![ಅಮೆರಿಕದಿಂದ ಭಾರತೀಯರ ಗಡಿಪಾರು ವಿವಾದ; ಕೈಕೋಳ ಹಾಕಿಕೊಂಡು ಪ್ರತಿಪಕ್ಷಗಳ ನಾಯಕರ ಧರಣಿ ಅಮೆರಿಕದಿಂದ ಭಾರತೀಯರ ಗಡಿಪಾರು ವಿವಾದ; ಕೈಕೋಳ ಹಾಕಿಕೊಂಡು ಪ್ರತಿಪಕ್ಷಗಳ ನಾಯಕರ ಧರಣಿ](https://karnataka.thefederal.com/h-upload/2025/02/06/510889-parliament.webp)
ಅಮೆರಿಕದಿಂದ ಭಾರತೀಯರ ಗಡಿಪಾರು ವಿವಾದ; ಕೈಕೋಳ ಹಾಕಿಕೊಂಡು ಪ್ರತಿಪಕ್ಷಗಳ ನಾಯಕರ ಧರಣಿ
ಕಾಂಗ್ರೆಸ್ ನಾಯಕರುಗಳಾದ ಕೆ.ಸಿ. ವೇಣುಗೋಪಾಲ್ ಸೇರಿದಂತೆ ಹಲವು ಪ್ರತಿಪಕ್ಷಗಳ ಸಂಸದರು ತಮ್ಮ ತಮ್ಮ ಕೈಗಳಿಗೆ ಕೋಳಗಳನ್ನು ತೊಟ್ಟುಕೊಂಡು ಸಂಸತ್ ಹೊರಗಡೆ ಪ್ರತಿಭಟನೆ ನಡೆಸಿದ್ದಾರೆ.
ಭಾರತೀಯ ಅಕ್ರಮ ವಲಸಿಗರನ್ನು ಕೈಕೋಳ ತೊಡಿಸಿ ಅಮೆರಿಕದಿಂದ ಗಡೀಪಾರು ಮಾಡಿರುವ ವಿಚಾರ ಹಾಗೂ ಅದಕ್ಕೆ ಭಾರತ ಯಾವುದೇ ಪ್ರತಿಭಟನೆ ವ್ಯಕ್ತಪಡಿಸಿಲ್ಲ ಎಂಬುದು ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಇದೇ ವಿಷಯ ಗುರುವಾರ ಸಂಸತ್‌ನಲ್ಲಿ ಭಾರೀ ಕೋಲಾಹಲ ಉಂಟು ಮಾಡಿತು. ಭಾರತೀಯರನ್ನು ನಡೆಸಿಕೊಂಡ ರೀತಿಯನ್ನು ಖಂಡಿಸಿ ಪ್ರತಿಪಕ್ಷಗಳ ಸದಸ್ಯರು ಇಂದು ಸಂಸತ್ ಭವನದ ಆವರಣದಲ್ಲಿ "ಕೈಕೋಳ ಪ್ರತಿಭಟನೆ" ನಡೆಸಿದ್ದಾರೆ.
ಕಾಂಗ್ರೆಸ್ ನಾಯಕರುಗಳಾದ ಕೆ.ಸಿ. ವೇಣುಗೋಪಾಲ್ ಸೇರಿದಂತೆ ಹಲವು ಪ್ರತಿಪಕ್ಷಗಳ ಸಂಸದರು ತಮ್ಮ ತಮ್ಮ ಕೈಗಳಿಗೆ ಕೋಳಗಳನ್ನು ತೊಟ್ಟುಕೊಂಡು ಸಂಸತ್ ಹೊರಗಡೆ ಪ್ರತಿಭಟನೆ ನಡೆಸಿದ್ದಾರೆ. ಅಮೆರಿಕದ ಬಗ್ಗೆ ಅವರು ಆಕ್ರೋಶ ಹೊರಹಾಕಿದ್ದಾರೆ. ಈ ಎಲ್ಲ ಘಟನೆಗಳ ಹಿನ್ನೆಲೆಯಲ್ಲಿ ಇಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಅಮೆರಿಕದಿಂದ ಭಾರತೀಯರ ಗಡೀಪಾರು ಕುರಿತು ರಾಜ್ಯಸಭೆಯಲ್ಲಿ ಹೇಳಿಕೆ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಗುರುವಾರ ಸಂಸತ್‌ನಲ್ಲಿ ಕಲಾಪಗಳು ಆರಂಭವಾದೊಡನೆ ಪ್ರತಿಪಕ್ಷಗಳ ಸಂಸದರು 104 ಭಾರತೀಯರ ಗಡೀಪಾರು ಕುರಿತು ಚರ್ಚೆಯಾಗಬೇಕೆಂದು ಪಟ್ಟು ಹಿಡಿದರು. ಲೋಕಸಭೆಯಲ್ಲೂ ವಿಪಕ್ಷಗಳ ಸಂಸದರು ಘಟನೆ ವಿರುದ್ಧ ಘೋಷಣೆಗಳನ್ನು ಕೂಗುತ್ತಾ, ಸದನದ ಬಾವಿಗೆ ನುಗ್ಗಿ ಪ್ರತಿಭಟಿಸಲಾರಂಭಿಸಿದರು.
"ಇದು ವಿದೇಶಾಂಗ ಸಚಿವಾಲಯಕ್ಕೆ ಸಂಬಂಧಿಸಿದ ವಿಚಾರ. ಅಲ್ಲದೆ ಇದು ಬೇರೊಂದು ದೇಶಕ್ಕೆ ಸಂಬಂಧಿಸಿದ ವಿಷಯ. ಸರ್ಕಾರ ಈ ಬಗ್ಗೆ ಗಮನ ಹರಿಸಲಿದೆ" ಎಂದು ಸ್ಪೀಕರ್ ಓಂ ಬಿರ್ಲಾ ಸಮಜಾಯಿಷಿ ನೀಡಿದರು. ಆದರೆ, ಸದಸ್ಯರ ಗದ್ದಲ ಮುಂದುವರಿದ ಕಾರಣ, ಕಲಾಪವನ್ನು ಕೆಲವು ಗಂಟೆಗಳ ಕಾಲ ಮುಂದೂಡಲಾಯಿತು.
ಗಲಾಟೆಗೂ ಮೊದಲು , ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್ ಅವರು ಈ ವಿಚಾರದ ಕುರಿತು ಚರ್ಚೆಗೆ ಆಗ್ರಹಿಸಿ ನಿಲುವಳಿ ಸೂಚನೆ ಮಂಡಿಸಿದ್ದರು. ಡೊನಾಲ್ಡ್ ಟ್ರಂಪ್ ಆಡಳಿತದೊಂದಿಗೆ ಮಾತುಕತೆ ನಡೆಸಲು ಕೇಂದ್ರ ಸರ್ಕಾರ ಏನೇನು ರಾಜತಾಂತ್ರಿಕ ಕ್ರಮಗಳನ್ನು ಕೈಗೊಂಡಿದೆ ಎಂಬುದನ್ನು ವಿವರಿಸಬೇಕು ಎಂದು ಕೋರಿದರು.