ಪದ್ಮಶ್ರೀ ಪುರಸ್ಕೃತ, ಶತಾಯುಷಿ ಯೋಗಗುರು ಸ್ವಾಮಿ ಶಿವಾನಂದ ಬಾಬಾ ಇನ್ನಿಲ್ಲ
x

ಯೋಗ ಗುರು ಸ್ವಾಮಿ ಶಿವಾನಂದ ಬಾಬಾ ಅವರು ರಾಷ್ಟ್ರಪತಿಗಳಿಂದ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕ್ಷಣ.

ಪದ್ಮಶ್ರೀ ಪುರಸ್ಕೃತ, ಶತಾಯುಷಿ ಯೋಗಗುರು ಸ್ವಾಮಿ ಶಿವಾನಂದ ಬಾಬಾ ಇನ್ನಿಲ್ಲ

ಜೀವನಪೂರ್ತಿ ಯೋಗಕ್ಕಾಗಿಯೇ ತಮ್ಮನ್ನು ಸಮರ್ಪಿಸಿಕೊಂಡಿದ್ದ ಸ್ವಾಮಿ ಶಿವಾನಂದ ಬಾಬಾ ಅವರಿಗೆ 2022 ರಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಿದ್ದರು.


ಪದ್ಮಶ್ರೀ ಪುರಸ್ಕೃತ, 128ವರ್ಷ ವಯಸ್ಸಿನ ಯೋಗಗುರು ಸ್ವಾಮಿ ಶಿವಾನಂದ ಬಾಬಾ ಅವರು ವಯೋಸಹಜ ಕಾಯಿಲೆಯಿಂದ ಶನಿವಾರ ರಾತ್ರಿ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ವಾರಾಣಸಿಯ ಬಿಎಚ್‌ಯು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಸ್ವಾಮಿ ಶಿವಾನಂದ ಬಾಬಾ ಅವರು ಕೊನೆಯುಸಿರೆಳೆದಿದ್ದು, ಭಾನುವಾರ (ಮೇ4) ಅಂತ್ಯಕ್ರಿಯೆ ನಡೆಯಲಿದೆ.

ಜೀವನಪೂರ್ತಿ ಯೋಗಕ್ಕಾಗಿಯೇ ತನ್ನನ್ನು ಸಮರ್ಪಿಸಿಕೊಂಡಿದ್ದ ಸ್ವಾಮಿ ಶಿವಾನಂದ ಬಾಬಾ ಅವರಿಗೆ 2022 ರಲ್ಲಿ ಅಂದಿನ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಿದ್ದರು.

ಸ್ವಾಮಿ ಶಿವಾನಂದ ಬಾಬಾ ಅವರು ಇಂದಿನ ಬಾಂಗ್ಲಾದೇಶದ ಸಿಲ್ಹೆಟ್‌ ಪ್ರಾಂತ್ಯದಲ್ಲಿ 1896 ಆ.8 ರಂದು ಜನಿಸಿದ್ದರು. ತೀವ್ರ ಬಡತನದಲ್ಲಿ ಜೀವನ ಸಾಗಿಸಿದ್ದ ಇವರು ಆರಂಭದಲ್ಲಿ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದರು. ಕೇವಲ ಆರನೇ ವಯಸ್ಸಿನಲ್ಲಿ ತಮ್ಮ ಪರಿವಾರ ಕಳೆದುಕೊಂಡು ಬಂಗಾಳ ಪ್ರಾಂತ್ಯದಿಂದ ಕಾಶಿಗೆ ವಲಸೆ ಬಂದಿದ್ದರು. ಕಾಶಿಯಲ್ಲಿ ಗುರುಗಳಾದ ಓಂಕಾರನಂದರಿಂದ ಶಿಕ್ಷಣ ಪಡೆದು ಯೋಗ ಕರಗತ ಮಾಡಿಕೊಂಡರು.

ಗಂಗಾ ದಡದಲ್ಲಿ ಯೋಗಾಭ್ಯಾಸ

ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ವಾರಾಣಸಿಯ ಗಂಗಾನದಿಯ ದಡದಲ್ಲಿ ಯೋಗ ಕಲಿಸುತ್ತಿದ್ದರು. ಕಳೆದ ಐವತ್ತು ವರ್ಷಗಳಿಂದ ಕುಷ್ಠರೋಗಿಗಗಳ ಸೇವೆ ಸಲ್ಲಿಸಿದ್ದರು. ಇವರ ಸೇವೆ ಗುರುತಿಸಿ ಕೇಂದ್ರ ಸರ್ಕಾರ 2022 ರಲ್ಲಿ ದೇಶದ ಅತ್ಯನ್ನತ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀ ನೀಡಿ ಗೌರವಿಸಿತ್ತು.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಯೋಗ ಗುರು ಸ್ವಾಮಿ ಶಿವಾನಂದ ಬಾಬಾ ಅವರಿಗೆ ಸಂತಾಪ ಸೂಚಿಸಿದ್ದು, ತಮ್ಮ ಎಕ್ಸ್‌ ಖಾತೆಯಲ್ಲಿ"ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸ್ವಾಮಿ ಶಿವಾನಂದ ಬಾಬಾ ಅವರ ನಿಧನವು ಅತ್ಯಂತ ದುಃಖಕರವಾಗಿದೆ. ನಿಮ್ಮ ಇಡೀ ಜೀವನವನ್ನು ಯೋಗಭಾಸಕ್ಕೆ ಮೀಸಲಿಟ್ಟಿದ್ದೀರಿ. ನಿಮ್ಮ ಆಧ್ಯಾತ್ಮಿಕ ಹಾಗೂ ಯೋಗ ಜೀವನವು ಇಡೀ ಸಮಾಜಕ್ಕೆ ಸ್ಫೂರ್ತಿಯಾಗಲಿದೆ. ಅಗಲಿದ ನಿಮ್ಮ ಆತ್ಮಕ್ಕೆ ಮೋಕ್ಷ ಸಿಗಲಿ. ನಿಮ್ಮ ಅನುಯಾಯಿಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ" ಎಂದು ಬರೆದುಕೊಂಡಿದ್ದಾರೆ.

Read More
Next Story