
Pahalgam Terror Attack| ಪಹಲ್ಗಾಮ್ ಭಯೋತ್ಪಾದಕ ದಾಳಿ: ನಾಲ್ವರು ಭಯೋತ್ಪಾದಕರ ರೇಖಾ ಚಿತ್ರ ಬಿಡುಗಡೆ
ಅಧಿಕಾರಿಗಳ ಪ್ರಕಾರ, ಈ ದಾಳಿ ಸಂಪೂರ್ಣವಾಗಿ ಯೋಜಿತವಾಗಿದ್ದು, ಪ್ರವಾಸಿಗರಿಗೆ ಇದರ ಬಗ್ಗೆ ಸಂಪೂರ್ಣವಾಗಿ ತಿಳಿದಿರಲಿಲ್ಲ. ಮಂಗಳವಾರ ಮಧ್ಯಾಹ್ನ, ಪ್ರವಾಸಿಗರು ಬೈಸರನ್ ಕಣಿವೆಯಲ್ಲಿ ಪ್ರಕೃತಿಯ ಸೌಂದರ್ಯವನ್ನು ವೀಕ್ಷಿಸುತ್ತಿದ್ದಾಗ ಗುಂಡಿನ ದಾಳಿ ನಡೆದಿದೆ.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ಮಂಗಳವಾರ (ಏಪ್ರಿಲ್ 22) ಮಧ್ಯಾಹ್ನ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ ಇಬ್ಬರು ಕನ್ನಡಿಗರು ಸೇರಿದಂತೆ 26 ಪ್ರವಾಸಿಗರು ಸಾವನ್ನಪ್ಪಿದ್ದಾರೆ. ಈ ದುಷ್ಕೃತ್ಯ ನಡೆಸಿದ ನಾಲ್ವರು ಉಗ್ರಗಾಮಿಗಳ ರೇಖಾಚಿತ್ರವನ್ನು ಬುಧವಾರ ಬಿಡುಗಡೆ ಮಾಡಲಾಗಿದೆ. ಅವರ ಬಂಧನಕ್ಕೆ ಬಹುಮಾನ ಘೋಷಿಸಿದ್ದಾರೆ.
ಅಧಿಕಾರಿಗಳ ಪ್ರಕಾರ, ಈ ದಾಳಿ ಸಂಪೂರ್ಣವಾಗಿ ಯೋಜಿತವಾಗಿದ್ದು, ಪ್ರವಾಸಿಗರಿಗೆ ಇದರ ಬಗ್ಗೆ ಸಂಪೂರ್ಣವಾಗಿ ತಿಳಿದಿರಲಿಲ್ಲ. ಮಂಗಳವಾರ ಮಧ್ಯಾಹ್ನ, ಪ್ರವಾಸಿಗರು ಬೈಸರನ್ ಕಣಿವೆಯಲ್ಲಿ ಪ್ರಕೃತಿಯ ಸೌಂದರ್ಯವನ್ನು ವೀಕ್ಷಿಸುತ್ತಿದ್ದಾಗ ಗುಂಡಿನ ದಾಳಿ ನಡೆದಿದೆ. ದಾಳಿಕೋರರು ಮನಬಂದಂತೆ ಗುಂಡು ಹಾರಿಸಿ 26 ಮಂದಿಯನ್ನು ಹತ್ಯೆ ಮಾಡಿದ್ದರು.
ಲಷ್ಕರ್-ಎ-ತೊಯ್ಬಾದ ಒಡಕು ಗುಂಪಾದ ದಿ ರೆಸಿಸ್ಟೆನ್ಸ್ ಫ್ರಂಟ್ (TRF) ಈ ದಾಳಿಯ ಹೊಣೆಗಾರಿಕೆ ಹೊತ್ತಿದೆ. ದಾಳಿಕೋರರು, ಸ್ಥಳೀಯರಂತೆ ವೇಷ ಧರಿಸಿ, ಪರ್ವತದಿಂದ ಇಳಿದು ಬಂದು ಮನಬಂದಂತೆ ಗುಂಡು ಹಾರಿಸಿದ್ದಾರೆ.
ಘಟನೆಯ ನಂತರ, ಭಾರತೀಯ ಸೇನೆ, ಸಿಆರ್ಪಿಎಫ್ ಜಮ್ಮು ಮತ್ತು ಕಾಶ್ಮೀರ ಪೊಲೀಸರು ದಾಳಿಕೋರರನ್ನು ಹಿಡಿಯಲು ವ್ಯಾಪಕ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಫೋಲಿಯೇಜ್ ಪೆನೆಟ್ರೇಟಿಂಗ್ ರಾಡಾರ್‌ನಂತಹ ಸುಧಾರಿತ ತಂತ್ರಜ್ಞಾನ ಬಳಸಿಕೊಂಡು, ದಟ್ಟ ಕಾಡುಗಳಲ್ಲಿ ಶೋಧ ನಡೆಸಲಾಗುತ್ತಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ (NIA) ತಂಡವು ಸ್ಥಳಕ್ಕೆ ಭೇಟಿ ನೀಡಿ, ಸ್ಥಳೀಯ ಪೊಲೀಸರಿಗೆ ಸಹಾಯ ಮಾಡುತ್ತಿದೆ.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಸೌದಿ ಅರೇಬಿಯಾದ ಭೇಟಿಯನ್ನು ಮೊಟಕುಗೊಳಿಸಿ, ದೆಹಲಿಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಶ್ರೀ ಅಜಿತ್ ಡೋವಲ್ ಮತ್ತು ವಿದೇಶಾಂಗ ಸಚಿವ ಶ್ರೀ ಎಸ್. ಜಯಶಂಕರ್ ಅವರೊಂದಿಗೆ ತುರ್ತು ಸಭೆ ನಡೆಸಿದ್ದಾರೆ.
ಈ ದಾಳಿಯನ್ನು ಯುಎನ್ ಮಹಾಸಚಿವ ಆಂಟೋನಿಯೊ ಗುಟೆರಸ್, ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೇರಿದಂತೆ ಹಲವು ಜಾಗತಿಕ ನಾಯಕರು ಖಂಡಿಸಿದ್ದಾರೆ. ಕಾಶ್ಮೀರದಲ್ಲಿ ಬುಧವಾರ (ಏಪ್ರಿಲ್ 23) ಬಂದ್ ಆಚರಿಸಲಾಗಿದ್ದು, ಸ್ಥಳೀಯರು ಮತ್ತು ರಾಜಕೀಯ ಪಕ್ಷಗಳು ಈ ದಾಳಿಯ ವಿರುದ್ಧ ಒಗ್ಗಟ್ಟಿನಿಂದ ಧ್ವನಿ ಎತ್ತಿವೆ.
ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಮೃತರ ಕುಟುಂಬಗಳಿಗೆ 10 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದೆ. ಗಾಯಗೊಂಡವರಿಗೆ ಚಿಕಿತ್ಸೆಗಾಗಿ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.