ಭಾರತದ ಅಭಿವೃದ್ಧಿಯ ವೇಗ ಜಗತ್ತನ್ನು ಅಚ್ಚರಿಗೊಳಿಸಿದೆ: ಮೋದಿ
x

ಭಾರತದ ಅಭಿವೃದ್ಧಿಯ ವೇಗ ಜಗತ್ತನ್ನು ಅಚ್ಚರಿಗೊಳಿಸಿದೆ: ಮೋದಿ

ʻವಿಕಸಿತ ಭಾರತʼದ ಕನಸು ಕಾಣುತ್ತಿರುವ 140 ಕೋಟಿ ನಾಗರಿಕರ ಶಕ್ತಿಯನ್ನು ನಂಬಿರುವುದರಿಂದ, ಭಾರತ ಬದಲಾಗುತ್ತಿದೆ ಎಂದು ಮೋದಿ ಹೇಳಿದರು.


ʻಭಾರತ ಪರಿವರ್ತನೆಯಾಗುತ್ತಿದೆ ಮತ್ತು ಕಳೆದ 10 ವರ್ಷಗಳಲ್ಲಿ ದೇಶದ ಅಭಿವೃದ್ಧಿಯ ವೇಗವು ಜಗತ್ತನ್ನು ಆಶ್ಚರ್ಯಗೊಳಿಸಿದೆ,ʼ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ (ಜುಲೈ 9) ಮಾಸ್ಕೋದಲ್ಲಿ ಭಾರತೀಯ ವಲಸೆಗಾರರಿಗೆ ತಿಳಿಸಿದರು.

ರಷ್ಯಾದ ರಾಜಧಾನಿಯಲ್ಲಿ ಭಾರತೀಯ ವಲಸಿಗರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಭಾರತ ತನ್ನ 140 ಕೋಟಿ ನಾಗರಿಕರ ಶಕ್ತಿಯನ್ನು ನಂಬಿರುವುದರಿಂದ ಬದಲಾಗುತ್ತಿದೆ. ಈಗ ಅವರು ವಿಕಸಿತ ಭಾರತವನ್ನು ವಾಸ್ತವಕ್ಕೆ ತಿರುಗಿಸುವ ಕನಸು ಕಾಣುತ್ತಿದ್ದಾರೆ,ʼ ಎಂದು ಹೇಳಿದರು.

ಆತ್ಮವಿಶ್ವಾಸವೇ ಬಂಡವಾಳ: ʻಇಂದಿನ ಭಾರತ 2014 ರ ಹಿಂದಿನದಕ್ಕಿಂತ ಭಿನ್ನವಾಗಿದ್ದು, ಆತ್ಮವಿಶ್ವಾಸದಿಂದ ತುಂಬಿದೆ ಮತ್ತು ಇದು ನಮ್ಮ ದೊಡ್ಡ ಬಂಡವಾಳವಾಗಿದೆ. ನಿಮ್ಮಂತಹವರು ನಮ್ಮನ್ನು ಆಶೀರ್ವದಿಸಿದಾಗ, ದೊಡ್ಡ ಗುರಿಗಳನ್ನು ಕೂಡ ಸಾಧಿಸಬಹುದು. ಇಂದಿನ ಭಾರತ ನಿಗದಿಪಡಿಸಿಕೊಂಡ ಯಾವುದೇ ಗುರಿಯನ್ನು ಸಾಧಿಸಬಲ್ಲದು ಎಂಬುದು ನಿಮಗೆಲ್ಲರಿಗೂ ತಿಳಿದಿದೆ, ʼಎಂದು ಪ್ರಧಾನಿ ಹೇಳಿದರು.

ʻಎಲ್ಲ ಸವಾಲುಗಳನ್ನು ಎದುರಿಸುವುದು ಅವರ ಡಿಎನ್‌ಎಯಲ್ಲಿದೆ. ಮುಂಬರುವ ವರ್ಷಗಳಲ್ಲಿ ಭಾರತವು ಜಾಗತಿಕ ಬೆಳವಣಿಗೆಯಲ್ಲಿ ಹೊಸ ಅಧ್ಯಾಯವನ್ನು ಬರೆಯಲಿದೆ,ʼ ಎಂದು ಪ್ರಧಾನಿ ಹೇಳಿದರು.

ʻಸರಿಯಾಗಿ ಒಂದು ತಿಂಗಳ ಹಿಂದೆ ಮೂರನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದಾಗ, ದೇಶದ ನಿರೀಕ್ಷೆಗಳನ್ನು ಈಡೇರಿಸಲು ಮೂರು ಪಟ್ಟು ವೇಗವಾಗಿ ಮತ್ತು ಶಕ್ತಿಯಿಂದ ಕೆಲಸ ಮಾಡುವ ಸಂಕಲ್ಪ ಮಾಡಿದೆ,ʼ ಎಂದು ಮೋದಿ ಹೇಳಿದರು.

ಮೂರರ ಶಕ್ತಿ: ʻನಮ್ಮ ಸರ್ಕಾರ ದೇಶವನ್ನು ವಿಶ್ವದ ಮೂರನೇ ಅತಿ ದೊಡ್ಡ ಆರ್ಥಿಕತೆಯನ್ನಾಗಿ ಮಾಡುತ್ತದೆ, ಬಡವರಿಗೆ ಮೂರು ಕೋಟಿ ಮನೆಗಳನ್ನು ನಿರ್ಮಿಸುತ್ತದೆ ಮತ್ತು ಹಳ್ಳಿಗಳಲ್ಲಿ ಮೂರು ಕೋಟಿ ಬಡ ಮಹಿಳೆಯರನ್ನು ಲಕ್ಷಪತಿ ದೀದಿಗಳಾಗಿ ಪರಿವರ್ತಿಸುತ್ತದೆʼ ಎಂದು ಪ್ರಧಾನಿ ʻಮೋದಿ, ಮೋದಿʼ, ʻಮೋದಿ ಇದ್ದರೆ ಎಲ್ಲವೂ ಸಾಧ್ಯʼ ಎಂಬ ಘೋಷಣೆಗಳ ನಡುವೆ ಹೇಳಿದರು. ʻಸರ್ಕಾರದ ಹಲವಾರು ಗುರಿಗಳಲ್ಲಿ ಸಂಖ್ಯೆ ಮೂರು ಮಹತ್ವವನ್ನು ಪಡೆದುಕೊಂಡಿದೆ,ʼ ಎಂದು ಹೇಳಿದರು.

ಇದು ಕೇವಲ ಆರಂಭ: ʻಚಂದ್ರನ ಮೇಲೆ ಹಿಂದೆಂದೂ ಹೋಗದ ಸ್ಥಳಕ್ಕೆ ಸಾಧನವನ್ನು ಕಳುಹಿಸಿದ ದೇಶ ಭಾರತ ಮತ್ತು ಡಿಜಿಟಲ್ ವಹಿವಾಟಿಗೆ ಅತ್ಯಂತ ವಿಶ್ವಾಸಾರ್ಹ ಮಾದರಿಯನ್ನು ದೇಶ ನೀಡಿದೆ, ಎಂದು ಹೇಳಿದರು. ʻ10 ವರ್ಷಗಳ ಹಿಂದಿನ ಭಾರತದ ಅಭಿವೃದ್ಧಿ ಕೇವಲ ಆರಂಭವಷ್ಟೇ; ಮುಂದಿನ 10 ವರ್ಷಗಳಲ್ಲಿ ನಾವು ಹೆಚ್ಚು ವೇಗದ ಬೆಳವಣಿಗೆಯನ್ನು ಕಾಣುತ್ತೇವೆ,ʼ ಎಂದರು.

Read More
Next Story