ಸಂಸತ್ ಅಧಿವೇಶನ ಜೂನ್ 24 ರಿಂದ: ಕಿರಣ್ ರಿಜಿಜು
ನವದೆಹಲಿ, ಜೂನ್ 12- 18ನೇ ಲೋಕಸಭೆಯ ಮೊದಲ ಅಧಿವೇಶನ ಜೂನ್ 24 ರಂದು ಆರಂಭವಾಗಿ, ಜುಲೈ 3ರವರೆಗೆ ನಡೆಯಲಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಬುಧವಾರ ತಿಳಿಸಿದ್ದಾರೆ.
ಅಧಿವೇಶನದ ಮೊದಲ ಮೂರು ದಿನಗಳಲ್ಲಿ ನೂತನ ಸಂಸದರು ಪ್ರಮಾಣವಚನ ಸ್ವೀಕರಿಸುತ್ತಾರೆ. ಆನಂತರ ಸ್ಪೀಕರ್ ಆಯ್ಕೆ ನಡೆಯುತ್ತದೆ. ಜುಲೈ 3ರಂದು ಅಧಿವೇಶನ ಮುಕ್ತಾಯವಾಗಲಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜೂನ್ 27 ರಂದು ಲೋಕಸಭೆ ಮತ್ತು ರಾಜ್ಯಸಭೆಯ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಎಕ್ಸ್‌ನಲ್ಲಿ ಬರೆದ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ರಾಜ್ಯಸಭೆಯ 264ನೇ ಅಧಿವೇಶನ ಕೂಡ ಜೂನ್ 27 ರಂದು ಆರಂಭವಾಗಿ, ಜುಲೈ 3 ರಂದು ಮುಕ್ತಾಯವಾಗಲಿದೆ. ಜೂನ್ 27 ರಂದು ರಾಷ್ಟ್ರಪತಿ ಅವರ ಭಾಷಣದ ನಂತರ ಪ್ರಧಾನಿ ಮೋದಿ ಅವರು ಸಂಸತ್ತಿಗೆ ತಮ್ಮ ಮಂತ್ರಿಮಂಡಲ ವನ್ನು ಪರಿಚಯಿಸುವ ನಿರೀಕ್ಷೆಯಿದೆ.
ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯಲ್ಲಿ ಪ್ರತಿಪಕ್ಷಗಳು ಎನ್‌ಡಿಎ ಸರ್ಕಾರವನ್ನು ಹಲವು ವಿಷಯ ಕುರಿತು ಪ್ರಶ್ನಿಸುವ ಸಾಧ್ಯತೆಯಿದೆ. ಆನಂತರ, ಪ್ರಧಾನಿ ಅವರು ಉತ್ತರ ನೀಡಲಿದ್ದಾರೆ.