PAN 2.0 New Scheme | ಹೊಸ ಯೋಜನೆಯ ಪ್ರಯೋಜನಗಳೇನು? ಎಲ್ಲರೂ ಮತ್ತೊಂದು ಕಾರ್ಡ್‌ ಮಾಡಿಸಬೇಕೇ?
x
PAN Card

PAN 2.0 New Scheme | ಹೊಸ ಯೋಜನೆಯ ಪ್ರಯೋಜನಗಳೇನು? ಎಲ್ಲರೂ ಮತ್ತೊಂದು ಕಾರ್ಡ್‌ ಮಾಡಿಸಬೇಕೇ?

ನಿಮ್ಮ ಪ್ಯಾನ್ ಕಾರ್ಡ್‌ನಲ್ಲಿ ಅಪ್‌ಡೇಟ್‌ ಮಾಡಲು ಬಯಸದ ಹೊರತು ಪ್ಯಾನ್‌ ಕಾರ್ಡ್‌ ಬದಲಾಯಿಸುವ ಅಗತ್ಯವೇ ಇರುವುದಿಲ್ಲ. ಹಳೆ ಕಾರ್ಡ್‌ಗಳು ಪ್ಯಾನ್ 2.0 ಅಡಿಯಲ್ಲೂ ಮಾನ್ಯವಾಗಿರುತ್ತವೆ.


ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ ಸಂಪುಟ ಸಮಿತಿ (ಸಿಸಿಇಎ) 1,435 ಕೋಟಿ ರೂ.ಗಳ ವೆಚ್ಚದ ಆದಾಯ ತೆರಿಗೆ ಇಲಾಖೆಯ ಪ್ಯಾನ್ 2.0 ಯೋಜನೆಗೆ ಕೆಲವು ದಿನಗಳ ಹಿಂದೆ ಅನುಮೋದನೆ ಕೊಟ್ಟಿದೆ. Permanent Account Number ಸಂಬಂಧಿತ ಸೇವೆಗಳನ್ನು ಪ್ರಸ್ತುತ ಮೂರು ವಿಭಿನ್ನ ಫ್ಲ್ಯಾಟ್‌ಫಾರ್ಮ್‌ಗಳಲ್ಲಿ ಮಾಡಲಾಗುತ್ತಿದೆ. ಪ್ಯಾನ್ 2.0 ಯೋಜನೆಯಡಿ ಅದನ್ನು ಸಂಪೂರ್ಣವಾಗಿ ಏಕಗವಾಕ್ಷಿ ಆನ್‌ಲೈನ್‌ ವ್ಯವಸ್ಥೆಯಡಿ ತರಲಾಗುತ್ತದೆ. ಇಂದು ಸಂಪೂರ್ಣವಾಗಿ ಕಾಗದ ರಹಿತವಾಗಿರುತ್ತದೆ.

ಪ್ಯಾನ್ ಮತ್ತು ಟ್ಯಾನ್ (ತೆರಿಗೆ ಕಡಿತ ಅಥವಾ ಸಂಗ್ರಹ ಖಾತೆ ಸಂಖ್ಯೆ) ಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ಏಕೀಕೃತ ವ್ಯವಸ್ಥೆಯಲ್ಲಿ ನಡೆಯಲಿದೆ. ಅರ್ಜಿ ಸಲ್ಲಿಕೆ, ನವೀಕರಣ, ತಿದ್ದುಪಡಿಗಳು, ಆಧಾರ್-ಪ್ಯಾನ್ ಲಿಂಕ್, ಮರು-ವಿತರಣಾ ಅರ್ಜಿ, ಮತ್ತು ಆನ್ಲೈನ್ ಪ್ಯಾನ್ ದೃಢೀಕರಣ ಸೇರಿದಂತೆ ಎಲ್ಲ ಪ್ರಕ್ರಿಯೆಗಳು ಏಕೀಕೃತ ವ್ಯವಸ್ಥೆಯಲ್ಲಿ ನಡೆಯಲಿದೆ.

ಏನಿದು ಪ್ಯಾನ್ 2.0 ಯೋಜನೆ?

ಪ್ಯಾನ್ 2.0 ಎಂಬುದು ಕೇಂದ್ರೀಯ ನೇರ ತೆರಿಗೆ ಮಂಡಳಿಯ ಇ-ಆಡಳಿತ ಯೋಜನೆ. ಪ್ಯಾನ್ ಅಥವಾ ಟ್ಯಾನ್ ಸೇವೆಗಳ ತಂತ್ರಜ್ಞಾನ-ಚಾಲಿತ ರೂಪಾಂತರದ ಮೂಲಕ ತೆರಿಗೆದಾರರ ನೋಂದಣಿ ಸೇವೆಗಳ ಪ್ರಕ್ರಿಯೆಯನ್ನುಮರು-ವಿನ್ಯಾಸಗೊಳಿಸುತ್ತದೆ.

ಈ ಯೋಜನೆಯು ಎಲ್ಲಾ ಪ್ರಮುಖ ಮತ್ತು ಪ್ರಮುಖವಲ್ಲದ ಪ್ಯಾನ್ ಅಥವಾ ಟ್ಯಾನ್ ಸೇವೆಗಳು ಮತ್ತು ಪ್ಯಾನ್ ದೃಢೀಕರಣ ಸೇವೆಗಳನ್ನು ಸರ್ಕಾರದ ಡಿಜಿಟಲ್ ಇಂಡಿಯಾ ಕಾರ್ಯಕ್ರಮಕ್ಕೆ ಅನುಗುಣವಾಗಿ ಕಾಗದರಹಿತ, ಏಕೀಕೃತ ವೇದಿಕೆಯಾಗಿ ಸಂಯೋಜಿಸುತ್ತದೆ. ತೆರಿಗೆದಾರರಿಗೆ ತಡೆರಹಿತ, ಸುಧಾರಿತ ಡಿಜಿಟಲ್ ಅನುಭವ ನೀಡುತ್ತದೆ.

ನಿರ್ದಿಷ್ಟ ಸರ್ಕಾರಿ ಸಂಸ್ಥೆಗಳ ಎಲ್ಲಾ ಡಿಜಿಟಲ್ ಪ್ರಕ್ರಿಯೆಗಳಿಗೆ ಪ್ಯಾನ್ ಅನ್ನು ಸಾಮಾನ್ಯ ಗುರುತಿನ ಚೀಟಿಯಾಗಿ ಬಳಸಲಾಗುತ್ತದೆ.

ಪ್ರಮುಖ ಲಕ್ಷಣಗಳು ಯಾವುವು?

ಬಳಕೆದಾರರಿಗೆ ಪ್ರಕ್ರಿಯೆ ಸರಳಗೊಳಿಸಲು ಎಲ್ಲಾ ಪ್ಯಾನ್ / ಟ್ಯಾನ್ ಸಂಬಂಧಿತ ಸೇವೆಗಳಿಗೆ ಒಂದೇ ಪೋರ್ಟಲ್ ಇರುತ್ತದೆ.

ಹೊಸ ವ್ಯವಸ್ಥೆಯು ಸಂಪೂರ್ಣ ಆನ್ ಲೈನ್ ಮೂಲಕ ನಡೆಯುತ್ತದೆ. ಆದ್ದರಿಂದ, ಕಾಗದಪತ್ರಗಳನ್ನು ವಹಿವಾಟು ಇರುವುದಿಲ್ಲ.

ಸುಧಾರಿತ ಕ್ರಮಗಳ ಮೂಲಕ ವೈಯಕ್ತಿಕ ಡೇಟಾ‌ ರಕ್ಷಿಸಲಾಗುತ್ತದೆ. ಬಳಕೆದಾರರು ಪ್ಯಾನ್ ಡೇಟಾ ವಾಲ್ಟ್ ಮೂಲಕ ಸುರಕ್ಷಿತ ಸ್ಟೋರೇಜ್‌ ಕೂಡ ಸಿಗುತ್ತದೆ.

ಬಳಕೆದಾರರ ಪ್ರಶ್ನೆಗಳು ಮತ್ತು ಸಮಸ್ಯೆಗಳನ್ನು ಪರಿಹರಿಸಲು ಮೀಸಲಾದ ಕಾಲ್ ಸೆಂಟರ್ ಮತ್ತು ಸಹಾಯವಾಣಿ ಇರುತ್ತದೆ.

2017-18ರಿಂದ ಪ್ಯಾನ್ ಕಾರ್ಡ್‌ನಲ್ಲಿ ಬಂದಿರುವ ಕ್ಯೂಆರ್ ಕೋಡ್ ಫೀಚರ್‌ ಅನ್ನುಸುಧಾರಣೆಗಳ ಸಮೇತ ಮುಂದುವರಿಸಲಾಗುತ್ತದೆ. ಇದು ಪರಿಶೀಲನೆ ಮತ್ತು ತೆರಿಗೆದಾರರ ವಿವರಗಳು ಸುಲಭವಾಗಿ ಸಿಗುವಂತೆ ಮಾಡುತ್ತದೆ.

ಪ್ರಯೋಜನಗಳು ಯಾವುವು?

ಏಕೀಕೃತ ಡಿಜಿಟಲ್ ಪ್ಲಾಟ್ ಫಾರ್ಮ್ ಡೇಟಾಗಳ ಸ್ಥಿರವಾಗಿರುವುದನ್ನು ಖಚಿತಪಡಿಸುತ್ತದೆ.

ಹೊಸ ವ್ಯವಸ್ಥೆಯು ವೇಗದ ಸೇವೆ ಮತ್ತು ಸುಲಭವಾಗಿ ಲಭ್ಯವಾಗುವಂತೆ ಮಾಡುತ್ತದೆ.

ಸುಧಾರಿತ ಸೈಬರ್ ಭದ್ರತಾ ಕ್ರಮಗಳು ಬಳಕೆದಾರರ ಡೇಟಾಕ್ಕೆ ಹೆಚ್ಚಿನ ಭದ್ರತೆ ಸಿಗುತ್ತದೆ.

ಕಾಗದರಹಿತ ವ್ಯವಸ್ಥೆಗೆ ಪರಿವರ್ತನೆಯು ಪರಿಸರಕ್ಕೆ ಪೂರಕ. ಒಟ್ಟು ವೆಚ್ಚವನ್ನು ಕಡಿಮೆ ಮಾಡುತ್ತದೆ.

ಮತ್ತೊಂದು ಕಾರ್ಡ್‌ ಬೇಕೇ?

ಇಲ್ಲ, ಈಗಾಗಲೇ ಪ್ಯಾನ್ ಕಾರ್ಡ್ ಹೊಂದಿರುವವರು ಪ್ಯಾನ್ 2.0 ಅಡಿಯಲ್ಲಿ ಹೊಸ ಪ್ಯಾನ್ ಗೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ.

ನಿಮ್ಮ ಪ್ಯಾನ್ ಕಾರ್ಡ್‌ಗೆ ಯಾವುದೇ ಅಪ್‌ಡೇಟ್‌ ಅಥವಾ ತಿದ್ದುಪಡಿ ಇಲ್ಲದಿದ್ದರೆ ಬದಲಾಯಿಸುವ ಅಗತ್ಯವಿಲ್ಲ. ಈಗಾಗಲೇ ಇರುವ ಪ್ಯಾನ್ ಕಾರ್ಡ್‌ಗಳು ಪ್ಯಾನ್ 2.0 ಅಡಿಯಲ್ಲಿ ಮಾನ್ಯವಾಗಿರುತ್ತವೆ.

ಬದಲಾವಣೆಗಳನ್ನು ಮಾಡಬಹುದೇ?

ಪ್ಯಾನ್ ಹೊಂದಿರುವವರು ವಿವರಗಳಾದ ಇಮೇಲ್, ಮೊಬೈಲ್ ಸಂಖ್ಯೆ, ವಿಳಾಸ ಅಥವಾ ಹೆಸರು, ಹುಟ್ಟಿದ ದಿನಾಂಕ ಮುಂತಾದ ಜನಸಂಖ್ಯಾ ವಿವರಗಳನ್ನು ಪ್ಯಾನ್ 2.0 ಯೋಜನೆ ಪ್ರಾರಂಭವಾದ ನಂತರ ಉಚಿತವಾಗಿ ಸರಿಪಡಿಸಬಹುದು.

ಹೊಸ ಪ್ಯಾನ್‌ಕಾರ್ಡ್‌ ದರವೆಷ್ಟು?

ಪ್ಯಾನ್‌ನ ಹೊಸ ವಿತರಣೆ , ನವೀಕರಣಗಳು ಅಥವಾ ತಿದ್ದುಪಡಿಗಳನ್ನು ಉಚಿತವಾಗಿ ಮಾಡಲಾಗುತ್ತದೆ. ನಿಮ್ಮ ನೋಂದಾಯಿತ ಇಮೇಲ್ ಐಡಿಗೆ ಇ-ಪ್ಯಾನ್ ಕಳುಹಿಸಲಾಗುತ್ತದೆ.

ಪ್ಯಾನ್‌ ಕಾರ್ಡ್‌ ಕಾಪಿ ಬೇಕಾದರೆ 50 ರೂಪಾಯಿ ಪಾವತಿ ಮಾಡಿ ವಿನಂತಿ ಕಳುಹಿಸಬೇಕು.

ಭಾರತದ ಹೊರಗೆ ಪ್ಯಾನ್ ಕಾರ್ಡ್‌ ವಿತರಣೆ ಮಾಡಲು 15 ರೂ ಶುಲ್ಕ ಮತ್ತು ಅಂಚೆ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

Read More
Next Story