Padma Awards 2025: ಅನಂತ್‌ನಾಗ್‌ಗೆ ಪದ್ಮಭೂಷಣ; 139 ಪದ್ಮ ಪ್ರಶಸ್ತಿಗಳಲ್ಲಿ ಕರ್ನಾಟಕ ಒಟ್ಟು 9 ಸಾಧಕರ ಆಯ್ಕೆ
Padma Awards 2025: ಕರ್ನಾಟಕದ ಭೀಮವ್ವ ಶಿಳ್ಳೇಕ್ಯಾತರ, ಹಾಸನ ರಘು, ಪ್ರಶಾಂತ್ ಪ್ರಕಾಶ್, ಗ್ರ್ಯಾಮಿ ಪ್ರಶಸ್ತಿ ವಿಜೇತ ಸಂಗೀತಗಾರ ರಿಕಿ ಕೇಜ್, ವೆಂಕಪ್ಪ ಸುಗತೇಕರ್, ವಿಜಯಲಕ್ಷ್ಮಿ ದೇಶಮಾನೆ ಅವರಿಗೆ ಪ್ರಸಕ್ತ ಸಾಲಿನ ಪದ್ಮಶ್ರೀ ಪ್ರಶಸ್ತಿ ಸಿಕ್ಕಿವೆ.
ಪಿಟೀಲು ವಾದಕ ಲಕ್ಷ್ಮೀನಾರಾಯಣ ಅವರಿಗೆ ಪದ್ಮ ವಿಭೂಷಣ ಪ್ರಶಸ್ತಿ ಸೇರಿದಂತೆ ಕರ್ನಾಟಕದ ಒಟ್ಟು 9 ಮಂದಿ ಸಾಧಕರಿಗೆ 2025ನೇ ಸಾಲಿನ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳು ಲಭಿಸಿವೆ.
ಬೆಂಗಳೂರಿನ ಖ್ಯಾತ ಪಿಟೀಲು ವಾದಕ ಲಕ್ಷ್ಮೀನಾರಾಯಣ ಸುಬ್ರಹ್ಮಣ್ಯಂ ಅವರು ಅತ್ಯುನ್ನತ ಪ್ರಶಸ್ತಿಯಾಗಿರುವ ಪದ್ಮವಿಭೂಷಣಕ್ಕೆ ಭಾಜನರಾಗಿದ್ದಾರೆ. ಹಿರಿಯ ಚಲನಚಿತ್ರ ನಟ ಅನಂತ್ ನಾಗ್, ಪತ್ರಕರ್ತ ಹಾಗೂ ಪ್ರಸಾರ ಭಾರತಿ ಮಾಜಿ ಅಧ್ಯಕ್ಷ ಎ. ಸೂರ್ಯಪ್ರಕಾಶ್ ಅವರು ಪದ್ಮಭೂಷಣ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ಕರ್ನಾಟಕದ ಭೀಮವ್ವ ಶಿಳ್ಳೇಕ್ಯಾತರ, ಹಾಸನ ರಘು, ಪ್ರಶಾಂತ್ ಪ್ರಕಾಶ್, ಗ್ರ್ಯಾಮಿ ಪ್ರಶಸ್ತಿ ವಿಜೇತ ಸಂಗೀತಗಾರ ರಿಕಿ ಕೇಜ್, ವೆಂಕಪ್ಪ ಸುಗತೇಕರ್, ವಿಜಯಲಕ್ಷ್ಮಿ ದೇಶಮಾನೆ ಅವರಿಗೆ ಪ್ರಸಕ್ತ ಸಾಲಿನ ಪದ್ಮಶ್ರೀ ಪ್ರಶಸ್ತಿ ಸಿಕ್ಕಿವೆ. ಈ ಮೂಲಕ ರಾಜ್ಯದ 9 ಮಂದಿಗೆ ಪದ್ಮ ಕಿರೀಟ ಸಂದಂತಾಗಿದೆ.
139 ಮಂದಿಗೆ ಪದ್ಮ ಪ್ರಶಸ್ತಿಗಳು
139 ಪದ್ಮ ಪ್ರಶಸ್ತಿಗಳಲ್ಲಿ ಏಳು ಜನರಿಗೆ ಪದ್ಮ ವಿಭೂಷಣ, 19 ಜನರಿಗೆ ಪದ್ಮಭೂಷಣ ಮತ್ತು 113 ಜನರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿವೆ.
ಇನ್ನು ಮಹಾನ್ ನಟ ಎಂದೇ ಖ್ಯಾತಿ ಪಡೆದಿರುವ ಅನಂತನಾಗ್ ಅವರು ಭಾರತೀಯ ಚಿತ್ರರಂಗ ಕಂಡ ಅದ್ಭುತ ಪ್ರತಿಭೆ. ಕನ್ನಡ ಮಾತ್ರವಲ್ಲದೇ ಮರಾಠಿ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಚಿತ್ರಗಳಲ್ಲೂ ನಟಿಸಿದ್ದಾರೆ. ತಮ್ಮ ಅಭಿನಯಕ್ಕಾಗಿ ಅವರಿಗೆ 6 ಫಿಲ್ಮ್ ಫೇರ್ ಮತ್ತು 5 ಕರ್ನಾಟಕ ಚಲನಚಿತ್ರ ಪ್ರಶಸ್ತಿಗಳು ಸಂದಿವೆ.
ರಾಜ್ಯ ರಾಜಕೀಯದಲ್ಲೂ ಅನುಭವ ಹೊಂದಿರುವ ಅನಂತ್ ನಾಗ್ 1994ರ ಜೆ.ಎಚ್.ಪಟೇಲ್ ಸರ್ಕಾರದಲ್ಲಿ ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ.
ಶಾಲೆಯ ಮುಖವನ್ನೇ ನೋಡದ ಬಾಗಲಕೋಟೆಯ ಕಲಾವಿದ ವೆಂಕಪ್ಪ ಅಂಬಾಜಿ ಸುಗತೇಕರ್ ಅವರಿಗೆ ಗೊಂದಲಿಯೇ ಉಸಿರು. ಅವರಿಗೆ ಈಗ 81 ವರ್ಷ ವಯಸ್ಸು. ದಾಸರ ಪದ, ಸಂತ ಶಿಶುನಾಳರ ಪದ, ವಚನ ಸಾಹಿತ್ಯವನ್ನು ಗೊಂದಲಿ ಪದದ ಶೈಲಿಯಲ್ಲಿ ಹಾಡುವ ಕಲೆಗಾರಿಕೆ ಅವರಿಗೆ ಒಲಿದಿದೆ. ಹೀಗಾಗಿ ಇವರನ್ನು ಗೊಂದಲಿ ಹಾಡುಗಳ ಭೀಷ್ಮ ಎಂದೇ ಕರೆಯುತ್ತಾರೆ. ಈವರೆಗೆ 1000ಕ್ಕೂ ಅಧಿಕ ಗೊಂದಲಿ ಹಾಡುಗಳನ್ನು ಹಾಡಿದ್ದು, 150 ಗೊಂದಲಿ ಕಥೆಗಳನ್ನು ಹೇಳಿರುವ ಕೀರ್ತಿ ಇವರಿಗೆ ಸಲ್ಲುತ್ತದೆ.
ಇನ್ನು, ಗೊಂಬೆಯಾಟದ ಅಜ್ಜಿ ಎಂದೇ ಖ್ಯಾತಿ ಗಳಿಸಿರುವ ಕೊಪ್ಪಳದ ಭೀಮವ್ವಗೆ ಅಕ್ಷರ ಜ್ಞಾನವಿಲ್ಲದಿದ್ದರೂ ಗೊಂಬೆ ಕುಣಿಸುವಲ್ಲಿ ಎತ್ತಿದ ಕೈ. ತಮ್ಮ 14ನೇ ವಯಸ್ಸಿನಲ್ಲೇ ಗೊಂಬೆಗಳ ನಂಟು ಬೆಳೆಸಿದ ಅವರು ಈಗ ರಾಜ್ಯದ ಮೊದಲ ತೊಗಲು ಗೊಂಬೆ ಕಲಾವಿದೆ ಎಂಬ ಹೆಗ್ಗಳಿಕೆಯನ್ನು ಗಳಿಸಿದ್ದಾರೆ. ಸರಿಸುಮಾರು 70 ವರ್ಷಗಳಿಂದಲೂ ರಾಮಾಯಣ ಮತ್ತು ಮಹಾಭಾರತದ ಕಥೆಗಳನ್ನು ಗೊಂಬೆಗಳ ಮೂಲಕವೇ ಹೇಳಿದವರು. ಜಪಾನ್, ಜರ್ಮನಿ, ಅಮೆರಿಕ ಸೇರಿದಂತೆ 12ಕ್ಕೂ ಹೆಚ್ಚು ದೇಶಗಳಲ್ಲಿ ಭೀಮವ್ವ ಅಜ್ಜಿ ಗೊಂಬೆಯಾಟ ಪ್ರದರ್ಶನ ಕೊಟ್ಟಿದ್ದಾರೆ. 1993ರಲ್ಲಿ ಇವರಿಗೆ ಇರಾನ್ ನ ಗೊಂಬೆಯಾಟ ಪ್ರಶಸ್ತಿಯೂ ಸಂದಿದೆ.
ಪದ್ಮ ಗೌರವಕ್ಕೆ ಪಾತ್ರರಾಗಿರುವ ಡಾ. ವಿಜಯಲಕ್ಷ್ಮೀ ದೇಶಮನೆ ಅವರು ಕಳೆದ 4 ದಶಕಗಳಿಂದಲೂ ಕ್ಯಾನ್ಸರ್ ವಿರುದ್ಧ ಹೋರಾಡುವ ಜನರಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಮಾದಿಗ ಸಮುದಾಯದಿಂದ ಬಂದಿರುವ ದೇಶಮನೆ ಅವರು ಆರ್ಥಿಕವಾಗಿ ಹಿಂದುಳಿದ ಕ್ಯಾನ್ಸರ್ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುತ್ತಾ ಅವರಿಗೆ ಭರವಸೆಯ ಬೆಳಕಾದವರು.
ಶಾರದಾ ಸಿನ್ಹಾ, ಎಂ.ಟಿ.ವಾಸುದೇವನ್ ನಾಯರ್, ಪಿ.ಆರ್.ಶ್ರೀಜೇಶ್ ಆಯ್ಕೆ
ರಾಷ್ಟ್ರಮಟ್ಟದಲ್ಲಿ ಜಾನಪದ ಗಾಯಕಿ ಶಾರದಾ ಸಿನ್ಹಾ, ಮಲಯಾಳಂ ಬರಹಗಾರ ಮತ್ತು ನಿರ್ದೇಶಕ ಎಂಟಿ ವಾಸುದೇವನ್ ನಾಯರ್ ಮತ್ತು ಹಾಕಿ ಆಟಗಾರ ಪಿ.ಆರ್.ಶ್ರೀಜೇಶ್ ಅವರಿಗೆ ಪದ್ಮ ಪ್ರಶಸ್ತಿಗಳು ಸಂದಿವೆ.
ಶಾರದಾ ಸಿನ್ಹಾ ಮತ್ತು ಎಂಟಿ ಅವರಿಗೆ ಮರಣೋತ್ತರವಾಗಿ ಪದ್ಮವಿಭೂಷಣ ಪ್ರಶಸ್ತಿ ಲಭಿಸಿದೆ. ಶ್ರೀಜೇಶ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಪ್ರಕಟಿಸಲಾಗಿದೆ.
ಬಿಹಾರದ ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ, ಸುಜುಕಿ ಮೋಟಾರ್ ಕಾರ್ಪೊರೇಷನ್ ಮಾಜಿ ಅಧ್ಯಕ್ಷ ಒಸಾಮು ಸುಜುಕಿ, ಗಜಲ್ ಗಾಯಕ ಪಂಕಜ್ ಉಧಾಸ್, ಕ್ರಿಕೆಟಿಗ ಆರ್ ಅಶ್ವಿನ್ ಮತ್ತು ಗಾಯಕ ಅರಿಜಿತ್ ಸಿಂಗ್ ಅವರು ಪದ್ಮ ಪ್ರಶಸ್ತಿಗಳನ್ನು ಸ್ವೀಕರಿಸಲಿದ್ದಾರೆ.