Tihar Jail: ಕೋಣೆಯಲ್ಲಿ ಶತಪಥ ತುಳಿದ ಕೇಜ್ರಿವಾಲ್‌
x

Tihar Jail: ಕೋಣೆಯಲ್ಲಿ ಶತಪಥ ತುಳಿದ ಕೇಜ್ರಿವಾಲ್‌

ಜೈಲು ಸಂಖ್ಯೆ 2ರಲ್ಲಿ ಬಂಧನ


ಏಪ್ರಿಲ್ 1- ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ತಿಹಾರ್ ಜೈಲಿನ 14x8 ಅಡಿ ವಿಸ್ತಾರದ ಕೊಠಡಿಯಲ್ಲಿ ತಮ್ಮ ಮೊದಲ ರಾತ್ರಿಯನ್ನು ಅತ್ತಿಂದಿತ್ತ ನಡೆಯುತ್ತ ಕಳೆದರು. ಒಂದೇ ಒಂದು ನಿಮಿಷ ನಿದ್ರೆ ಮಾಡಲಿಲ್ಲ ಎಂದು ಜೈಲು ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ. ಅವರನ್ನು ಜೈಲು ಸಂಖ್ಯೆ 2 ರಲ್ಲಿ ಇರಿಸಲಾಗಿದೆ.

ದೆಹಲಿ ನ್ಯಾಯಾಲಯ ಅವರಿಗೆ ಏಪ್ರಿಲ್ 15 ರವರೆಗೆ ನ್ಯಾಯಾಂಗ ಬಂಧನ ವಿಧಿಸಿದ ಬಳಿಕ ಅವರನ್ನು ತಿಹಾರ್ ಜೈಲಿಗೆ ಕರೆದೊಯ್ಯ ಲಾಯಿತು. ಅದಕ್ಕೂ ಮುನ್ನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ಸಕ್ಕರೆ ಪ್ರಮಾಣ 50ಕ್ಕಿಂತ ಕಡಿಮೆ ಇದ್ದುದರಿಂದ, ವೈದ್ಯರ ಸಲಹೆ ಮೇರೆಗೆ ಔಷಧ ನೀಡಲಾಯಿತು ಎಂದು ಜೈಲು ಅಧಿಕಾರಿ ತಿಳಿಸಿದ್ದಾರೆ.

ಸಕ್ಕರೆ ಮಟ್ಟ ಕಡಿಮೆ, ವೈದ್ಯರ ಮೇಲ್ವಿಚಾರಣೆ: ಮುಖ್ಯಮಂತ್ರಿಗಳಿಗೆ ಮಧ್ಯಾಹ್ನ ಚಹಾ ನೀಡಲಾಯಿತು. ರಾತ್ರಿ ಮನೆ ಊಟ ನೀಡಲಾಯಿತು. ಹಾಸಿಗೆ, ಹೊದಿಕೆ ಮತ್ತು ಎರಡು ದಿಂಬು ಕೊಡಲಾಗಿದೆ. ಸ್ವಲ್ಪ ಸಮಯ ಸಿಮೆಂಟ್ ವೇದಿಕೆ ಮೇಲೆ ಮಲಗಿದ್ದ ಅವರು ತಡರಾತ್ರಿಯಲ್ಲಿ ಕೊಠಡಿಯಲ್ಲಿ ನಡೆಯುತ್ತಿದ್ದುದು ಕಂಡುಬಂತು ಎಂದು ಮೂಲಗಳು ತಿಳಿಸಿವೆ.

ಬೆಳಗ್ಗೆ ಕೇಜ್ರಿವಾಲ್ ಅವರ ಸಕ್ಕರೆ ಮಟ್ಟ ಕಡಿಮೆ ಇದ್ದುದರಿಂದ, ಜೈಲಿನ ವೈದ್ಯರ ಮೇಲ್ವಿಚಾರಣೆಯಲ್ಲಿದ್ದಾರೆ. ಮಧ್ಯಾಹ್ನ ಮತ್ತು ರಾತ್ರಿ ಮನೆಯಲ್ಲಿ ತಯಾರಿಸಿದ ಆಹಾರ ಸೇವಿಸಲು ಅವರಿಗೆ ಅನುಮತಿಸಲಾಗಿದೆ ಮತ್ತು ಅವರ ಸಕ್ಕರೆ ಮಟ್ಟ ಸಾಮಾನ್ಯ ಸ್ಥಿತಿಗೆ ಬರುವವರೆಗೆ ಪ್ರತಿದಿನ ಮನೆ ಊಟ ನೀಡಲಾಗುತ್ತದೆ ಎಂದು ಜೈಲಿನ ಅಧಿಕಾರಿ ಹೇಳಿದರು.ಮಂಗಳವಾರ ಬೆಳಗ್ಗೆ ಅವರು ತಮ್ಮ ಸೆಲ್‌ನಲ್ಲಿ ಧ್ಯಾನ ಮಾಡುತ್ತಿದ್ದರು. ಆನಂತರ ಅವರಿಗೆ ಚಹಾ ಮತ್ತು ಎರಡು ಬಿಸ್ಕತ್‌ ನೀಡಲಾಯಿತು.

3 ಪುಸ್ತಕ, ಟಿವಿ ನೋಡಲು ಅವಕಾಶ: ಪುಸ್ತಕಗಳು, ಔಷಧಗಳು ಮತ್ತು ಅವರ ಧಾರ್ಮಿಕ ಲಾಕೆಟ್ ಸೇರಿದಂತೆ ವೈಯಕ್ತಿಕ ವಸ್ತುಗಳನ್ನು ಇರಿಸಿಕೊಳ್ಳಲು ಕೇಜ್ರಿವಾಲ್ ಅವರಿಗೆ ನ್ಯಾಯಾಲಯ ಅನುಮತಿ ನೀಡಿದೆ. ಭಗವದ್ಗೀತೆ , ರಾಮಾಯಣ ಮತ್ತು ಹೌ ಪ್ರೈಮ್‌ ಮಿನಿಸ್ಟರ್ಸ್‌ ಡಿಸೈಡ್‌ ಪುಸ್ತಕವನ್ನು ಕೊಠಡಿಗೆ ತೆಗೆದುಕೊಂಡು ಹೋಗಿದ್ದಾರೆ. ಪುಸ್ತಕ ಓದು ವುದಲ್ಲದೆ, ಟಿವಿ ವೀಕ್ಷಿಸಲು ಅನುಮತಿ ನೀಡಲಾಗಿದೆ.

ಆದರೆ, ಅವರು 24 ಗಂಟೆಯೂ ಸಿಸಿಟಿವಿ ಕ್ಯಾಮೆರಾ ಮತ್ತು ಭದ್ರತಾ ಸಿಬ್ಬಂದಿಯ ಕಟ್ಟುನಿಟ್ಟು ನಿಗಾದಲ್ಲಿ ಇರುತ್ತಾರೆ. ತಿಹಾರ್ ಜೈಲಿನ ಇಬ್ಬರು ಭದ್ರತಾ ಸಿಬ್ಬಂದಿ ಮತ್ತು ಜೈಲು ವಾರ್ಡರ್ ನ್ನು ಅವರ ಸೆಲ್ ಹೊರಗೆ ನಿಯೋಜಿಸಲಾಗಿದೆ. ಅವರ ಕೋಣೆ ಬಳಿ ತ್ವರಿತ ಪ್ರತಿಕ್ರಿಯೆ ತಂಡವನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜೈಲಿನ ಮೆನು ಏನು?: ಸಕ್ಕರೆ ಮಟ್ಟ ಸ್ಥಿರವಾಗುವವರೆಗೆ ನ್ಯಾಯಾಲಯ ಮನೆ ಆಹಾರ ಸೇವನೆಗೆ ಅನುಮತಿ ನೀಡಿದೆ. ಇನ್ನಿತರ ಕೈದಿಗಳಂತೆ ಚಹಾ, ಆಹಾರ ಮತ್ತು ಟಿವಿ ಸಮಯವನ್ನು ಅನುಸರಿಸುತ್ತಾರೆ. ಕೈದಿಗಳಿಗೆ ಬೆಳಗ್ಗೆ 7 ರಿಂದ 8 ರವರೆಗೆ ಚಹಾ, ಬಿಸ್ಕೆಟ್ ಮತ್ತು ತಿಂಡಿ ನೀಡಲಾಗುತ್ತದೆ. ಮಧ್ಯಾಹ್ನ ಅನ್ನ ಅಥವಾ ಚಪಾತಿ ಜೊತೆಗೆ ಕಿಚಡಿ ಮತ್ತು ತರಕಾರಿ ಕೊಡಲಾಗುತ್ತದೆ.

ವಾರ್ಡ್‌ಗಳನ್ನು ಮಧ್ಯಾಹ್ನ 12 ರಿಂದ 3 ಗಂಟೆವರೆಗೆ ಮುಚ್ಚಲಾಗುತ್ತದೆ. ಸಂಜೆ 4 ಗಂಟೆಗೆ ಮತ್ತೆ ಚಹಾ ನೀಡಲಾಗುತ್ತದೆ. ರಾತ್ರಿ 7 ಗಂಟೆಗೆ ನೀಡುವ ಭೋಜನವು ಮಧ್ಯಾನ್ದ ಊಟದಂತೆ ಇರುತ್ತದೆ ಎಂದು ಮೂಲಗಳು ತಿಳಿಸಿವೆ.

6 ಜನರಿಗೆ ಭೇಟಿ ಅವಕಾಶ: ನಿಯಮಗಳ ಪ್ರಕಾರ, ಕೇಜ್ರಿವಾಲ್ ಅವರು ಭೇಟಿಯಾಗಲು ಬಯಸುವ ಆರು ಜನರ ಪಟ್ಟಿಯನ್ನು ನೀಡಿದ್ದಾರೆ. ಪಟ್ಟಿಯಲ್ಲಿ ಅವರ ಪತ್ನಿ ಸುನೀತಾ ಕೇಜ್ರಿವಾಲ್, ಮಗ ಮತ್ತು ಮಗಳು, ಖಾಸಗಿ ಕಾರ್ಯದರ್ಶಿ ಬಿಭವ್ ಕುಮಾರ್ ಮತ್ತು ಎಎಪಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಸಂದೀಪ್ ಪಾಠಕ್ ಇದ್ದಾರೆ. ಅವರ ಪತ್ನಿ ಮತ್ತು ಮಕ್ಕಳು ಮಂಗಳವಾರ ಅವರನ್ನು ಭೇಟಿಯಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೇಜ್ರಿವಾಲ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸುವ ಸಂದರ್ಭದಲ್ಲಿ ಅವರು ತನಿಖೆಗೆ ಅಡ್ಡಿಯಾಗಬಹುದು ಎಂಬ ಜಾರಿ ನಿರ್ದೇಶನಾಲಯದ ವಾದವನ್ನು ದೆಹಲಿ ನ್ಯಾಯಾಲಯ ಉಲ್ಲೇಖಿಸಿದೆ.

Read More
Next Story