
ಎನ್.ಗೋಪಾಲಸ್ವಾಮಿ
ಆಳಂದ ಮತಗಳವು ಯತ್ನ| ಕೈಬಿಟ್ಟಿದ್ದು ಕೇವಲ 24 ಮತದಾರರ ಹೆಸರು, 6000 ಅಲ್ಲ : ಮಾಜಿ ಆಯುಕ್ತ ಗೋಪಾಲಸ್ವಾಮಿ
ಅರ್ಜಿಯನ್ನು ಮತಗಟ್ಟೆ ಅಧಿಕಾರಿ (ಬಿಎಲ್ಒ) ಮೊದಲು ಸ್ವೀಕರಿಸುತ್ತಾರೆ. ಆ ಬಳಿಕ ಅರ್ಜಿದಾರರು ತಮಗೆ ಪರಿಚಿತರಿದ್ದಾರೆಯೇ, ಅವರು ಅಲ್ಲಿ ವಾಸಿಸುತ್ತಿದ್ದಾರೆಯೇ, ಇಲ್ಲವೇ ಎಂದು ಪರಿಶೀಲಿಸುತ್ತಾರೆ. ಒಂದು ವೇಳೆ ಅರ್ಜಿ ಸರಿಯಾಗಿಲ್ಲ ಎಂದಾದಲ್ಲಿ ಮೇಲಧಿಕಾರಿ ಗಮನಕ್ಕೆ ತರುತ್ತಾರೆ.
ಕಲಬುರಗಿಯ ಆಳಂದ ಕ್ಷೇತ್ರದಲ್ಲಿ ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಡಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪೊಲೀಸರು ನಡೆಸುತ್ತಿರುವ ತನಿಖೆಗೆ ಚುನಾವಣಾ ಆಯೋಗವು ಸಂಪೂರ್ಣ ಸಹಕಾರ ನೀಡುತ್ತಿದೆ ಎಂದು ಕೇಂದ್ರ ಚುನಾವಣಾ ಆಯೋಗದ ಮಾಜಿ ಮುಖ್ಯ ಆಯುಕ್ತ ಎನ್.ಗೋಪಾಲಸ್ವಾಮಿ ಹೇಳಿದ್ದಾರೆ.
ʼದಿ ಫೆಡರಲ್ʼಗೆ ಸಂದರ್ಶನ ನೀಡಿದ ಅವರು, ಮತದಾನದ ಹಕ್ಕು ರದ್ದುಪಡಿಸುವ ಕುರಿತು ಆನ್‌ಲೈನ್ ಮೂಲಕ ಮನವಿಗಳು ಬಂದರೆ ಅವುಗಳನ್ನು ಅತಿ ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತದೆ. ಒನ್ ಟೈಮ್ ಪಾಸ್‌ವರ್ಡ್(ಒಟಿಪಿ) ಯಾವುದೇ ಹೇಳಿಕೆಗಳಿಗೆ ಸಂಬಂಧಿಸಿರುವುದಿಲ್ಲ ಎಂದು ಹೇಳುವ ಮೂಲಕ ಮತದಾರರ ಪಟ್ಟಿಯಲ್ಲಿನ ಕಟ್ಟುನಿಟ್ಟಿನ ಕ್ರಮಗಳನ್ನು ಸಮರ್ಥಿಸಿಕೊಂಡಿದ್ದಾರೆ.
ರಾಜಕೀಯ ಪ್ರೇರಿತ ಆರೋಪಗಳು ಪ್ರಜಾಪ್ರಭುತ್ವ ಸಂಸ್ಥೆಗಳ ಮೇಲೆ ಸಾರ್ವಜನಿಕರು ಇರಿಸಿರುವ ನಂಬಿಕೆಯನ್ನು ದುರ್ಬಲಗೊಳಿಸುವ ಅಪಾಯವಿದೆ ಎಂದೂ ಎಚ್ಚರಿಸಿದ್ದಾರೆ.
ಕರ್ನಾಟಕದ ಆಳಂದ ಕ್ಷೇತ್ರದಲ್ಲಿ ಸ್ವಯಂಚಾಲಿತ ಸಾಫ್ಟ್‌ವೇರ್ ಬಳಸಿ ಮತದಾರರನ್ನು ವ್ಯವಸ್ಥಿತವಾಗಿ ಅಳಿಸಲಾಗಿದೆ ಎಂಬುದಕ್ಕೆ ಶೇ.100ರಷ್ಟು ಕಪ್ಪು-ಬಿಳುಪು ಪುರಾವೆಗಳಿವೆ. ಮತದಾರರ ಪಟ್ಟಿಯಲ್ಲಿ ಇಷ್ಟು ದೊಡ್ಡ ಪ್ರಮಾಣದ ಬದಲಾವಣೆಯಾಗಲು ಹೇಗೆ ಸಾಧ್ಯ ಎಂದು ವಿಪಕ್ಷ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿದ್ದರು.
ರಾಹುಲ್ ಗಾಂಧಿ ಆರೋಪಕ್ಕೆ ಪ್ರತಿಕ್ರಿಯಿಸಿರುವ ಆಯುಕ್ತರು, ನಾನು ಹೇಳಲು ಬಯಸುವ ಮೊದಲ ಅಂಶವೆಂದರೆ ದೊಡ್ಡ ಪ್ರಮಾಣದಲ್ಲಿ ಮತದಾರರ ಹೆಸರನ್ನು ಅಳಿಸಿಹಾಕಲಾಗಿದೆ ಎಂಬುದು ಸುಳ್ಳು. ಮತದಾರರ ಪಟ್ಟಿಯಿಂದ ತಮ್ಮ ಹೆಸರು ಕೈಬಿಡಬೇಕೆಂದು ಒಟ್ಟು 6,015 ಮಂದಿ ಅರ್ಜಿ ಸಲ್ಲಿಸಿದ್ದರು. ಆದರೆ, ಈ ಪೈಕಿ ಕೇವಲ 24 ಮಂದಿಯ ಹೆಸರನ್ನು ಮಾತ್ರವೇ ಕೈಬಿಡಲಾಗಿದೆ ಎಂದು ಹೇಳಿದ್ದಾರೆ.
ಮತದಾರರ ಅನುಕೂಲಕ್ಕಾಗಿ ಆಯೋಗವು ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಿದೆ. ಮತದಾರರು ಮೂರು ರೀತಿಯ ಕಾರಣಗಳಿಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಸರನ್ನು ಸೇರಿಸಲು, ಹೆಸರನ್ನು ಕೈಬಿಡಲು ಅಥವಾ ಗುರುತಿನ ಚೀಟಿಯಲ್ಲಿ ಯಾವುದೇ ರೀತಿಯ ತಪ್ಪುಗಳಿದ್ದರೆ ಅವುಗಳನ್ನು ಸರಿಪಡಿಸಲು ಅರ್ಜಿ ಸಲ್ಲಿಸಿ ಮನವಿ ಮಾಡಿಕೊಳ್ಳಲು ಅವಕಾಶವಿದೆ.
ಏನೇ ಆದರೂ ಮತದಾರರ ಹೆಸರು ತಾನಾಗಿಯೇ ಅಳಿಸಿ ಹೋಗುವುದಿಲ್ಲ. ಪ್ರತಿ ಅರ್ಜಿಯನ್ನೂ ಕೂಡ ಪರಿಶೀಲನೆಗೆ ಒಳಪಡಿಸಲಾಗುವುದು. ಮತದಾರರ ಹೆಸರು ಅಳಿಸಿ ಹಾಕಬೇಕು ಎಂದಾದಲ್ಲಿ ಕಾನೂನು ಪ್ರಕಾರ ಮೊದಲು ಅರ್ಜಿದಾರರಿಗೆ ನೋಟಿಸ್ ನೀಡಿ, ಪ್ರತಿಕ್ರಿಯೆ ಪಡೆಯಲಾಗುತ್ತದೆ. ಸ್ಪಷ್ಟವಾಗಿ ಹೇಳಬೇಕೆಂದರೆ ಅರ್ಜಿಯನ್ನು ಮತಗಟ್ಟೆ ಅಧಿಕಾರಿ(ಬಿಎಲ್ಒ) ಮೊದಲು ಸ್ವೀಕರಿಸುತ್ತಾರೆ. ಆ ಬಳಿಕ ಅರ್ಜಿದಾರರು ತಮಗೆ ಪರಿಚಿತರಿದ್ದಾರೆಯೇ, ಅವರು ಅಲ್ಲಿಯೇ ವಾಸಿಸುತ್ತಿದ್ದಾರೆಯೇ, ಇಲ್ಲವೇ ಎಂದೆಲ್ಲಾ ಮಾಹಿತಿ ಪರಿಶೀಲಿಸುತ್ತಾರೆ. ಒಂದು ವೇಳೆ ಅರ್ಜಿಯು ಸರಿಯಾಗಿಲ್ಲ ಎಂದಾದಲ್ಲಿ ತಮ್ಮ ಮೇಲಿನ ಅಧಿಕಾರಿ ಗಮನಕ್ಕೆ ತರುತ್ತಾರೆ. ಆಳಂದ ಪ್ರಕರಣದಲ್ಲೂ ಎಲ್ಲಾ ಅರ್ಜಿಗಳನ್ನು ಪರಿಶೀಲಿಸಿ ಕೇವಲ 24 ಅರ್ಜಿಗಳ ಮತದಾರರ ಹೆಸರನ್ನು ಮಾತ್ರ ಅಳಿಸಿ ಹಾಕಲಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಮಧ್ಯವರ್ತಿಗಳಾಗಿ ಮೂಗು ತೂರಿಸಿದ ಇತರರ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಚುನಾವಣಾ ಆಯೋಗದ ಅಧಿಕಾರಿಗಳು ರಾಜ್ಯ ಪೊಲೀಸ್ ಅಧಿಕಾರಿಗಳೊಂದಿಗೆ ನಿರಂತರ ಸಭೆಗಳನ್ನು ನಡೆಸಿ ಸಮಜಾಯಿಷಿ ನೀಡಿದ್ದಾರೆ. ಈ ವೇಳೆ ಏನೆಲ್ಲಾ ದಾಖಲೆಗಳು ಬೇಕಾಗುತ್ತದೆಯೋ, ಅಂತಹ ಎಲ್ಲಾ ದಾಖಲೆಗಳನ್ನೂ ಪೊಲೀಸರಿಗೆ 2023ರಲ್ಲೇ ನೀಡಿದ್ದಾರೆ. ಈ ಕುರಿತು ಕಳೆದ ಸೆ.1ರಂದು ಕೂಡ ಹೆಚ್ಚುವರಿ ಮಾಹಿತಿಯನ್ನು ಆಯೋಗದಿಂದ ನೀಡಲಾಗಿದೆ. ತನಿಖೆಗೆ ಅಗತ್ಯವಾದ ಎಲ್ಲಾ ರೀತಿಯ ಮಾಹಿತಿಯನ್ನು ಆಯೋಗ ಒದಗಿಸಲಿದೆ. ಆದರೆ ಸೆ.1ರಂದು ಕಳುಹಿಸಲಾದ ಪತ್ರಕ್ಕೆ ತಕ್ಷಣ ಪ್ರತಿಕ್ರಿಯಿಸದ ಕಾರಣ ಮಾಹಿತಿ ತಡೆಹಿಡಿಯಲಾಗುತ್ತಿದೆ ಎಂದು ಆರೋಪಿಸುತ್ತಿರುವುದು ತಪ್ಪು. ಇಂತಹ ಉತ್ಪ್ರೇಕ್ಷಿತ ಹೇಳಿಕೆ ಮತ್ತು ಅನಗತ್ಯ ಆರೋಪಗಳನ್ನು ಮಾಡುತ್ತಿರುವುದು ದುರದೃಷ್ಟಕರ ಎಂದಿದ್ದಾರೆ.
ಚುನಾವಣಾ ಆಯೋಗವು ಮತದಾರರ ಹೆಸರನ್ನು ಅಳಿಸಲು ಪ್ರಯತ್ನಿಸಿದ್ದು, ವಿಫಲವಾಗಿದೆ. ಎಫ್ಐಆರ್ ದಾಖಲಿಸಿ ಅಗತ್ಯ ದಾಖಲೆಗಳನ್ನು ಕೇಳುತ್ತಿದ್ದರೂ ಆಯೋಗವು ಮಾಹಿತಿ ನೀಡಲು ಹಿಂಜರಿಯುತ್ತಿದೆ. ಜನವರಿ 2024ರಿಂದ ಈವರೆಗೆ ಒಟ್ಟು 18 ಬಾರಿ ಸಿಐಡಿ ಅಧಿಕಾರಿಗಳು ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಎಲ್ಲಾ ಪ್ರಯತ್ನಗಳೂ ವಿಫಲವಾಗಿವೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು.
ಈ ಕುರಿತಂತೆಯೂ ಪ್ರತಿಕ್ರಿಯಿಸಿದ ಮಾಜಿ ಆಯುಕ್ತರು, ಅನಗತ್ಯ ಆರೋಪಗಳನ್ನು ಮಾಡುವುದು ಬೇಡ. ಚುನಾವಣಾ ಆಯೋಗವು ಸಹಕರಿಸದಿದ್ದರೆ, ಅವರು ಮೊದಲ ಹಂತದಲ್ಲಿ ಮಾಹಿತಿ ನೀಡುತ್ತಿರಲಿಲ್ಲ. ವಾಸ್ತವವಾಗಿ, ಪ್ರಕರಣ ದಾಖಲಾಗುವಾಗ ಕೇಳಿದ ಮಾಹಿತಿಯನ್ನು 2023ರಲ್ಲಿ ತಕ್ಷಣವೇ ಒದಗಿಸಲಾಯಿತು ಎಂದಿದ್ದಾರೆ.
ಆಯೋಗವು ಯಾವುದೇ ಹೆಚ್ಚಿನ ವಿವರಗಳನ್ನು ನೀಡಲು ಹಿಂಜರಿಯುವುದಿಲ್ಲ. ಆದರೆ ಇಂದೇ ಅರ್ಜಿ ಸಲ್ಲಿಸಿ, ನಾಳೆಯೇ ಮಾಹಿತಿ ಬೇಕು ಎಂದರೆ ಸಾಧ್ಯವಾಗುವುದಿಲ್ಲ. ಈ ಕಾರಣಕ್ಕೆ ಆಯೋಗವನ್ನು ದೂರುವುದು ತರವಲ್ಲ. ಆಯೋಗದ ವಿರುದ್ಧ ವಿನಾಃ ಕಾರಣ ಆರೋಪ ಮಾಡುವುದು ಇತ್ತೀಚೆಗೆ ಪ್ರವೃತ್ತಿಯಾಗಿ ಬೆಳೆದಿದೆ. ರಾಹುಲ್ ಹೇಳಿಕೆಯಂತೆ 18 ಬಾರಿ ಮನವಿ ಸಲ್ಲಿಸಿರುವುದು ನಿಜ. ಆದರೆ ಕಳೆದ ಸೆ.1ರ ಮನವಿಯನ್ನು ಹೊರತುಪಡಿಸಿ ಉಳಿದೆಲ್ಲಾ ಅರ್ಜಿಗಳಿಗೆ ಮಾಹಿತಿ ಒದಗಿಸಲಾಗಿದೆ. ಚುನಾವಣಾ ಆಯೋಗವು ಮಾಹಿತಿ ನೀಡುತ್ತಿಲ್ಲ ಎಂಬ ಆರೋಪವು ಜನರ ಹಾದಿ ತಪ್ಪಿಸುವ ತಂತ್ರವಾಗಿದೆ. ಸೆ.1ರ ಅರ್ಜಿಗೂ ಕೂಡ ಆಯೋಗವು ಉತ್ತರ ನೀಡಲಿದೆ. ಒಂದು ವೇಳೆ ಉತ್ತರಿಸಲು ಸಾಧ್ಯವಿಲ್ಲ ಎಂದಾದಲ್ಲಿ ಅದಕ್ಕೆ ಏನು ಕಾರಣ ಎಂಬ ಪ್ರತಿಕ್ರಿಯೆಯನ್ನೂ ಕೂಡ ನೀಡಲಾಗುತ್ತದೆ ಎಂದಿದ್ದಾರೆ.