
ಅಧಿಕಾರ ಕಳೆದುಕೊಂಡ ಆಪ್ಗೆ ಕಾನೂನು ಹೋರಾಟ, ಪಕ್ಷ ಸಂಘಟನೆಯ ಕಠಿಣ ಸವಾಲು
ದೆಹಲಿಯಲ್ಲಿ ಪಕ್ಷ ಇದುವರೆಗೆ ತೆಗೆದುಕೊಂಡಿರುವ ಪ್ರಮುಖ ನಿರ್ಧಾರಗಳೆಲ್ಲಾ ತನಿಖೆಗೆ ಒಳಗಾಗುವ ಆತಂಕ ಇದ್ದೇ ಇದೆ. ಕೇಂದ್ರದಲ್ಲೂ ಬಿಜೆಪಿ ಅಧಿಕಾರದಲ್ಲಿ ಇರುವ ಕಾರಣ ಕಾನೂನು ತೊಡಕು ನಿಶ್ಚಿತ.
ಫೆಬ್ರವರಿ 8ರಂದು (ಶನಿವಾರ) ಆಮ್ ಆದ್ಮಿ ಪಾರ್ಟಿಯ ದೆಹಲಿ ದರ್ಬಾರ್ ಕೊನೆಗೊಂಡಿದೆ. ಬಿಜೆಪಿ ಪ್ರಯತ್ನದ ಮುಂದೆ ಆಪ್ನ ಹುಂಬತನ ಮಕಾಡೆ ಮಲಗಿದೆ. ಈ ಬಾರಿ ಪಕ್ಷವು ಅಧಿಕಾರವನ್ನಷ್ಟೇ ಕಳೆದುಕೊಳ್ಳಲಿಲ್ಲ, ಮತಗಳ ಸಂಖ್ಯೆ ಮತ್ತು ಜನ ಬೆಂಬಲವನ್ನೂ ನಷ್ಟ ಮಾಡಿಕೊಂಡಿದೆ.
ಸೋಲಿನ ಸುಳಿಗೆ ಸಿಲುಕಿರುವ ಆಪ್ ಮತ್ತು ಅದರ ನಾಯಕತ್ವಕ್ಕೆ ಮುಂದಿನ ಮಾರ್ಗ ಸುರಳೀತವಾಗಿಲ್ಲ. ರಾಜ್ಯ ಸರ್ಕಾರ ಇದುವರೆಗೆ ಕೈಗೊಂಡಿರುವ ಎಲ್ಲ ನಿರ್ಧಾರಗಳನ್ನು ಪರಿಶೀಲಿಸುವುದಾಗಿ ಬಿಜೆಪಿ ಈಗಾಗಲೇ ಘೋಷಿಸಿದೆ. ಕಾನೂನಿನ ಬಿಗಿ ಹಿಡಿತ ಖಚಿತವಾಗಿದೆ.
ಆಪ್ ಸೋಲಿನ ನಡುವೆ ಆ ಪಕ್ಷದ ಪ್ರಮುಖ ನಾಯಕರೂ ಮನೆ ಸೇರುವಂತಾಗಿದೆ. ಅರವಿಂದ್ ಕೇಜ್ರಿವಾಲ್, ಮನೀಷ್ ಸಿಸೋಡಿಯಾ, ಸೌರಭ್ ಭಾರದ್ವಾಜ್ ಮತ್ತು ಸೋಮನಾಥ್ ಭಾರ್ತಿ ಸೋತಿದ್ದಾರೆ. ಪಕ್ಷದ ಪ್ರಮುಖ ಮುಖಗಳು ಸೋಲಿನ ನಿರಾಸೆಯಲ್ಲಿದೆ. ಉಳಿದವರಿಗೆ ಕಲ್ಲು-ಮುಳ್ಳಿನ ಹಾದಿ ಎದುರಾಗಿದೆ.
ಆರ್ಥಿಕ ವ್ಯವಹಾರಗಳ ತನಿಖೆಗೆ ವಿಶೇಷ ತನಿಖಾ ತಂಡ (SIT)
ಸೋತು ಕಂಗೆಟ್ಟಿರುವ ಆಪ್ ನ ಬಲ ಕುಗ್ಗಿಸಲು ಬಿಜೆಪಿ ಈಗಾಗಲೇ ರಣತಂತ್ರ ಹೆಣೆದಿದೆ. ಆಪ್ ಅಧಿಕಾರದಲ್ಲಿದ್ದಾಗ ಮಾಡಿರುವ ಹಣಕಾಸು ವ್ಯವಹಾರಗಳ ತನಿಖೆಗೆ ವಿಶೇಷ ತನಿಖಾ ತಂಡ (SIT) ರಚಿಸುವುದಾಗಿ ಪ್ರಕಟಿಸಿದೆ. ಹಲವರನ್ನು ಕೂರಿಸಿ ವಿಚಾರಣೆ ನಡೆಸುವುದಂತೂ ಖಾತರಿ.
ಚುನಾವಣಾ ಫಲಿತಾಂಶ ಅಧಿಕೃತವಾಗಿ ಪ್ರಕಟವಾಗುವ ಮುನ್ನವೇ ದೆಹಲಿ ಸರ್ಕಾರದ ಸಾಮಾನ್ಯ ಆಡಳಿತ ಇಲಾಖೆ (GAD) ಸೂಚನೆಯೊಂದನ್ನು ಹೊರಡಿಸಿದೆ. ಯಾವುದೇ ದಾಖಲೆ, ಫೈಲ್ ಅಥವಾ ಕಂಪ್ಯೂಟರ್ ಹಾರ್ಡ್‌ವೇರ್ ಅನ್ನು ಸಚಿವಾಲಯದ ಹೊರಗೆ ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ. ಸರ್ಕಾರದ ದಾಖಲೆಗಳನ್ನು ಸಂರಕ್ಷಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದೆ. ಮೇಲ್ನೋಟಕ್ಕೆ ಸರಿ. ಆದರೆ, ಬಿಜೆಪಿಯ ರಣತಂತ್ರದ ಒಂದು ಸ್ಯಾಂಪಲ್ ಇದು.
ಕೇಜ್ರಿವಾಲ್ ಮತ್ತು ಅವರ ಹತ್ತಿರವಿದ್ದ ಪ್ರಮುಖ ನಾಯಕರು ಈ ಚುನಾವಣೆಗಳಲ್ಲಿ ಸೋತಿದ್ದಾರೆ. ಸಿಎಂ ಆತಿಶಿ ಮಾತ್ರ ತಮ್ಮ ಸ್ಥಾನ ಉಳಿಸಿಕೊಂಡಿದ್ದಾರೆ. ಹೀಗಾಗಿ ಬಿಜೆಪಿ ಕೇಜ್ರಿವಾಲ್ ಅವರನ್ನು ಯಾವುದೇ ಪ್ರತಿರೋಧ ಇಲ್ಲದೆ ಗುರಿಯಾಗಿಸುವ ಸಾಧ್ಯತೆ ಹೆಚ್ಚಿದೆ. ತನಿಖೆಗಳು ಸೋತ ಹಾಗೂ ಗೆದ್ದ ಆಪ್ ನಾಯಕರಿಗೆ ತೊಂದರೆ ಉಂಟುಮಾಡುವುದು ಖಚಿತ ಎಂದು ಮಧ್ಯಪ್ರದೇಶ ಸಾಮಾಜಿಕ ವಿಜ್ಞಾನ ಸಂಶೋಧನಾ ಸಂಸ್ಥೆಯ ನಿರ್ದೇಶಕ ಯತೀಂದ್ರ ಸಿಂಗ್ ಸಿಸೋಡಿಯಾ ಅಭಿಪ್ರಾಯಪಟ್ಟಿದ್ದಾರೆ.
ವೈಯಕ್ತಿಕ ಸವಾಲುಗಳು
ಸೋಲಿನ ಜತೆಗೆ ಅದರ ಪ್ರಮುಖ ನಾಯಕರು ಕಾನೂನು ಹೋರಾಟದಲ್ಲಿ ಸಿಕ್ಕಿಹಾಕಿಕೊಂಡಿರುವುದು ಕೂಡ ಆಪ್ ಚಿಂತೆಗೆ ಕಾರಣವಾಗಿದೆ. ಕೇಜ್ರಿವಾಲ್ ಮತ್ತು ಆಪ್ತರು ಖಂಡಿತಾ ಹಿನ್ನಡೆಗೆ ಒಳಗಾಗಿದ್ದಾರೆ. ಅವರಿಬ್ಬರೂ ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿದ್ದು, ಚುನಾವಣೆಗೆ ಮುನ್ನ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.
ಭ್ರಷ್ಟಾಚಾರದ ಆರೋಪಗಳನ್ನು ಬಿಜೆಪಿಯ ರಾಜಕೀಯ ಪ್ರೇರಿತ ಆರೋಪ ಎಂದು ಆಪ್ ಹೇಳುತ್ತಿದೆ. ಆದರೆ, ಈಗ ಪಕ್ಷ ಅಧಿಕಾರದಿಂದ ಹೊರಗುಳಿದಿರುವ ಕಾರಣ, ಈ ಕಾನೂನು ಹೋರಾಟಗಳು ಸುಲಭವಲ್ಲ. ಜನರನ್ನುಒಪ್ಪಿಸುವುದಂತೂ ಕಷ್ಟದ ಮಾತು.
ಅಬಕಾರಿ ನೀತಿ ಮತ್ತು 'ಶೀಷ್ ಮಹಲ್' ವಿವಾದ
ಕೇಜ್ರಿವಾಲ್ ವಿರುದ್ಧದ ಭ್ರಷ್ಟಾಚಾರದ ಆರೋಪಗಳ ಬಗ್ಗೆ ತನಿಖೆ ನಡೆಯಬಹುದಾದ ಕಾರಣ ಆಪ್ನೊಳಗಿನ ಆತಂಕ ಹೆಚ್ಚಿದೆ. ದೆಹಲಿಯಲ್ಲೂ ಕೇಂದ್ರದಲ್ಲೂ ಬಿಜೆಪಿ ಅಧಿಕಾರದಲ್ಲಿರುವುದರಿಂದ, ಪಕ್ಷದ ಎಲ್ಲಾ ಪ್ರಮುಖ ನಿರ್ಧಾರಗಳು ಗಂಭೀರ ಪರಿಶೀಲನೆಗೆ ಒಳಗಾಗಲಿದೆ.
ಬಿಜೆಪಿ ಆಪ್ ಸರ್ಕಾರದ ಜನಪ್ರಿಯ ಯೋಜನೆಗಳ ಬಗ್ಗೆ ಒಂದು ವಿಶ್ಲೇಷಣಾತ್ಮಕ ವರದಿ ಬಿಡುಗಡೆ ಮಾಡಲಿದೆ. ರಾಜಕೀಯ ವಿಶ್ಲೇಷಕರ ಪ್ರಕಾರ, ಬಿಜೆಪಿಯು ಲೆಫ್ಟಿನೆಂಟ್ ಗವರ್ನರ್ (LG) ಕಚೇರಿಯ ಮೂಲಕ ಆಪ್ ಸರ್ಕಾರಕ್ಕೆ ನಿರಂತರ ಕಾಡಿತ್ತು. ಇದರಿಂದಾಗಿ ಆಡಳಿತ ನಡೆಸಲು ಹೆಣಗಾಡುವ ಪರಿಸ್ಥಿತಿ ಉಂಟಾಗಿತ್ತು. ಆಡಳಿತ ನಿರ್ವಹಣೆಯಲ್ಲಿ ಕೇಜ್ರಿವಾಲ್ ಸರ್ಕಾರ ನಿರಂತರವಾಗಿ ಸಮಸ್ಯೆಗಳನ್ನು ಎದುರಿಸಬೇಕಾದ್ದರಿಂದ ಜನ ವಿರೋಧಿ ಭಾವನೆ ಉಂಟಾಗಿದ್ದು ಸುಳ್ಳಲ್ಲ.
ಪಕ್ಷವನ್ನು ಒಗ್ಗೂಡಿಸುವ ಸವಾಲು
ಆಮ್ ಆದ್ಮಿ ಪಾರ್ಟಿ ದೆಹಲಿಯಲ್ಲಿ ಅಧಿಕಾರ ಕಳೆದುಕೊಂಡ ನಂತರ, ಪಕ್ಷವನ್ನು ಒಗ್ಗೂಡಿಸುವ ಕಾರ್ಯವೂ ಗಂಭೀರ ಸವಾಲಾಗಿ ಪರಿಣಮಿಸಿದೆ. ದೆಹಲಿ ಚುನಾವಣಾ ಪ್ರಚಾರ ಆರಂಭಕ್ಕೂ ಮುನ್ನ, ಸುಮಾರು 15ಕ್ಕೂ ಅಧಿಕ ನಾಯಕರು ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರು.
ರಾಜಕೀಯ ವಿಶ್ಲೇಷಕರ ಪ್ರಕಾರ, ಆಪ್ ಕಳೆದುಕೊಂಡಿರುವುದರಿಂದ, ಇನ್ನಷ್ಟು ನಾಯಕರು ಬಿಜೆಪಿಗೆ ಸೇರುವ ಸಾಧ್ಯತೆ ಇದೆ. ಈ ಹಿಂದೆ ಪಕ್ಷ ತೊರೆದು ಹೋದವರು ಈಗಾಗಲೇ ಬಿಜೆಪಿ ಸೇರಿದ್ದಾರೆ. ಆದರೆ, ಮಾಜಿ ನಾಯಕ ಕೈಲಾಶ್ ಗಹ್ಲೋಟ್ ಮುಂತಾದವರು ಇನ್ನಷ್ಟು ಆಪ್ ನಾಯಕರನ್ನು ಬಿಜೆಪಿಗೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ.
ಪಂಜಾಬ್‌ನಲ್ಲಿ ಪಕ್ಷದ ಸ್ಥಿತಿ
ಪಂಜಾಬ್ ಈಗ ಆಪ್ ಆಡಳಿತದಲ್ಲಿ ಉಳಿದ ಏಕೈಕ ರಾಜ್ಯ. ಆದರೆ, ಅಲ್ಲಿಯೂ ಪಕ್ಷದ ನಾಯಕರನ್ನು ಬಿಜೆಪಿ ಸೆಳೆಯುವ ಅಪಾಯವಿದೆ.
ಆಪ್ ಪಕ್ಷದ ಭವಿಷ್ಯ ಇದೀಗ ದೊಡ್ಡ ಅಡಕತ್ತರಿಯಲ್ಲಿ ಸಿಕ್ಕಿಕೊಂಡಂತಾಗಿದೆ. ಕೇಜ್ರಿವಾಲ್ ಮತ್ತು ಅವರ ನಾಯಕತ್ವ ಈ ಸಂಕಷ್ಟದಲ್ಲಿ ಪಕ್ಷವನ್ನು ಮತ್ತೆ ಪುನಃನಿರ್ಮಾಣ ಮಾಡಬಹುದಾ? ಅಥವಾ ಪಕ್ಷ ಇನ್ನಷ್ಟು ಕುಸಿಯುತ್ತಾ ಹೋಗುತ್ತದಾ ಎಂಬುದನ್ನು ಕೇವಲ ಮುಂದಿನ ದಿನಗಳ ಬೆಳವಣಿಗೆ ತೀರ್ಮಾನಿಸುತ್ತದೆ.