
ಆಪರೇಷನ್ ಸಿಂದೂರ್' ಮುಂದುವರಿದಿದೆ, ಊಹಾಪೋಹಗಳಿಗೆ ಕಿವಿಗೊಡಬೇಡಿ: ಭಾರತೀಯ ವಾಯುಪಡೆ
ಕಾರ್ಯಾಚರಣೆ ಮುಂದುವರಿಯುತ್ತಿರುವ ಕಾರಣ, ಅದರ ವಿವರವಾದ ಮಾಹಿತಿಯನ್ನು ಸೂಕ್ತ ಸಮಯದಲ್ಲಿ ಸಂಪೂರ್ಣ ವಿವರಣ ಮೂಲಕ ಮಾಧ್ಯಮಗಳಿಗೆ ಮತ್ತು ಸಾರ್ವಜನಿಕರಿಗೆ ನೀಡಲಾಗುವುದು ಎಂದು ವಾಯುಪಡೆ ತಿಳಿಸಿದೆ
ಭಾರತೀಯ ವಾಯುಪಡೆಯು ಭಾನುವಾರ ಮಹತ್ವದ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ತನ್ನ "ಆಪರೇಷನ್ ಸಿಂದೂರ್" ಕಾರ್ಯಾಚರಣೆಯನ್ನು ನಿಖರತೆ, ಪರಿಣತಿ ಮತ್ತು ರಾಷ್ಟ್ರೀಯ ಉದ್ದೇಶಗಳಿಗೆ ಅನುಗುಣವಾಗಿ ಯಶಸ್ವಿಯಾಗಿ ಕಾರ್ಯಗತಗೊಳಿಸಲಾಗಿದೆ ಎಂದು ಹೇಳಿದೆ. ಇದೇ ವೇಳೆ ಈ ಕಾರ್ಯಾಚರಣೆ ಇನ್ನೂ ಚಾಲ್ತಿಯಲ್ಲಿದ್ದು, ಯಾವುದೇ ಊಹಾಪೋಹಗಳು ಅಗತ್ಯವಿಲ್ಲ ಎಂದು ವಾಯುಪಡೆ ಸ್ಪಷ್ಟಪಡಿಸಿದೆ.
ಪಹಲ್ಗಾಂನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಮೇ 7ರಂದು "ಆಪರೇಷನ್ ಸಿಂದೂರ್" ಆರಂಭಿಸಲಾಯಿತು. ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಏಳು ಭಯೋತ್ಪಾದಕ ಮೂಲಸೌಕರ್ಯಗಳನ್ನು ಧ್ವಂಸಗೊಳಿಸುವುದು ಈ ಕಾರ್ಯಾಚರಣೆಯ ಪ್ರಾಥಮಿಕ ಗುರಿಯಾಗಿತ್ತು. ಪಾಕಿಸ್ತಾನದ ಆಕ್ರಮಣಕಾರಿ ಕ್ರಮಗಳಿಗೆ ನಂತರ ವಾಯುಪಡೆ ಕೈಗೊಂಡ ಎಲ್ಲಾ ಪ್ರತೀಕಾರದ ಕಾರ್ಯಾಚರಣೆಗಳನ್ನು ಸಹ "ಆಪರೇಷನ್ ಸಿಂದೂರ್" ಅಡಿಯಲ್ಲಿ ನಡೆಸಲಾಗಿದೆ ಎಂದು ವಾಯುಪಡೆ ವಿವರಿಸಿದೆ.
ಕಾರ್ಯಾಚರಣೆ ಮುಂದುವರಿಯುತ್ತಿರುವ ಕಾರಣ, ಅದರ ವಿವರವಾದ ಮಾಹಿತಿಯನ್ನು ಸೂಕ್ತ ಸಮಯದಲ್ಲಿ ಸಂಪೂರ್ಣ ವಿವರಣ ಮೂಲಕ ಮಾಧ್ಯಮಗಳಿಗೆ ಮತ್ತು ಸಾರ್ವಜನಿಕರಿಗೆ ನೀಡಲಾಗುವುದು ಎಂದು ವಾಯುಪಡೆ ತಿಳಿಸಿದೆ. ಅಲ್ಲಿಯವರೆಗೆ, ಕಾರ್ಯಾಚರಣೆಯ ಕುರಿತು ಯಾವುದೇ ರೀತಿಯ ಊಹಾಪೋಹಗಳಿಂದ ದೂರವಿರುವಂತೆ ಮತ್ತು ಪರಿಶೀಲಿಸದ ಮಾಹಿತಿಯನ್ನು ಹಂಚಿಕೊಳ್ಳದಂತೆ ಭಾರತೀಯ ವಾಯುಪಡೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.
"ಈ ಕಾರ್ಯಾಚರಣೆಯನ್ನು ಪರಿಣತಿಯೊಂದಿಗೆ ಮತ್ತು ಅತ್ಯಂತ ವೃತ್ತಿಪರತೆಯೊಂದಿಗೆ ಯಶಸ್ವಿಯಾಗಿ ನಿರ್ವಹಿಸಲಾಗಿದೆ" ಎಂದು ವಾಯುಪಡೆ ದೃಢಪಡಿಸಿದೆ. ಈ ಕಾರ್ಯಾಚರಣೆಗಳು ಉದ್ದೇಶಪೂರ್ವಕವಾಗಿ, ವಿವೇಚನಾಯುಕ್ತವಾಗಿ ಮತ್ತು ರಾಷ್ಟ್ರೀಯ ಉದ್ದೇಶಗಳೊಂದಿಗೆ ಸಂಪೂರ್ಣವಾಗಿ ಹೊಂದಿಕೆಯಾಗುವ ರೀತಿಯಲ್ಲಿ ನಡೆಸಲ್ಪಟ್ಟಿವೆ ಎಂದು ವಾಯುಪಡೆ ಹೇಳಿದೆ.
ಶನಿವಾರ, ಮೇ 10 ರಂದು ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳು ಭೂಮಿ, ವಾಯು ಮತ್ತು ಸಾಗರದ ಮೂಲಕ ಗುಂಡಿನ ದಾಳಿ ಮತ್ತು ಸೈನಿಕ ಕಾರ್ಯಾಚರಣೆಗಳನ್ನು ತಕ್ಷಣದಿಂದ ಸ್ಥಗಿತಗೊಳಿಸಲು ಒಪ್ಪಂದ ಮಾಡಿಕೊಂಡಿವೆ. ಆದಾಗ್ಯೂ, ಶನಿವಾರ ರಾತ್ರಿ ಪಾಕಿಸ್ತಾನವು ಈ ಕದನ ವಿರಾಮ ಉಲ್ಲಂಘಿಸಿದೆ ಎಂದು ಭಾರತ ಆರೋಪಿಸಿತ್ತು, ಆದರೂ ನಂತರ ಯಾವುದೇ ದೊಡ್ಡ ಪ್ರಮಾಣದ ಶೆಲ್ ಅಥವಾ ಡ್ರೋನ್ ದಾಳಿಗಳು ವರದಿಯಾಗಿಲ್ಲ. ಈ ಕದನ ವಿರಾಮದ ನಡುವೆಯೂ "ಆಪರೇಷನ್ ಸಿಂದೂರ್" ಕಾರ್ಯಾಚರಣೆಯ ಮುಂದುವರಿಕೆಯ ಕುರಿತು ವಾಯುಪಡೆಯ ಸ್ಪಷ್ಟನೆ ಮಹತ್ವ ಪಡೆದಿದೆ.