18 ನೇ  ಸಂಸತ್ ಅಧಿವೇಶನ ಇಂದು ಆರಂಭ| ನೂತನ ಸಂಸದರಿಗೆ ಪ್ರಮಾಣ ವಚನ ಬೋಧನೆ
x

18 ನೇ ಸಂಸತ್ ಅಧಿವೇಶನ ಇಂದು ಆರಂಭ| ನೂತನ ಸಂಸದರಿಗೆ ಪ್ರಮಾಣ ವಚನ ಬೋಧನೆ

ಲೋಕಸಭೆ ಸ್ಪೀಕರ್ ಹುದ್ದೆಗೆ ಬುಧವಾರ ಚುನಾವಣೆ ನಡೆಯಲಿದ್ದು,ಆನಂತರ ಪ್ರಧಾನಿ ಅವರು ಸಚಿವ ಸಂಪುಟವನ್ನು ಸದನಕ್ಕೆ ಪರಿಚಯಿಸುತ್ತಾರೆ.


18ನೇ ಲೋಕಸಭೆಯ ಮೊದಲ ಅಧಿವೇಶನ ಇಂದು(ಸೋಮವಾರ, ಜೂನ್ 24) ಆರಂಭವಾಗಲಿದ್ದು, ನೂತನ ಸದಸ್ಯರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಜೂನ್ 26 ರಂದು ಲೋಕಸಭೆಯ ಸ್ಪೀಕರ್ ಆಯ್ಕೆ ಮತ್ತು ಜೂನ್ 27 ರಂದು ಉಭಯ ಸದನಗಳ ಜಂಟಿ ಅಧಿವೇಶನವನ್ನು ಉದ್ದೇಶಿಸಿ, ರಾಷ್ಟ್ರಪತಿ ದ್ರೌಪದಿ ದ್ರೌಪತಿ ಮುರ್ಮು ಅವರು ಭಾಷಣ ಮಾಡಲಿದ್ದಾರೆ.

ಬಿಜೆಪಿ ಸಂಸದ ಮತ್ತು ಏಳು ಅವಧಿಯ ಸದಸ್ಯ ಭರ್ತೃಹರಿ ಮಹತಾಬ್ ಅವರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಕ ಮಾಡುವ ಪ್ರಕ್ರಿಯೆ ಯಿಂದ ಅಧಿವೇಶನ ಸುಗಮವಾಗಿ ನಡೆಯುವ ಸಾಧ್ಯತೆಯಿಲ್ಲ. ಈ ಕ್ರಮ ಪ್ರತಿಪಕ್ಷಗಳಿಂದ ತೀವ್ರ ಟೀಕೆಗೆ ಗುರಿಯಾಗಿದ್ದು, ಕಾಂಗ್ರೆಸ್ ಹಿರಿಯ ಸಂಸದ ಕೆ.ಸುರೇಶ್ ಅವರನ್ನು ಸರ್ಕಾರವು ಕಡೆಗಣಿಸಿದೆ ಎಂದು ಆರೋಪಿಸಿದೆ.

ಸೋಮವಾರ ಬೆಳಗ್ಗೆ ರಾಷ್ಟ್ರಪತಿ ಭವನದಲ್ಲಿ ಲೋಕಸಭೆಯ ಹಂಗಾಮಿ ಸ್ಪೀಕರ್ ಆಗಿ ಮಹತಾಬ್ ಅವರಿಗೆ ರಾಷ್ಟ್ರಪತಿ ಅವರು ಪ್ರಮಾಣ ವಚನ ಬೋಧಿಸಿದರು. ಮಹತಾಬ್ ಆನಂತರ ಸಂಸತ್ ಭವನಕ್ಕೆ ಆಗಮಿಸಿ, ಲೋಕಸಭೆ ಅಧಿವೇಶನವನ್ನು ಕರೆಯುತ್ತಾರೆ.

ಸದಸ್ಯರು ಮೌನ ಆಚರಣೆಯೊಂದಿಗೆ ಕಲಾಪ ಆರಂಭವಾಗಲಿದೆ. ಆನಂತರ ಲೋಕಸಭೆಯ ಪ್ರಧಾನ ಕಾರ್ಯದರ್ಶಿ ಉತ್ಪಲ್ ಕುಮಾರ್ ಸಿಂಗ್ ಅವರು ಸಂಸತ್ತಿಗೆ ಆಯ್ಕೆಯಾದ ಸದಸ್ಯರ ಪಟ್ಟಿಯನ್ನು ಸದನದ ಮುಂದೆ ಮೇಲೆ ಮಂಡಿಸುತ್ತಾರೆ.

ಮಹತಾಬ್ ಅವರು ಲೋಕಸಭೆ ನಾಯಕರಾದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸದನದ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಲು ಆಹ್ವಾನಿಸುತ್ತಾರೆ.

ಹಂಗಾಮಿ ಸ್ಪೀಕರ್ ಅವರು ಜೂನ್ 26 ರಂದು ಸ್ಪೀಕರ್ ಚುನಾವಣೆಯವರೆಗೆ ಕಲಾಪ ಕೈಗೊಳ್ಳಲು ನೆರವಾಗಲು ರಾಷ್ಟ್ರಪತಿ ಅವರು ನೇಮಿಸಿದ ಅಧ್ಯಕ್ಷರ ಸಮಿತಿಗೆ ಪ್ರಮಾಣವಚನ ಬೋಧಿಸುತ್ತಾರೆ.

ಜೂನ್ 26ಕ್ಕೆ ಸ್ಪೀಕರ್ ಚುನಾವಣೆ: ನೂತನ ಸಂಸದರಿಗೆ ಪ್ರಮಾಣವಚನ/ದೃಢೀಕರಣವನ್ನು ಬೋಧಿಸಲು ಮಹತಾಬ್‌ ಅವರಿಗೆ ಸಹಾಯ ಮಾಡಲು ಕೋಡಿಕುನ್ನಿಲ್ ಸುರೇಶ್ (ಕಾಂಗ್ರೆಸ್), ಟಿ.ಆರ್. ಬಾಲು (ಡಿಎಂಕೆ), ರಾಧಾ ಮೋಹನ್ ಸಿಂಗ್ ಮತ್ತು ಫಗ್ಗನ್ ಸಿಂಗ್ ಕುಲಸ್ತೆ (ಇಬ್ಬರೂ ಬಿಜೆಪಿ) ಮತ್ತು ಸುದೀಪ್ ಬಂಡೋಪಾಧ್ಯಾಯ (ಟಿಎಂಸಿ) ಅವರನ್ನು ರಾಷ್ಟ್ರಪತಿ ನೇಮಿಸಿದ್ದಾರೆ.

ಸಭಾಪತಿಗಳ ಸಮಿತಿ ಪ್ರಮಾಣವಚನ ಸ್ವೀಕರಿಸಿದ ನಂತರ, ಹಂಗಾಮಿ ಸ್ಪೀಕರ್ ಅವರು ಸಚಿವ ಸಂಪುಟದ ಸದಸ್ಯರಿಗೆ ಪ್ರಮಾಣವಚನ/ದೃಢೀಕರಣವನ್ನು ಬೋಧಿಸುತ್ತಾರೆ. ಸಂಸದರು ವರ್ಣಮಾಲೆ ಕ್ರಮದಲ್ಲಿ ಮುಂದಿನ ಎರಡು ದಿನಗಳಲ್ಲಿ ಪ್ರಮಾಣವಚನ ಸ್ವೀಕರಿಸುತ್ತಾರೆ.

ಲೋಕಸಭೆಯ ಸ್ಪೀಕರ್ ಆಯ್ಕೆಗೆ ಬುಧವಾರ (ಜೂನ್ 26) ಚುನಾವಣೆ ನಡೆಯಲಿದೆ ಮತ್ತು ಆನಂತರ ಪ್ರಧಾನಿ ತಮ್ಮ ಸಚಿವ ಸಂಪುಟ ಸದಸ್ಯರನ್ನು ಸದನಕ್ಕೆ ಪರಿಚಯಿಸಲಿದ್ದಾರೆ.

ಜೂನ್ 27 ರಂದು ಸಂಸತ್ತಿನ ಉಭಯ ಸದನಗಳ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿ ಅವರು ಮಾತನಾಡಲಿದ್ದಾರೆ. ರಾಷ್ಟ್ರಪತಿಗಳ ಭಾಷಣಕ್ಕೆ ವಂದನೆ ನಿರ್ಣಯದ ಮೇಲಿನ ಚರ್ಚೆ ಜೂನ್ 28 ರಂದು ಪ್ರಾರಂಭವಾಗುತ್ತದೆ. ಜುಲೈ 2 ಅಥವಾ 3 ರಂದು ಪ್ರಧಾನ ಮಂತ್ರಿ ಚರ್ಚೆಗೆ ಪ್ರತಿಕ್ರಿಯಿಸುವ ನಿರೀಕ್ಷೆಯಿದೆ.

ಆನಂತರ ಎರಡೂ ಸದನಗಳಿಗೆ ಸ್ವಲ್ಪ ಕಾಲ ವಿರಾಮ ಇರಲಿದೆ. ಜುಲೈ 22 ರಂದು ಬಜೆಟ್ ಮಂಡನೆಗೆ ಮತ್ತೆ ಸೇರುವ ನಿರೀಕ್ಷೆಯಿದೆ.

Read More
Next Story