
ಸಂಸತ್‌ನಲ್ಲಿ SIR ಗದ್ದಲ; ಕೇಂದ್ರದ ವಿರುದ್ಧ ಮುಗಿಬಿದ್ದ ಪ್ರತಿಪಕ್ಷ ನಾಯಕರು
ಕಲಾಪ ಆರಂಭವಾಗುತ್ತಿದ್ದಂತೆ ಎಸ್‌ಐಆರ್ ಕುರಿತ ಚರ್ಚೆ ಶುರು ಮಾಡಿದ ಕಾಂಗ್ರೆಸ್ ಚುನಾವಣಾ ಆಯೋಗದ ಈ ನಡೆಯ ಸಾಂವಿಧಾನಿಕ ಆಧಾರವನ್ನು ಕಾಂಗ್ರೆಸ್ ಪ್ರಶ್ನಿಸಿತು.
ಚುನಾವಣಾ ಆಯೋಗ ದೇಶಾದ್ಯಂತ ಹಂತ ಹಂತವಾಗಿ ನಡೆಸಲು ನಿರ್ಧರಿಸಿದ ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆ(SIR) ವಿಚಾರ ಇಂದು ಸಂಸತ್‌ನಲ್ಲೂ ಭಾರೀ ಸದ್ದು ಮಾಡಿದೆ. ಲೋಕಸಭೆಯಲ್ಲಿ ಇದೇ ವಿಚಾರವನ್ನಿಟ್ಟುಕೊಂಡು ಪ್ರತಿಪಕ್ಷಗಳು ಸರ್ಕಾರ ಮತ್ತು ಚುನಾವಣಾ ಆಯೋಗ ವಿರುದ್ಧ ಮುಗಿ ಬಿದ್ದವು. ಕಲಾಪ ಆರಂಭವಾಗುತ್ತಿದ್ದಂತೆ ಎಸ್‌ಐಆರ್ ಕುರಿತ ಚರ್ಚೆ ಶುರು ಮಾಡಿದ ಕಾಂಗ್ರೆಸ್ ಚುನಾವಣಾ ಆಯೋಗದ ಈ ನಡೆಯ ಸಾಂವಿಧಾನಿಕ ಆಧಾರವನ್ನು ಕಾಂಗ್ರೆಸ್ ಪ್ರಶ್ನಿಸಿತು. ಅಲ್ಲದೇ SIR ಅಭಿಯಾನ ಕಾನೂನು ಬಾಹಿರ ಎಂದು ಕಾಂಗ್ರೆಸ್ ನಾಯಕರು ಗದ್ದಲ ಸೃಷ್ಟಿಸಿದರು.
ಚುನಾವಣಾ ಆಯೋಗ ಕಾರಣ ನೀಡಲಿ: ಮನೀಶ್ ತಿವಾರಿ
ಇಂದು ಎಸ್‌ಐಆರ್ ಬಗ್ಗೆ ಸಂಸತ್‌ನಲ್ಲಿ ಮಾತನಾಡಿದ ಕಾಂಗ್ರೆಸ್ ಸಂಸದ ಮನೀಶ್ ತಿವಾರಿ, “ನಿರ್ದಿಷ್ಟ ಕ್ಷೇತ್ರದಲ್ಲಿ SIR ನಡೆಸುವ ಸಂದರ್ಭದಲ್ಲಿಯೂ ಸಹ, ECಯು ಈ ಪ್ರಕ್ರಿಯೆಗೆ ಕಾರಣವನ್ನು ಉಲ್ಲೇಖಿಸಬೇಕಾಗುತ್ತದೆ ಎಂದು ಹೇಳಿದರು. ಸಂವಿಧಾನದಲ್ಲಿ SIRಗೆ ಯಾವುದೇ ಅವಕಾಶವಿಲ್ಲ. ಹೀಗಾಗಿ ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆಗೆ ಮುಂದಾಗಿರುವ ಚುನಾವಣಾ ಆಯೋಗ ಇದಕ್ಕೆ ಸೂಕ್ತ ಕಾರಣ ನೀಡಲಿ” ಎಂದು ಆಗ್ರಹಿಸಿದ್ದಾರೆ.
“SIR ನಡೆಸಲು ಕ್ಷೇತ್ರವಾರು ಲಿಖಿತ ಕಾರಣಗಳು ಎಲ್ಲಿವೆ ಎಂದು ನಾನು ಸರ್ಕಾರವನ್ನು ಕೇಳಲು ಬಯಸುತ್ತೇನೆ. ಬಿಹಾರ, ತಮಿಳುನಾಡು, ಕೇರಳ, ಬಂಗಾಳದಾದ್ಯಂತ SIR ನಡೆಸಲು ಕ್ಷೇತ್ರವಾರು ಕಾರಣಗಳನ್ನು ಬಹಿರಂಗಪಡಿಸಲು ECಯನ್ನು ಸೂಚನೆ ನೀಡಬೇಕು. ನ್ಯಾಯಾಲಯವು ಸಹ ಕಾನೂನಿನ ಈ ಅಂಶವನ್ನು ಪರಿಶೀಲಿಸದಿರುವುದು ದುರದೃಷ್ಟಕರ” ಎಂದು ತಿವಾರಿ ಹೇಳಿದರು.
ಮತಪತ್ರಗಳ ಮೂಲಕ ಚುನಾವಣೆ ನಡೆಸಿ
“ಚುನಾವಣಾ ಪ್ರಕ್ರಿಯೆಯಲ್ಲಿ ನಂಬಿಕೆಯನ್ನು ಪುನಃಸ್ಥಾಪಿಸಲು ಕೇವಲ ಎರಡು ಮಾರ್ಗಗಳಿವೆ ಎಂದು ಮನೀಷ್ ತಿವಾರಿ ಹೇಳಿದರು. 100 ಪ್ರತಿಶತ VVPAT ಸ್ಲಿಪ್‌ಗಳನ್ನು ಎಣಿಸಬೇಕು ಅಥವಾ ದೇಶವು ಸಂಪೂರ್ಣವಾಗಿ ಮತಪತ್ರಗಳಿಗೆ ಮರಳಬೇಕು. ಚುನಾವಣಾ ಪ್ರಕ್ರಿಯೆಯ ವಿಶ್ವಾಸಾರ್ಹತೆಯನ್ನು ಪರೀಕ್ಷಿಸಲು ನನ್ನ ಬಳಿ ಸರಳ ಪರಿಹಾರವಿದೆ. ಐದು ರಾಜ್ಯಗಳಲ್ಲಿ ಚುನಾವಣೆಗಳು ನಡೆಯಲಿವೆ. ಅಲ್ಲಿ ಕಾಗದದ ಮತಪತ್ರಗಳ ಮೂಲಕ ಮತದಾನ ನಡೆಸಿ ಮತ್ತು ಫಲಿತಾಂಶ ಏನೆಂದು ನೋಡಿ. ಅದು ಏನೇ ಇರಲಿ ನಾವೆಲ್ಲರೂ ಸ್ವೀಕರಿಸುತ್ತೇವೆ" ಎಂದು ಅವರು ಸವಾಲು ಹಾಕಿದರು.
ಕಾಂಗ್ರೆಸ್‌ಗೆ ಅಖಿಲೇಶ್ ಬೆಂಬಲ
ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, “ಚುನಾವಣಾ ಆಯುಕ್ತರನ್ನು ನೇಮಿಸುವ ವಿಧಾನವನ್ನು ನಾವು ಬದಲಾಯಿಸಬೇಕಾಗಿದೆ ಬ್ಯಾಲೆಟ್ ಪೇಪರ್‌ಗಳ ಮೂಲಕ ಚುನಾವಣೆಗಳನ್ನು ನಡೆಸಬೇಕು ಎಂಬ ಕಾಂಗ್ರೆಸ್ ಜೊತೆ ನಾನು ಸಹ ಒಪ್ಪುತ್ತೇನೆ. ತಂತ್ರಜ್ಞಾನದಲ್ಲಿ ನಮಗಿಂತ ಬಹಳ ಮುಂದಿರುವ ಅಭಿವೃದ್ಧಿ ಹೊಂದಿದ ದೇಶಗಳು EVM ಅನ್ನು ಸ್ವೀಕರಿಸಲು ಸಿದ್ಧರಿಲ್ಲದಿರುವಾಗ ನಾವು EVM ಗಳಲ್ಲಿ ಏಕೆ ಸಿಲುಕಿಕೊಂಡಿದ್ದೇವೆ. ನಾವು ಬ್ಯಾಲೆಟ್‌ಗಳಿಗೆ ಏಕೆ ಹಿಂತಿರುಗುತ್ತಿಲ್ಲ?" ಯಾದವ್ ಪ್ರಶ್ನಿಸಿದರು.
'SIR' ಎಂದರೇನು ಮತ್ತು ಏಕೆ ಈ ಕ್ರಮ?
'ವಿಶೇಷ ತೀವ್ರ ಪರಿಷ್ಕರಣೆ' (SIR) ಎಂಬುದು ಸಾಮಾನ್ಯ ಮತದಾರರ ಪಟ್ಟಿ ಪರಿಷ್ಕರಣೆಗಿಂತ ಭಿನ್ನವಾದ ಮತ್ತು ಹೆಚ್ಚು ಆಳವಾದ ಪ್ರಕ್ರಿಯೆಯಾಗಿದೆ. ಇದರಲ್ಲಿ, ಪ್ರತಿ ರಾಜ್ಯದಲ್ಲಿ ಕೊನೆಯ ಬಾರಿಗೆ ನಡೆದ SIR ಮತದಾರರ ಪಟ್ಟಿಯನ್ನು ಆಧಾರವಾಗಿಟ್ಟುಕೊಂಡು, ಪ್ರಸ್ತುತ ಮತದಾರರ ಪಟ್ಟಿಯಲ್ಲಿರುವ ಪ್ರತಿಯೊಂದು ಹೆಸರನ್ನು ಕ್ಷೇತ್ರ ಮಟ್ಟದಲ್ಲಿ ಪರಿಶೀಲಿಸಲಾಗುತ್ತದೆ. ಹೆಚ್ಚಿನ ರಾಜ್ಯಗಳಲ್ಲಿ 2002 ಮತ್ತು 2004ರ ನಡುವೆ ಕೊನೆಯ ಬಾರಿಗೆ ಈ ರೀತಿಯ ತೀವ ಪರಿಷ್ಕರಣೆ ನಡೆದಿತ್ತು.

