
ಸಾಂದರ್ಭಿಕ ಚಿತ್ರ
ಅಮೆರಿಕದಲ್ಲಿ ಭಾರೀ ವಿಧ್ವಂಸಕ ಕೃತ್ಯಕ್ಕೆ ಸಂಚು: ಪಾಕಿಸ್ತಾನ ಮೂಲದ ವಿದ್ಯಾರ್ಥಿ ಬಂಧನ
ಬಂಧಿತ ಆರೋಪಿಯನ್ನು 25 ವರ್ಷದ ಲುಕ್ಮಾನ್ ಖಾನ್ ಎಂದು ಗುರುತಿಸಲಾಗಿದೆ. ನವೆಂಬರ್ 24ರಂದು ಮಧ್ಯರಾತ್ರಿ ಈತ ಸಿಕ್ಕಿಬಿದ್ದಿದ್ದು, ಆತನ ವಾಹನ ಮತ್ತು ಮನೆಯಲ್ಲಿ ದೊರೆತ ಶಸ್ತ್ರಾಸ್ತ್ರಗಳ ಪ್ರಮಾಣ ತನಿಖಾಧಿಕಾರಿಗಳನ್ನೇ ಬೆಚ್ಚಿಬೀಳಿಸಿದೆ.
ಅಮೆರಿಕದ ಡೆಲವೇರ್ ವಿಶ್ವವಿದ್ಯಾಲಯದಲ್ಲಿ ಸಾಮೂಹಿಕ ಗುಂಡಿನ ದಾಳಿ ನಡೆಸಿ "ರಕ್ತಪಾತ" ಸೃಷ್ಟಿಸುವ ಮೂಲಕ ಹುತಾತ್ಮನಾಗಲು ಸಂಚು ರೂಪಿಸಿದ್ದ ಪಾಕಿಸ್ತಾನ ಮೂಲದ ಅಮೆರಿಕನ್ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ಭಾರೀ ಪ್ರಮಾಣದ ಮಾರಕಾಸ್ತ್ರಗಳು, ಮದ್ದುಗುಂಡುಗಳು ಹಾಗೂ ದಾಳಿಯ ನೀಲನಕ್ಷೆಯುಳ್ಳ ಟಿಪ್ಪಣಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿಯನ್ನು 25 ವರ್ಷದ ಲುಕ್ಮಾನ್ ಖಾನ್ ಎಂದು ಗುರುತಿಸಲಾಗಿದೆ. ನವೆಂಬರ್ 24ರಂದು ಮಧ್ಯರಾತ್ರಿ ಈತ ಸಿಕ್ಕಿಬಿದ್ದಿದ್ದು, ಆತನ ವಾಹನ ಮತ್ತು ಮನೆಯಲ್ಲಿ ದೊರೆತ ಶಸ್ತ್ರಾಸ್ತ್ರಗಳ ಪ್ರಮಾಣ ತನಿಖಾಧಿಕಾರಿಗಳನ್ನೇ ಬೆಚ್ಚಿಬೀಳಿಸಿದೆ.
ಬಂಧನ ಮತ್ತು ಶಸ್ತ್ರಾಸ್ತ್ರ ಪತ್ತೆ
ನವೆಂಬರ್ 24ರಂದು ಮಧ್ಯರಾತ್ರಿ ಸುಮಾರಿಗೆ ಕ್ಯಾನ್ಬಿ ಪಾರ್ಕ್ ವೆಸ್ಟ್ ಬಳಿ ನಿಲ್ಲಿಸಿದ್ದ ಪಿಕ್‌ಅಪ್ ಟ್ರಕ್ ಒಂದರಲ್ಲಿ ಲುಕ್ಮಾನ್ ಖಾನ್ ಅನುಮಾನಾಸ್ಪದವಾಗಿ ಕಂಡುಬಂದಿದ್ದನು. ಪೊಲೀಸರು ವಾಹನವನ್ನು ಪರಿಶೀಲಿಸಿದಾಗ, ಅಲ್ಲಿ ಗುಂಡು ನಿರೋಧಕ ಕವಚ (ಬಾಡಿ ಆರ್ಮರ್), ಅತ್ಯಾಧುನಿಕ .357 ಗ್ಲಾಕ್ ಪಿಸ್ತೂಲು ಮತ್ತು ಗುಂಡು ತುಂಬಿದ ಮ್ಯಾಗಜೀನ್‌ಗಳು ಪತ್ತೆಯಾಗಿವೆ. 'ನ್ಯೂಯಾರ್ಕ್ ಪೋಸ್ಟ್' ವರದಿಯ ಪ್ರಕಾರ, ಆತ ಹೊಂದಿದ್ದ ಪಿಸ್ತೂಲನ್ನು ಸೆಮಿ-ಆಟೋಮ್ಯಾಟಿಕ್ ಆಗಿ ಬದಲಾಯಿಸಬಹುದಾದ ತಂತ್ರಜ್ಞಾನವನ್ನು ಬಳಸಲಾಗಿತ್ತು.
"ಎಲ್ಲರನ್ನೂ ಕೊಂದು ಹುತಾತ್ಮನಾಗುವ" ಸಂಚು
ವಾಹನದಲ್ಲಿ ದೊರೆತ ನೋಟ್‌ಬುಕ್‌ನಲ್ಲಿ ಆಘಾತಕಾರಿ ಅಂಶಗಳು ಬಯಲಿಗೆ ಬಂದಿವೆ. ತನ್ನ ಹಳೆಯ ಕಾಲೇಜಿನ ಕ್ಯಾಂಪಸ್ ಪೊಲೀಸ್ ಇಲಾಖೆಯ ಮೇಲೆ ದಾಳಿ ನಡೆಸುವುದು ಹೇಗೆ ಎಂಬ ಬಗ್ಗೆ ವಿವರವಾದ ನೀಲನಕ್ಷೆಯನ್ನು ಆರೋಪಿ ತಯಾರಿಸಿದ್ದ. ಕಟ್ಟಡದ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಗುರುತಿಸಿದ್ದ ನಕ್ಷೆಗಳು ಹಾಗೂ "ಎಲ್ಲರನ್ನೂ ಕೊಂದು ಹುತಾತ್ಮನಾಗುವುದು" (kill all-martyrdom) ಎಂಬಂತಹ ಉಲ್ಲೇಖಗಳು ಆತನ ಡೈರಿಯಲ್ಲಿ ಪತ್ತೆಯಾಗಿವೆ. ಇದು ಪೂರ್ವನಿಯೋಜಿತ ದಾಳಿ ಮತ್ತು ಯುದ್ಧ ತಂತ್ರಗಳನ್ನು ಹೋಲುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಫ್‌ಬಿಐ ದಾಳಿ: ಮನೆಯಲ್ಲಿ ಶಸ್ತ್ರಾಗಾರ
ಲುಕ್ಮಾನ್ ಖಾನ್ ಬಂಧನದ ಬಳಿಕ ಎಫ್‌ಬಿಐ (FBI) ಅಧಿಕಾರಿಗಳು ಆತನ ಮನೆಯ ಮೇಲೆ ದಾಳಿ ನಡೆಸಿದಾಗ, ಅಲ್ಲಿ ಇನ್ನೂ ಹೆಚ್ಚಿನ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ. ಕೆಂಪು ಚುಕ್ಕೆ ಸ್ಕೋಪ್ (Red-dot scope) ಹೊಂದಿದ್ದ ಎಆರ್ (AR) ಶೈಲಿಯ ರೈಫಲ್ ಮತ್ತು ಕಾನೂನುಬಾಹಿರವಾಗಿ ಮೆಷಿನ್ ಗನ್ ಆಗಿ ಪರಿವರ್ತಿಸಲಾದ ಮತ್ತೊಂದು ಗ್ಲಾಕ್ ಪಿಸ್ತೂಲು ದೊರೆತಿದೆ. ಈ ಪಿಸ್ತೂಲು ನಿಮಿಷಕ್ಕೆ 1,200 ಸುತ್ತು ಗುಂಡು ಹಾರಿಸುವ ಸಾಮರ್ಥ್ಯ ಹೊಂದಿದೆ ಎನ್ನಲಾಗಿದೆ. ಇದರೊಂದಿಗೆ 11 ಎಕ್ಸ್‌ಟೆಂಡೆಡ್ ಮ್ಯಾಗಜೀನ್‌ಗಳು, ಹಾಲೋ-ಪಾಯಿಂಟ್ ಬುಲೆಟ್‌ಗಳು ಮತ್ತು ಬುಲೆಟ್ ಪ್ರೂಫ್ ಜಾಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳಲ್ಲಿ ಯಾವ ಶಸ್ತ್ರಾಸ್ತ್ರವೂ ನೋಂದಣಿಯಾಗಿರಲಿಲ್ಲ.
ಆರೋಪಿಯ ಹಿನ್ನೆಲೆ
ಲುಕ್ಮಾನ್ ಖಾನ್ ಪಾಕಿಸ್ತಾನದಲ್ಲಿ ಜನಿಸಿದ್ದರೂ, ಚಿಕ್ಕಂದಿನಿಂದಲೂ ಅಮೆರಿಕದಲ್ಲಿ ಬೆಳೆದಿದ್ದು, ಅಮೆರಿಕದ ಪೌರತ್ವ ಹೊಂದಿದ್ದಾನೆ. ಈತನಿಗೆ ಯಾವುದೇ ಅಪರಾಧ ಹಿನ್ನೆಲೆ ಇರಲಿಲ್ಲ ಎಂದು 'ಸ್ಪಾಟ್‌ಲೈಟ್ ಡೆಲವೇರ್' ವರದಿ ಮಾಡಿದೆ. ಆದರೆ, ಕಳೆದ ಕೆಲ ತಿಂಗಳುಗಳಿಂದ ಈತನ ನಡವಳಿಕೆಯಲ್ಲಿ ಬದಲಾವಣೆ ಕಂಡುಬಂದಿತ್ತು. ಹಿಂದೆ ಎಲ್ಲರೊಂದಿಗೆ ಬೆರೆಯುತ್ತಿದ್ದ ಆತ, ಇತ್ತೀಚೆಗೆ ಒಂಟಿಯಾಗಿದ್ದ ಮತ್ತು ಮುನಿಸಿಕೊಂಡವನಂತೆ ವರ್ತಿಸುತ್ತಿದ್ದ ಎಂದು ನೆರೆಹೊರೆಯವರು ಮಾಹಿತಿ ನೀಡಿದ್ದಾರೆ.

