![Pariksha Pe Charcha: ಪರೀಕ್ಷಾ ಪೆ ಚರ್ಚಾದಲ್ಲಿ ವಿದ್ಯಾರ್ಥಿಗಳಿಗೆ ಮೋದಿ ಕಿವಿಮಾತು Pariksha Pe Charcha: ಪರೀಕ್ಷಾ ಪೆ ಚರ್ಚಾದಲ್ಲಿ ವಿದ್ಯಾರ್ಥಿಗಳಿಗೆ ಮೋದಿ ಕಿವಿಮಾತು](https://karnataka.thefederal.com/h-upload/2025/02/10/511818-parikshape-charcha.webp)
Pariksha Pe Charcha: 'ಪರೀಕ್ಷಾ ಪೆ ಚರ್ಚಾ'ದಲ್ಲಿ ವಿದ್ಯಾರ್ಥಿಗಳಿಗೆ ಮೋದಿ ಕಿವಿಮಾತು
Pariksha Pe Charcha : ಸದ್ಗುರು ಜಗ್ಗಿ ವಾಸುದೇವ್, ದೀಪಿಕಾ ಪಡುಕೋಣೆ, ಮೇರಿ ಕೋಮ್, ವಿಕ್ರಾಂತ್ ಮಾಸ್ಸೆ, ಕ್ರೀಡಾ ಸಾಧಕಿ ಅವನಿ ಲೇಖಾರ ಸಂವಾದ ನಡೆಸಿ ತಮ್ಮ ಜೀವನಾನುಭವನ್ನು ವಿದ್ಯಾರ್ಥಿಗಳ ಜತೆ ಹಂಚಿಕೊಳ್ಳಲಿದ್ದಾರೆ.
ನವದೆಹಲಿ: ಪರೀಕ್ಷೆಗೆ ಸಜ್ಜಾಗುತ್ತಿರುವ ವಿದ್ಯಾರ್ಥಿಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೋಮವಾರ ಸಲಹೆಗಳನ್ನು ನೀಡಿ ಧೈರ್ಯ ತುಂಬಿದ್ದಾರೆ. ದೆಹಲಿಯ ಭಾರತ್ ಮಂಟಪಂನಲ್ಲಿ 8ನೇ ಆವೃತ್ತಿಯ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮ ನಡೆದಿದ್ದು, ಪ್ರಧಾನಿ ಮೋದಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರೊಂದಿಗೆ ಸಂವಾದ ನಡೆಸಿದ್ದಾರೆ.
ಸದ್ಗುರು ಜಗ್ಗಿ ವಾಸುದೇವ್, ದೀಪಿಕಾ ಪಡುಕೋಣೆ, ಮೇರಿ ಕೋಮ್, ವಿಕ್ರಾಂತ್ ಮಾಸ್ಸೆ, ಕ್ರೀಡಾ ಸಾಧಕಿ ಅವನಿ ಲೇಖಾರ ಸಂವಾದ ನಡೆಸಿ ತಮ್ಮ ಜೀವನಾನುಭವನ್ನು ವಿದ್ಯಾರ್ಥಿಗಳ ಜತೆ ಹಂಚಿಕೊಳ್ಳಲಿದ್ದಾರೆ.
ಈ ವರ್ಷದ ಪರೀಕ್ಷಾ ಪೇ ಚರ್ಚಾದಲ್ಲಿ ದೇಶಾದ್ಯಂತ 3.30 ಕೋಟಿ ವಿದ್ಯಾರ್ಥಿಗಳು, 20.71 ಲಕ್ಷ ಶಿಕ್ಷಕರು, 5.51 ಲಕ್ಷ ಪೋಷಕರು ನೋಂದಣಿ ಮಾಡಿಸಿಕೊಂಡಿದ್ದಾರೆ. ಅವರಲ್ಲಿ ಕೆಲವರು ಮಾತ್ರ ಮೋದಿಗೆ ಪ್ರಶ್ನೆಗಳನ್ನು ಕೇಳುವ ಅವಕಾಶ ಪಡೆದುಕೊಂಡಿದ್ದಾರೆ.
ಪ್ರಧಾನಿ ಮೋದಿ ಹೇಳಿದ್ದೇನು?
ಪ್ರಧಾನಿ ಮೋದಿ ಸಮಯ ಪಾಲನೆಯ ಮಹತ್ವವನ್ನು ಒತ್ತಿ ಹೇಳಿದ್ದು, ವಿದ್ಯಾರ್ಥಿಗಳು ತಮ್ಮ ದಿನವನ್ನು ಮುಂಚಿತವಾಗಿ ಯೋಜಿಸಬೇಕು, ತಮ್ಮ ಇಷ್ಟದ ಪಾಠಗಳು ಅಥವಾ ವಿಷಯಗಳ ಮೇಲೆ ಮಾತ್ರ ಗಮನ ಕೇಂದ್ರೀಕರಿಸುವ ಬದಲು, ತಮಗೆ ಕಷ್ಟವೆನಿಸಿರುವ, ಸವಾಲಿನ ವಿಷಯಗಳಿಗೆ ಹೆಚ್ಚಿನ ಸಮಯ ಮೀಸಲಿಡಬೇಕು ಎಂದು ಸಲಹೆ ನೀಡಿದ್ದಾರೆ.
ಶಿಕ್ಷಕರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ವಿದ್ಯಾರ್ಥಿಗಳಿಗೆ ಸಲಹೆ ಕೊಡುವುದರ ಜೊತೆಗೆ ಅವರ ಅನನ್ಯ ಸಾಮರ್ಥ್ಯಗಳನ್ನು ಸಕ್ರಿಯವಾಗಿ ಗುರುತಿಸಬೇಕು ಎಂದು ಹೇಳಿದರು. ವಿದ್ಯಾರ್ಥಿಗಳು ಮೌಲ್ಯಯುತ ಮತ್ತು ಸರಳವಾಗಿ ಅರ್ಥಮಾಡಿಕೊಳ್ಳುವ ವಾತಾವರಣ ಬೆಳೆಸಬೇಕು ಎಂದೂ ಹೇಳಿದರು.
ಶೈಕ್ಷಣಿಕ ವರ್ಷಗಳಲ್ಲಿ ಎದುರಾಗುವ ಪರೀಕ್ಷೆಗಳ ಅಗತ್ಯವನ್ನುಹೇಳಿದ ಪ್ರಧಾನಿ ಮೋದಿ, ಶೈಕ್ಷಣಿಕ ಪರೀಕ್ಷೆಗಳಷ್ಟೇ ನಿಜವಾದ ಕಲಿಕೆ ಎಂದು ತಪ್ಪಾಗಿ ಭಾವಿಸಬಾರದು. ಕೇವಲ ಪರೀಕ್ಷೆಗಳಿಗೆ ತಯಾರಿ ನಡೆಸುವ ಬದಲು ಜ್ಞಾನ ಗಳಿಸುವತ್ತ ಗಮನ ಹರಿಸಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳ ಪೋಷಕರಿಗೂ ಸಲಹೆ ನೀಡಿದ ಮೋದಿ, ಮಕ್ಕಳಿಗೆ ತಮ್ಮ ಆಸಕ್ತಿಗಳನ್ನು ಅನ್ವೇಷಿಸಲು ಸ್ವಾತಂತ್ರ್ಯ ನೀಡಬೇಕು ಎಂದು ಹೇಳಿದರು. ವಿದ್ಯಾರ್ಥಿಗಳನ್ನು ಕೇವಲ ಪಠ್ಯ ಪುಸ್ತಕಗಳಿಗೆ ಮಾತ್ರ ಸೀಮಿತ ಮಾಡದೇ, ವಿವಿಧ ರೀತಿಯ ಹವ್ಯಾಸಗಳನ್ನು ರೂಢಿಸಿಕೊಂಡು, ಬೆಳೆಸಬೇಕು. ಅದಕ್ಕಾಗಿ ಸಮಯ ಮೀಸಲಿಡಬೇಕು ಎಂದರು.
ಕ್ರಿಕೆಟ್ ಉದಾಹರಣೆ
ಒತ್ತಡ ನಿರ್ವಹಣೆ ಕುರಿತು ಮಾತನಾಡಿದ ಪ್ರಧಾನಿ ಮೋದಿ, ಬಾಹ್ಯ ಒತ್ತಡಕ್ಕಿಂತ ಪಠ್ಯದ ಮೇಲಿನ ಗಮನ ಹೆಚ್ಚಿಸಬೇಕು ಎಂದು ಹೇಳಿದರು. ಪ್ರೇಕ್ಷಕರ ಗದ್ದಲದ ನಡುವೆ ಕ್ರಿಕೆಟ್ನಲ್ಲಿ ಬ್ಯಾಟ್ಸ್ ಮನ್ ಚೆಂಡಿನ ಮೇಲೆ ಗಮನ ಕೇಂದ್ರೀಕರಿಸುತ್ತಾನೋ, ಹಾಗೆಯೇ ವಿದ್ಯಾರ್ಥಿಗಳು ಒತ್ತಡದ ಬಗ್ಗೆ ಚಿಂತಿಸುವ ಬದಲು ಕಲಿಕೆಯತ್ತ ಗಮನ ಹರಿಸಬೇಕು ಎಂದರು.
ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ಮಹತ್ವವನ್ನು ಪ್ರಧಾನಿ ಮೋದಿ ಒತ್ತಿ ಹೇಳಿದರು. ಸರಿಯಾದ ನಿದ್ರೆ ಮತ್ತು ಸಮತೋಲಿತ ಆಹಾರದ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಕಿವಿಮಾತು ಹೇಳಿದರು.