ಷಿ ಲೇಖಿ?

ಪ್ರಮುಖ ಮಹಿಳೆಯರೊಬ್ಬರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬಹುದೆಂಬ ಮಾತುಗಳು ಬಿಜೆಪಿಯೊಳಗೆ ಅನುರಣಿಸುತ್ತಿದ್ದು, ಸ್ಮೃತಿ ಇರಾನಿ ಮತ್ತು ಮೀನಾಕ್ಷಿ ಲೇಖಿ ಹೆಸರುಗಳು ಮುನ್ನೆಲೆಗೆ ಬಂದಿವೆ. ಇಬ್ಬರೂ ಮಾಜಿ ಕೇಂದ್ರ ಸಚಿವರು ಹಾಗೂ ಕಳೆದ ಕೆಲವು ತಿಂಗಳಿನಿಂದ ದೆಹಲಿಯಲ್ಲಿ ಪಕ್ಷ ಸಂಘಟನೆಗೆ ಶ್ರಮಿಸುತ್ತಿದ್ದಾರೆ.

"ಸ್ಮೃತಿ ಇರಾನಿ ಮುಖ್ಯಮಂತ್ರಿಯಾಗಿ ಆಯ್ಕೆಗೊಂಡರೂ ಅಚ್ಚರಿ ಏನಿಲ್ಲ. ಅವರು ದೆಹಲಿಯಲ್ಲೇ ಹುಟ್ಟಿ, ಬೆಳೆದು, ವಿದ್ಯಾಭ್ಯಾಸ ಮಾಡಿದವರು. ಮಹಿಳೆ ಹಾಗೂ ಅಲ್ಪಸಂಖ್ಯಾತ ಸಮುದಾಯದ ಸದಸ್ಯರಾಗಿರುವ ಕಾರಣ ಅವರನ್ನು ಆಯ್ಕೆ ಮಾಡುವ ಸಾಧ್ಯತೆಯೂ ಅಧಿಕ. ಇದೇ ರೀತಿ, ಮೀನಾಕ್ಷಿ ಲೇಖಿಯೂ ಕೇಂದ್ರ ಸರ್ಕಾರದ ನಾಯಕರೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ ಮತ್ತು ಈ ದೆಹಲಿ ಚುನಾವಣಾ ಪ್ರಚಾರದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ," ಎಂದು ಬಿಜೆಪಿಯ ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ.

ಬಿಜೆಪಿಯು ಈ ಹಿಂದೆ 1998ರಲ್ಲಿ ಸುಷ್ಮಾ ಸ್ವರಾಜ್ ಅವರನ್ನು ದೆಹಲಿ ಮುಖ್ಯಮಂತ್ರಿಯನ್ನಾಗಿ ಮಾಡಿತ್ತು. ಹೀಗಾಗಿ ಮಹಿಳಾ ಸಿಎಂ ವಾದಕ್ಕೆ ಹೆಚ್ಚಿನ ಬಲವಿದೆ.

ಅಚ್ಚರಿ ತರುವರೆ ಮೋದಿ?

ಮುಖ್ಯಮಂತ್ರಿ ಹುದ್ದೆ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲದ ಕಾರಣ, ಪ್ರಧಾನಿ ನರೇಂದ್ರ ಮೋದಿ ಹೊಸ ಮುಖವನ್ನು ಆಯ್ಕೆ ಮಾಡುವ ಸಾಧ್ಯತೆಯ ಬಗ್ಗೆಯೂ ಚರ್ಚೆ ನಡೆಯುತ್ತಿದೆ.

ದುಷ್ಯಂತ್ ಗೌತಮ್ ಈ ನಿಟ್ಟಿನಲ್ಲಿ ಅಚ್ಚರಿಯ ಆಯ್ಕೆಯಾಗಬಹುದು ಎನ್ನಲಾಗುತ್ತಿದೆ. ಯಾಕೆಂದರೆ ಪರಿಶಿಷ್ಟ ಜಾತಿಯ ನಾಯಕರಾಗಿರುವ ಅವರು ಕರೋಲ್ ಬಾಗ್ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದಾರೆ. ಆದರೂ, ದೆಹಲಿಯಲ್ಲಿ ಬಹುಕಾಲದ ಬಳಿಕ ಪರಿಶಿಷ್ಟ ಜಾತಿಗೆ ಸೇರಿದವರಿಗೆ ಉನ್ನತ ಹುದ್ದೆ ನೀಡುವ ಒಂದು ಅವಕಾಶ ಬಿಜೆಪಿಯ ಕೇಂದ್ರ ನಾಯಕತ್ವಕ್ಕೆ ಲಭಿಸಿದೆ.

''ಮುಂದಿನ ಮುಖ್ಯಮಂತ್ರಿ ಆಯ್ಕೆ ಮಾಡುವಲ್ಲಿ ಬಿಜೆಪಿ ಕಠಿಣ ತೀರ್ಮಾನ ತೆಗೆದುಕೊಳ್ಳುವುದು ನಿರೀಕ್ಷಿತ. ಯಾಕೆಂದರೆ ಪಕ್ಷವು ದೀರ್ಘಕಾಲ ದೆಹಲಿಯಲ್ಲಿ ಆಡಳಿತ ನಡೆಸದ ಕಾರಣ ರಾಜ್ಯ ಮಟ್ಟದ ಪ್ರಬಲ ನಾಯಕತ್ವ ಸೃಷ್ಟಿಯ ಗುರಿಯೂ ಇದೆ ," ಎಂದು ರಾಜಕೀಯ ವಿಶ್ಲೇಷಕ ಅಮಿತ್ ಧೋಲಕಿಯಾ ಅಭಿಪ್ರಾಯಪಡುತ್ತಾರೆ.

''ದೆಹಲಿ ಸರ್ಕಾರವು ಅರವಿಂದ್ ಕೇಜ್ರಿವಾಲ್ ಮತ್ತು ಶೀಲಾ ದೀಕ್ಷಿತ್ ಅವರಂಥ ಪ್ರಭಾವಿ ಮುಖ್ಯಮಂತ್ರಿಗಳನ್ನು ಕಂಡಿದೆ. ಬಿಜೆಪಿ ಆಡಳಿತದಲ್ಲಿದ್ದ ವೇಳೆ ಮದನ್ ಲಾಲ್ ಖುರಾನಾ, ಸಾಹಿಬ್ ಸಿಂಗ್ ವರ್ಮಾ ಮತ್ತು ಸುಷ್ಮಾ ಸ್ವರಾಜ್ ಅವರಿಗೂ ಜನ ಮನ್ನಣೆ ಸಿಕ್ಕಿತ್ತು," ಎಂದು ಅಮಿತ್​ ಅವರು ಹೇಳುತ್ತಾರೆ.

Read More
Next Story