
ಭಾರತೀಯ ಸೇನಾಪಡೆ ಯೋಧರು ಉಗ್ರರ ಅಡಗುತಾಣಗಳ ಪತ್ತೆಕಾರ್ಯದಲ್ಲಿ ತೊಡಗಿರುವುದು.
Pahalgam Terror Attack | ಉಗ್ರರಿಗೆ ಆಶ್ರಯ ನೀಡಿದ್ದ ಆರೋಪಿ ನದಿಗೆ ಹಾರಿ ಆತ್ಮಹತ್ಯೆ; ನ್ಯಾಯಾಂಗ ತನಿಖೆಗೆ ಮುಫ್ತಿ ಆಗ್ರಹ
ಶಂಕಿತ ಆರೋಪಿ ಇಮ್ತಿಯಾಜ್ ಅಹ್ಮದ್ ಆಗ್ರೆಯನ್ನು ಉಗ್ರರ ಅಡಗುತಾಣಗಳ ಪತ್ತೆಗೆ ಕರೆದೊಯ್ಯುವ ವೇಳೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಭಯೋತ್ಪಾದಕರಿಗೆ ಸಹಾಯ ಮಾಡಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದ.
ಜಮ್ಮುಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಶಂಕಿತ ಉಗ್ರರಿಗೆ ಆಶ್ರಯ ನೀಡಿದ್ದ ಆರೋಪದ ಮೇಲೆ ಬಂಧಿತನಾಗಿದ್ದ ಆರೋಪಿ ಇಮ್ತಿಯಾಜ್ ಅಹ್ಮದ್ ಆಗ್ರೆಯನ್ನು ಸೋಮವಾರ ಉಗ್ರರ ಅಡುಗುತಾಣ ಪತ್ತೆಗೆ ಕರೆದೊಯ್ಯುವ ವೇಳೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸೇನೆ ಹಾಗೂ ಪೊಲೀಸರ ವಶದಲ್ಲಿದ್ದ ವ್ಯಕ್ತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ನ್ಯಾಯಾಂಗ ತನಿಖೆ ನಡೆಸುವಂತೆ ಜಮ್ಮುಕಾಶ್ಮೀರದ ಪ್ರತಿಪಕ್ಷ ನಾಯಕರು ಆಗ್ರಹಿಸಿದ್ದಾರೆ.
ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದರು. ಈ ಘಟನೆಯ ತನಿಖೆ ವೇಳೆ ಆರೋಪಿ ಇಮ್ತಿಯಾಜ್ ಅಹ್ಮದ್ ಆಗ್ರೆಯನ್ನು ಉಗ್ರರಿಗೆ ಆಶ್ರಯ ನೀಡಿದ್ದ ಆರೋಪದಡಿ ಪೊಲೀಸರು ಬಂಧಿಸಿದ್ದರು.
ಭಯೋತ್ಪಾದಕರಿಗೆ ಸಹಾಯ ಮಾಡಿದ್ದಾಗಿ ತನಿಖೆ ವೇಳೆ ಆರೋಪಿಯೇ ತಪ್ಪು ಒಪ್ಪಿಕೊಂಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನ್ಯಾಯಾಂಗ ತನಿಖೆಗೆ ಆಗ್ರಹ
ಆರೋಪಿ ಇಮ್ತಿಯಾಜ್ ಅಹ್ಮದ್ ಆಗ್ರೆ ಎಂಬಾತ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಿಂದೆ ದೊಡ್ಡ ಷಡ್ಯಂತ್ರ ನಡೆದಿದೆ. ಆರೋಪಿಯ ಸಾವಿನ ಬಗ್ಗೆ ನ್ಯಾಯಾಂಗ ತನಿಖೆ ನಡೆಸಿ, ಮೃತರ ಕುಟುಂಬಕ್ಕೆ ನ್ಯಾಯ ದೊರಕಿಸಬೇಕು ಎಂದು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ, ನ್ಯಾಷನಲ್ ಕಾನ್ಫರೆನ್ಸ್ ಲೋಕಸಭಾ ಸದಸ್ಯ ಅಗಾ ರುಹುಲ್ಲಾ ಮೆಹದಿ ಸೇರಿದಂತೆ ಹಲವು ನಾಯಕರು ಆಗ್ರಹಿಸಿದ್ದಾರೆ.
ಈ ಮಧ್ಯೆ, ಜಮ್ಮುಕಾಶ್ಮೀರದ ಶಿಕ್ಷಣ, ಆರೋಗ್ಯ, ವೈದ್ಯಕೀಯ ಹಾಗೂ ಸಮಾಜ ಕಲ್ಯಾಣ ಸಚಿವೆ ಸಕಿನಾ ಇಟ್ಟು ಮಾತನಾಡಿ, ಪಹಲ್ಗಾಮ್ ದಾಳಿ ದುರದೃಷ್ಟಕರ ಸಂಗತಿ. ಈ ಘಟನೆ ನಡೆಯಬಾರದಿತ್ತು. ಅಮಾಯಕ ಪ್ರವಾಸಿಗರನ್ನು ಗುರಿಯಾಗಿಸಿ ದಾಳಿ ನಡೆಸಿರುವುದು ರಾಜ್ಯದಲ್ಲಿ ಭಯದ ವಾತಾವರಣ ಮೂಡಿಸಿದೆ. ಆದರೆ, ತನಿಖೆ ನೆಪದಲ್ಲಿ ಅಮಾಯಕ ನಾಗರಿಕರಿಗೆ ಕಿರುಕುಳ ನೀಡಬಾರದು. ಈ ಬಗ್ಗೆ ಗೃಹ ಇಲಾಖೆಗೆ ಲೆಪ್ಟಿನೆಂಟ್ ಗವರ್ನರ್ ಸೂಚಿಸಬೇಕು ಎಂದು ಒತ್ತಾಯಿಸಿದ್ದಾರೆ.