Operation Sindoor: Priyanka Gandhi questions the Centres accountability
x

ಸಂಸತ್‌ ಅಧಿವೇಶನದಲ್ಲಿ ಪ್ರಿಯಾಂಕ ಗಾಂಧಿ ಮಾತನಾಡಿದರು.

ಆಪರೇಷನ್​ ಸಿಂದೂರ್​ : ಕೇಂದ್ರದ ಹೊಣೆಗಾರಿಕೆ ಪ್ರಶ್ನಿಸಿದ ಪ್ರಿಯಾಂಕಾ ಗಾಂಧಿ

"ಪಹಲ್ಗಾಮ್ ದಾಳಿ ಹೇಗೆ ಮತ್ತು ಏಕೆ ನಡೆಯಿತು ಎಂಬುದನ್ನು ವಿವರಿಸುವ ಬದಲು, ರಕ್ಷಣಾ ಸಚಿವರು ಮತ್ತು ಗೃಹ ಸಚಿವರು ಕಾಂಗ್ರೆಸ್ ಇತಿಹಾಸವನ್ನು ದೂಷಿಸುವುದರಲ್ಲೇ ನಿರತರಾಗಿದ್ದಾರೆ," ಎಂದು ಪ್ರಿಯಾಂಕಾ ಟೀಕಿಸಿದರು.


'ಆಪರೇಷನ್ ಸಿಂದೂರ್' ಕುರಿತು ಲೋಕಸಭೆಯಲ್ಲಿ ನಡೆದ ಚರ್ಚೆಯಲ್ಲಿ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಅವರು, ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಹೊಣೆಗಾರಿಕೆಯನ್ನು ತೀವ್ರವಾಗಿ ಪ್ರಶ್ನಿಸಿದ್ದಾರೆ. ಗುಪ್ತಚರ ವೈಫಲ್ಯ, ವಿಳಂಬ ಕ್ರಮಗಳು ಮತ್ತು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವ ಸರ್ಕಾರದ ಧೋರಣೆಯ ವಿರುದ್ಧ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ತಮ್ಮ ಭಾಷಣದ ಆರಂಭದಲ್ಲಿ ಭಾರತೀಯ ಸಶಸ್ತ್ರ ಪಡೆಗಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಪ್ರಿಯಾಂಕಾ, ನಂತರ ಸರ್ಕಾರದ ವೈಫಲ್ಯಗಳನ್ನು ಒಂದೊಂದಾಗಿ ಪಟ್ಟಿ ಮಾಡಿದರು. "ಪಹಲ್ಗಾಮ್ ದಾಳಿ ಹೇಗೆ ಮತ್ತು ಏಕೆ ನಡೆಯಿತು ಎಂಬುದನ್ನು ವಿವರಿಸುವ ಬದಲು, ರಕ್ಷಣಾ ಸಚಿವರು ಮತ್ತು ಗೃಹ ಸಚಿವರು ಕಾಂಗ್ರೆಸ್ ಇತಿಹಾಸವನ್ನು ದೂಷಿಸುವುದರಲ್ಲೇ ನಿರತರಾಗಿದ್ದಾರೆ," ಎಂದು ಪ್ರಿಯಾಂಕಾ ಟೀಕಿಸಿದರು.

"ಬೈಸರನ್ ಕಣಿವೆಯಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ನಡೆದ ದಾಳಿಯಲ್ಲಿ 26 ನಾಗರಿಕರನ್ನು ಹತ್ಯೆ ಮಾಡಲಾಯಿತು. ಆ ಸಮಯದಲ್ಲಿ ಅಲ್ಲಿ ಯಾವುದೇ ಭದ್ರತಾ ಸಿಬ್ಬಂದಿ ಇರಲಿಲ್ಲ. ಪ್ರವಾಸೋದ್ಯಮವನ್ನು ಉತ್ತೇಜಿಸುವ ಸರ್ಕಾರಕ್ಕೆ ಜನರ ಸುರಕ್ಷತೆಯ ಬಗ್ಗೆ ಕಾಳಜಿ ಇರಲಿಲ್ಲವೇ?" ಎಂದು ಅವರು ಪ್ರಶ್ನಿಸಿದರು.

"ದಾಳಿಗೆ ಎರಡು ವಾರಗಳ ಮೊದಲು, ಗೃಹ ಸಚಿವರು ಜಮ್ಮು ಮತ್ತು ಕಾಶ್ಮೀರವನ್ನು ಭಯೋತ್ಪಾದಕ ಮುಕ್ತ ಎಂದು ಘೋಷಿಸಿದ್ದರು. ದಾಳಿಯ ಮೂರು ತಿಂಗಳ ನಂತರ, ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಅವರು 'ಗುಪ್ತಚರ ವೈಫಲ್ಯ' ಆಗಿತ್ತು ಎಂದು ಸಹಜವಾಗಿ ಹೇಳಿದರು. ಆದರೂ, ಯಾರ ಮೇಲೂ ಕ್ರಮ ಕೈಗೊಂಡಿಲ್ಲ, ಯಾರೊಬ್ಬರ ಹೊಣೆಗಾರಿಕೆಯನ್ನೂ ನಿಗದಿಪಡಿಸಿಲ್ಲ," ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. 2008ರ ಮುಂಬೈ ದಾಳಿಯ ನಂತರ ಮಹಾರಾಷ್ಟ್ರದ ಮುಖ್ಯಮಂತ್ರಿ ಮತ್ತು ಕೇಂದ್ರ ಗೃಹ ಸಚಿವರು ಜವಾಬ್ದಾರಿ ಹೊತ್ತು ರಾಜೀನಾಮೆ ನೀಡಿದ್ದನ್ನು ಸ್ಮರಿಸಿದ ಅವರು, "ಪಹಲ್ಗಾಮ್ ದಾಳಿಯ ನಂತರ ಯಾರಾದರೂ ರಾಜೀನಾಮೆ ನೀಡಿದ್ದಾರೆಯೇ? ನಿಮ್ಮ ಕಣ್ಮುಂದೆಯೇ ಮಣಿಪುರ ಹೊತ್ತಿ ಉರಿಯಿತು, ಆದರೆ ನಿಮ್ಮಲ್ಲಿ ಯಾರೊಬ್ಬರೂ ಜವಾಬ್ದಾರಿ ಹೊರಲಿಲ್ಲ," ಎಂದು ಕುಟುಕಿದರು.

ಪ್ರಧಾನಿ ಮೋದಿಯವರನ್ನು ಉದ್ದೇಶಿಸಿ ಮಾತನಾಡಿದ ಅವರು, "ಪ್ರಧಾನಿಯವರು ಎಲ್ಲಾ ವಿಷಯಗಳಿಗೂ ಕೀರ್ತಿ ತೆಗೆದುಕೊಳ್ಳುತ್ತಾರೆ. ದಯವಿಟ್ಟು ತೆಗೆದುಕೊಳ್ಳಿ, ಆದರೆ ಕೀರ್ತಿ ಪಡೆದರೆ ಸಾಲದು, ಜವಾಬ್ದಾರಿಯನ್ನೂ ಹೊರಬೇಕು. ನೀವು ಧರಿಸಿರುವ ಕಿರೀಟ ಚಿನ್ನದ್ದಲ್ಲ, ಮುಳ್ಳಿನದ್ದು," ಎಂದು ಹೇಳಿದರು.

"ಈ ಸದನದಲ್ಲಿರುವ ಪ್ರತಿಯೊಬ್ಬರಿಗೂ ವೈಯಕ್ತಿಕ ಭದ್ರತೆ ಇದೆ. ಆದರೆ ಅಂದು ಪಹಲ್ಗಾಮ್ನಲ್ಲಿ 26 ಜನರನ್ನು ಅವರ ಕುಟುಂಬಸ್ಥರ ಮುಂದೆಯೇ ಹತ್ಯೆ ಮಾಡಲಾಯಿತು. ನೀವು ಅವರಿಗೆ ಯಾವುದೇ ಭದ್ರತೆ ನೀಡಿರಲಿಲ್ಲ ಮತ್ತು ನಿಮಗೆ ನಾಚಿಕೆಯೂ ಇಲ್ಲ," ಎಂದು ಹೇಳಿದ ಪ್ರಿಯಾಂಕಾ, ದಾಳಿಯಲ್ಲಿ ಮೃತಪಟ್ಟ 25 ಭಾರತೀಯ ನಾಗರಿಕರ ಹೆಸರುಗಳನ್ನು ಓದುವ ಮೂಲಕ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

Read More
Next Story