ಒಂದು ರಾಷ್ಟ್ರ,ಒಂದು ಚುನಾವಣೆ| ಕೋವಿಂದ್ ಸಮಿತಿ ವರದಿಗೆ ಮೋದಿ ಸಂಪುಟ ಅನುಮೋದನೆ
ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳ ಜತೆ ನಗರ ಸಂಸ್ಥೆಗಳು ಮತ್ತು ಪಂಚಾಯತ್ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸುವ ಸಂಬಂಧ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅಧ್ಯಕ್ಷತೆ ಸಮಿತಿ 'ಒಂದು ರಾಷ್ಟ್ರ, ಒಂದು ಚುನಾವಣೆ' ಸಂಬಂಧ ನೀಡಿದ ವರದಿಗೆ ಕೇಂದ್ರ ಸಚಿವ ಸಂಪುಟ ಬುಧವಾರ (ಸೆಪ್ಟೆಂಬರ್ 18) ಅನುಮೋದನೆ ನೀಡಿದೆ. ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಸೂದೆಯನ್ನು ಮಂಡಿಸಲಾಗುತ್ತದೆ.
ದೊಡ್ಡ ಪ್ರಶ್ನೆಯೆಂದರೆ: ಈ ಯೋಜನೆ ಕಾರ್ಯಸಾಧ್ಯವೇ?
ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದ ಸಮಿತಿಯ ಶಿಫಾರಸುಗಳನ್ನು ಆಧರಿಸಿ, ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಏಕಕಾಲ ದಲ್ಲಿ ಚುನಾವಣೆ ನಡೆಸಲು ಸಮಯ ನಿಗದಿ ಪಡಿಸಿಲ್ಲ ಎಂದು ಕೇಂದ್ರ ಮಾಹಿತಿ-ಪ್ರಸಾರ ಸಚಿವ ಅಶ್ವನಿ ವೈಷ್ಣವ್ ಹೇಳಿದ್ದಾರೆ.
ʻಒಮ್ಮೆಲೆ ಚುನಾವಣೆಗಳನ್ನು ನಡೆಸುವ ಕುರಿತು ರಾಷ್ಟ್ರವ್ಯಾಪಿ ಸಮಾಲೋಚನೆಗಳನ್ನು ನಡೆಸಲಾಗುವುದು. ಸಮಾಲೋಚನೆ ಪೂರ್ಣಗೊಂ ಡ ಮತ್ತು ಸಂವಿಧಾನಕ್ಕೆ ಅಗತ್ಯ ತಿದ್ದುಪಡಿಗಳನ್ನು ಮಾಡಿದ ನಂತರ ದಿನಾಂಕ ನಿಗದಿಪಡಿಸಲಾಗುತ್ತದೆ. ಅನುಷ್ಠಾನವನ್ನು 2 ಹಂತಗಳಲ್ಲಿ ಮಾಡಲಾಗುತ್ತದೆ; ಮೊದಲಿಗೆ, ಲೋಕಸಭೆ ಚುನಾವಣೆಯನ್ನು ಎಲ್ಲಾ ರಾಜ್ಯಗಳ ಅಸೆಂಬ್ಲಿಗಳ ಚುನಾವಣೆಗಳೊಂದಿಗೆ ಮತ್ತು ಎರಡನೇ ಹಂತದಲ್ಲಿ 100 ದಿನಗಳ ನಂತರ, ದೇಶದ ಎಲ್ಲ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಒಮ್ಮೆಲೇ ನಡೆಸಲಾಗುವುದು ಎಂದು ವೈಷ್ಣವ್ ಹೇಳಿದರು.
ಸ್ವೀಕಾರಾರ್ಹವಲ್ಲ ಎಂದ ಕಾಂಗ್ರೆಸ್
ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಏಕಕಾಲಕ್ಕೆ ಚುನಾವಣೆ ಪ್ರಾಯೋಗಿಕವಲ್ಲ; ಆದ್ದರಿಂದ ಸಂಪೂರ್ಣ ಸ್ವೀಕಾರಾರ್ಹವಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ತಿಂಗಳು ಮೂರನೇ ಅವಧಿಯ ಮೊದಲ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ʻಒಂದು ರಾಷ್ಟ್ರ, ಒಂದು ಚುನಾವಣೆʼ ಪರ ಮಾತನ್ನಾಡಿದ್ದರು. ಆಗಾಗ ಚುನಾವಣೆಗಳಿಂದ ದೇಶದ ಪ್ರಗತಿಗೆ ಅಡೆತಡೆ ಸೃಷ್ಟಿಯಾಗುತ್ತಿದೆ. ಸಂಪನ್ಮೂಲಗಳು ಮತ್ತು ಹಣದ ವ್ಯರ್ಥಕ್ಕೆ ಕಾರಣವಾಗುತ್ತದೆ ಎಂದಿದ್ದರು. ಆದರೆ, ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳು ಈ ಕಲ್ಪನೆಯಿಂದ ಅಸಮಾಧಾನಗೊಂಡಿವೆ. ಇದು ಪ್ರಾಯೋಗಿಕವಲ್ಲ ಎಂದಿವೆ. ಸರ್ಕಾರದ ಕ್ರಮವನ್ನು ವಿರೋಧಿಸುವವರು ತಮ್ಮದೇ ಆದ ವಾದ ಮಂಡಿಸಿದ್ದಾರೆ.