LIVE Operation Sindoor | ಸಶಸ್ತ್ರ ಪಡೆಗಳ ಶೌರ್ಯಕ್ಕೆ ನನ್ನ ಸಲಾಂ: ರಾಷ್ಟ್ರವನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ
x

Operation Sindoor | ಸಶಸ್ತ್ರ ಪಡೆಗಳ ಶೌರ್ಯಕ್ಕೆ ನನ್ನ ಸಲಾಂ: ರಾಷ್ಟ್ರವನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ

ಭಾರತದ ದಾಳಿಗೆ ಹೆದರಿದ ಪಾಕಿಸ್ತಾನ ಕದನ ವಿರಾಮ ಘೋಷಣೆಗೆ ಅಮೆರಿಕಕ್ಕೆ ಮನವಿ ಮಾಡಿತು. ಮಧ್ಯಪ್ರವೇಶಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಉಭಯ ದೇಶಗಳ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿ, ಕದನ ವಿರಾಮಕ್ಕೆ ಎರಡೂ ರಾಷ್ಟ್ರಗಳು ಒಪ್ಪಿಕೊಂಡಿವೆ ಎಂದು ಘೋಷಿಸಿದ್ದರು.


ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೋಮವಾರ ರಾತ್ರಿ 8 ಗಂಟೆಗೆ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿದರು. 'ಆಪರೇಷನ್ ಸಿಂದೂರ್' ಆರಂಭವಾದ ನಂತರ ಪ್ರಧಾನಿಯವರ ಇದು ಮೊದಲ ಭಾಷಣವಾಗಿದೆ.

ಭಾರತ ಮತ್ತು ಪಾಕಿಸ್ತಾನದ ನಡುವೆ ನೆಲ, ವಾಯು ಮತ್ತು ಸಮುದ್ರದಲ್ಲಿ ಎಲ್ಲಾ ಗುಂಡಿನ ದಾಳಿಗಳು ಮತ್ತು ಸೈನಿಕ ಕಾರ್ಯಾಚರಣೆಗಳನ್ನು ತಕ್ಷಣದಿಂದ ನಿಲ್ಲಿಸಲು ಒಪ್ಪಂದಕ್ಕೆ ತಲುಪಿದ ಎರಡು ದಿನಗಳ ನಂತರ ಈ ಭಾಷಣ ಮಾಡಿದ್ದಾರೆ. ಇತ್ತೀಚೆಗೆ ನಡೆದ 'ಆಪರೇಷನ್ ಸಿಂದೂರ್' ಕಾರ್ಯಾಚರಣೆಯ ಸಂದರ್ಭದಲ್ಲಿ ದೇಶದ ರಕ್ಷಣಾ ಪಡೆಗಳು ತೋರಿದ ಶೌರ್ಯ ಮತ್ತು ಬದ್ಧತೆಯನ್ನು ಪ್ರಧಾನಿ ಮೋದಿ ಅವರು ತಮ್ಮ ಭಾಷಣದಲ್ಲಿ ಕೊಂಡಾಡಿದರು. ಸಶಸ್ತ್ರ ಪಡೆಗಳ ಶೌರ್ಯಕ್ಕೆ ಅವರು ಸಲಾಂ ಹೇಳಿದರು.

ಈ ಮೊದಲು, ಭಾರತವು ತನ್ನ ಎಲ್ಲಾ ಮಿಲಿಟರಿ ನೆಲೆಗಳು ಮತ್ತು ವ್ಯವಸ್ಥೆಗಳು ಸಂಪೂರ್ಣವಾಗಿ ಕಾರ್ಯನಿರತವಾಗಿವೆ ಮತ್ತು ಅಗತ್ಯವಿದ್ದರೆ ಯಾವುದೇ ಕಾರ್ಯಾಚರಣೆಯನ್ನು ಕೈಗೊಳ್ಳಲು ಸಿದ್ಧವಾಗಿವೆ ಎಂದು ಹೇಳಿಕೆ ನೀಡಿತ್ತು. ಪ್ರಧಾನಿಯವರ ಭಾಷಣವು ದೇಶದ ಭದ್ರತಾ ಸ್ಥಿತಿ ಮತ್ತು ಸಶಸ್ತ್ರ ಪಡೆಗಳ ಸನ್ನದ್ಧತೆಯ ಬಗ್ಗೆ ದೇಶವಾಸಿಗಳಿಗೆ ಮಾಹಿತಿ ನೀಡುವ ಉದ್ದೇಶ ಹೊಂದಿತ್ತು.

ಕಾಶ್ಮೀರದ ಪಹಲ್ಗಾಮ್‌ನಲ್ಲಿ ಏ.22 ರಂದು ಪ್ರವಾಸಿಗರ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದರು. ಇದಕ್ಕೆ ಪ್ರತೀಕಾರವಾಗಿ ಭಾರತ ಮೇ 7 ರಂದು ಪಾಕ್‌ ಆಕ್ರಮಿತ ಕಾಶ್ಮೀರ ಹಾಗೂ ಪಾಕಿಸ್ತಾನದಲ್ಲಿನ ಭಯೋತ್ಪಾದಕರ ಅಡಗುದಾಣಗಳ ಮೇಲೆ ದಾಳಿ ನಡೆಸಿ, ನಾಶಪಡಿಸಿತ್ತು.

ಭಾರತದ ಈ ದಾಳಿಗೆ ಪ್ರತಿಯಾಗಿ ಪಾಕಿಸ್ತಾನ ಸೇನೆ ಜಮ್ಮು ಕಾಶ್ಮೀರ, ರಾಜಸ್ತಾನ, ಪಂಜಾಬ್‌ ಗಡಿಯುದ್ದಕ್ಕೂ ಅಪ್ರಚೋದಿತ ಗುಂಡಿನ ದಾಳಿ ನಡೆಸಿತ್ತು. ಭಾರತದ ಸೇನಾ ನೆಲೆಗಳನ್ನು ಗುರಿಯಾಗಿಸಿ ಕ್ಷಿಪಣಿ ಹಾಗೂ ಡ್ರೋನ್ ದಾಳಿ ನಡೆಸಿತ್ತು. ಭಾರತದ ವಾಯು ರಕ್ಷಣಾ ವ್ಯವಸ್ಥೆಯು ಪಾಕಿಸ್ತಾನದ ಡ್ರೋನ್‌ ಗಳನ್ನು ಹೊಡೆದು ಹಾಕಿತ್ತು. ಪಾಕಿಸ್ತಾನದ ಅಪ್ರಚೋದಿತ ದಾಳಿಗೆ ಪ್ರತಿದಾಳಿ ನಡೆಸಿದ್ದ ಭಾರತೀಯ ಸೇನೆ ಪಾಕಿಸ್ತಾನದ ವಾಯುನೆಲೆಗಳನ್ನು ಗುರಿಯಾಗಿಸಿ ಕ್ಷಿಪಣಿ ದಾಳಿ ನಡೆಸಿತ್ತು. ಪಾಕಿಸ್ತಾನದ ಒಟ್ಟು 9 ವಾಯುನೆಲೆಗಳಿಗೆ ಹಾನಿಯಾಗಿತ್ತು.

ಭಾರತದ ದಾಳಿಗೆ ಹೆದರಿದ ಪಾಕಿಸ್ತಾನ ಕೂಡಲೇ ಕದನ ವಿರಾಮ ಘೋಷಣೆಗೆ ಅಮೆರಿಕಕ್ಕೆ ಮನವಿ ಮಾಡಿತು. ಮಧ್ಯಪ್ರವೇಶಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಉಭಯ ದೇಶಗಳ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿ, ಕದನ ವಿರಾಮಕ್ಕೆ ಎರಡೂ ರಾಷ್ಟ್ರಗಳು ಒಪ್ಪಿಕೊಂಡಿವೆ ಎಂದು ಘೋಷಿಸಿದ್ದರು. ಅಲ್ಲದೇ ಮೇ 12 ರಂದು ಎರಡೂ ದೇಶಗಳ ಡಿಜಿಎಂಒ ಮಟ್ಟದ ಮಾತುಕತೆ ನಡೆಯಲಿದೆ ಎಂದು ಹೇಳಿದ್ದರು.

ಕದನ ವಿರಾಮ ಘೋಷಣೆ ನಂತರವೂ ಪಾಕಿಸ್ತಾನ ಸೇನೆ ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿತ್ತು. ಒನ್ನೊಮ್ಮೆ ಕದನ ವಿರಾಮ ಉಲ್ಲಂಘಿಸಿದರೆ ತಕ್ಕ ಪಾಠ ಕಲಿಸುತ್ತೇವೆ ಎಂದು ಭಾರತ ಎಚ್ಚರಿಕೆ ನೀಡಿದ ಕೂಡಲೇ ಗುಂಡಿನ ದಾಳಿ ನಿಲ್ಲಿಸಿತ್ತು. ಸದ್ಯ ಜಮ್ಮು ಕಾಶ್ಮೀರ ಹಾಗೂ ಇತರೆ ರಾಜ್ಯಗಳ ಗಡಿಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ ಎಂದು ಭಾರತೀಯ ಸೇನೆ ಹೇಳಿದೆ.

ಉಗ್ರರ ಹಸ್ತಾಂತರಕ್ಕೆ ಪಟ್ಟು

ಪಹಲ್ಗಾಮ್‌ ದಾಳಿಗೆ ಕಾರಣರಾದ ಉಗ್ರರನ್ನು ಹಸ್ತಾಂತರ ಮಾಡುವಂತೆ ಭಾರತವು ಡಿಜಿಎಂಒ ಮಾತುಕತೆ ವೇಳೆ ಪಟ್ಟು ಹಿಡಿಯಲಿದೆ ಎಂದು ಮೂಲಗಳು ತಿಳಿಸಿವೆ. ಪಾಕಿಸ್ತಾನದ ನೆಲೆದಿಂದ ಯಾವುದೇ ಭಯೋತ್ಪಾದಕ ಚಟುವಟಿಕೆಗಳಿಗೆ ಪ್ರಚೋದನೆ, ಪ್ರೋತ್ಸಾಹ ನೀಡಬಾರದು. ಈ ಎಲ್ಲಾ ಷರತ್ತುಗಳನ್ನು ಒಪ್ಪಿಕೊಂಡರೆ ಮಾತ್ರ ಕದನ ವಿರಾಮ ಪಾಲಿಸಲಿದೆ ಎಂದು ಹೇಳಲಾಗಿದೆ.

Live Updates

Read More
Next Story